ADVERTISEMENT

ಮುರುಘಾ ಶರಣರ ವಿರುದ್ಧದ ಪೋಕ್ಸೊ ಪ್ರಕರಣದ ಹಿಂದೆ ವ್ಯವಸ್ಥಿತ ಷಡ್ಯಂತ್ರ: ನ್ಯಾಯಾಲಯ

ಶಿವಮೂರ್ತಿ ಶರಣರ ವಿರುದ್ಧ ದಾಖಲಾಗಿದ್ದ ಪ್ರಕರಣ; 154 ಪುಟಗಳ ಆದೇಶದಲ್ಲಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 18:25 IST
Last Updated 2 ಡಿಸೆಂಬರ್ 2025, 18:25 IST
ಶಿವಮೂರ್ತಿ ಮುರುಘಾ ಶರಣರು
ಶಿವಮೂರ್ತಿ ಮುರುಘಾ ಶರಣರು   

ಚಿತ್ರದುರ್ಗ: ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾಗಿದ್ದ ಪೋಕ್ಸೊ ಮೊದಲ ಪ್ರಕರಣದ ಹಿಂದಿರುವುದು ವ್ಯವಸ್ಥಿತ ಷಡ್ಯಂತ್ರ, ಹಳೆಯ ದ್ವೇಷ, ಪಿತೂರಿ, ಆಸ್ತಿ ವ್ಯಾಜ್ಯ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಶರಣರ ವಿರುದ್ಧ ಮೈಸೂರಿನ ನಜರ್‌ಬಾದ್‌ ಪೊಲೀಸ್‌ ಠಾಣೆಯಲ್ಲಿ 2022ರ ಆ. 26ರಂದು ದಾಖಲಾಗಿದ್ದ ಮೊದಲ ಪ್ರಕರಣಕ್ಕೆ ಸಂಬಂಧಿಸಿದ ಒಟ್ಟು ‌154 ಪುಟಗಳ ಆದೇಶದ ಪ್ರತಿಯಲ್ಲಿ ಈ ವಿಷಯ ಉಲ್ಲೇಖವಾಗಿದೆ. ಪ್ರಮುಖ ಆರೋಪಿಗಳಾಗಿದ್ದ ಶಿವಮೂರ್ತಿ ಮುರುಘಾ ಶರಣರು, ಮಠದ ವ್ಯವಸ್ಥಾಪಕ ಪರಮಶಿವಯ್ಯ ಹಾಗೂ ಮಠದ ಹಾಸ್ಟೆಲ್‌ನ ಮಹಿಳಾ ವಾರ್ಡನ್‌ ರಶ್ಮಿ ಅವರನ್ನು ದೋಷಮುಕ್ತಗೊಳಿಸಲಾಗಿದೆ.

‘ಸಂತ್ರಸ್ತೆಯರ ಸಾಕ್ಷ್ಯ ಅಸಮಂಜಸ, ವಿಶ್ವಾಸಾರ್ಹವಲ್ಲ’ ಎಂದು ಆದೇಶದಲ್ಲಿ ಉಲ್ಲೇಖಿಸಿದೆ. ಸಂತ್ರಸ್ತೆಯರು ಪರಿಹಾರಕ್ಕೂ ಅರ್ಹರಲ್ಲ ಎಂದೂ ತಿಳಿಸಲಾಗಿದೆ. ವೈದ್ಯಕೀಯ ತಪಾಸಣಾ ವರದಿಯಲ್ಲೂ ಸಂತ್ರಸ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಕುರಿತು ಪುರಾವೆಗಳಿಲ್ಲ. ಅನ್ಯ ರಾಜ್ಯಗಳ ಪೋಕ್ಸೊ ಪ್ರಕರಣಗಳನ್ನು ಉಲ್ಲೇಖಿಸಿ ‘ಸಾಕ್ಷ್ಯಗಳು ವಿಶ್ವಾಸಾರ್ಹವಲ್ಲ’ ಎಂದು ನವೆಂಬರ್‌ 26ರಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶ ಗಂಗಾಧರಪ್ಪ ಹಡಪದ ಅವರು ಆದೇಶದಲ್ಲಿ ಅಭಿಪ್ರಾಯಪಟ್ಟಿದ್ದಾರೆ. 

ADVERTISEMENT

ಬಿಎನ್ಎಸ್‌ ಸೆಕ್ಷನ್‌ 376 (2) (ಎನ್‌), 376 (3), 323, 504, 506 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಸೆಕ್ಷನ್‌ 5 (1), 6 ಮತ್ತು 17ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಂದ ಮೂವರು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಆರೋಪಿಗಳ ಜಾಮೀನು ಬಾಂಡ್ ಮತ್ತು ಶ್ಯೂರಿಟಿ ಬಾಂಡ್‌ಗಳನ್ನು ರದ್ದುಗೊಳಿಸಿದೆ.

ಸಂತ್ರಸ್ತೆಯರು ತನಿಖಾ ಹಂತದಲ್ಲಿ ವೈದ್ಯರು, ನ್ಯಾಯಾಧೀಶರ ಮುಂದೆ ನುಡಿದ ಸಾಕ್ಷ್ಯಗಳು ತಾಳೆಯಾಗುತ್ತಿಲ್ಲ. ಜತೆಗೆ ಸ್ವಾಮೀಜಿ ಹಾಗೂ ಮಠದ ಆಡಳಿತಾಧಿಕಾರಿಯಾಗಿದ್ದ ಮಾಜಿ ಶಾಸಕ ಎಸ್‌.ಕೆ. ಬಸವರಾಜನ್‌, ಪತ್ನಿ ಸೌಭಾಗ್ಯಾ ನಡುವೆ 15 ವರ್ಷಗಳಿಂದ ನಡೆಯುತ್ತಿದ್ದ ಆಸ್ತಿ ವ್ಯಾಜ್ಯ, ವೈಷಮ್ಯವೇ ಪ್ರಕರಣದ ಹಿಂದಿರುವ ಕಾರಣ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ಮಠದಲ್ಲಿ 300 ಮಕ್ಕಳಿದ್ದು ಈ ಪೈಕಿ 13 ಮಕ್ಕಳ ವಿಚಾರಣೆ ನಡೆದಿದೆ. ನಾಲ್ವರ ಸಾಕ್ಷ್ಯ ಪಡೆಯಲಾಗಿದೆ. ಅವರಲ್ಲಿ ಯಾರೂ ಸಂತ್ರಸ್ತೆಯರ ಪರ ಸಾಕ್ಷ್ಯ ಹೇಳಿಲ್ಲ. ಮಠದಲ್ಲಿ ಸಿ.ಸಿ.ಟಿ.ವಿ ಇದ್ದು, ಪೊಲೀಸರು ಅದರ ದೃಶ್ಯ ಸಂಗ್ರಹಿಸಿಲ್ಲ’ ಎಂದು ಕೋರ್ಟ್‌ ಆಕ್ಷೇಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.