ಚಿತ್ರದುರ್ಗ: ‘ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಪೋಕ್ಸೊ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿಯಾದುದು. ಈಗಿನ ಪರಿಸ್ಥಿತಿ ಅವಲೋಕನ ಮಾಡಿದರೆ ಮುಂದೆಯೂ ಪ್ರಕರಣಗಳ ಸಂಖ್ಯೆ ಹೆಚ್ಚಲಿದೆ. ಅಧಿಕಾರಿಗಳು ಪ್ರಕರಣಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸಿವಿಲ್ ನ್ಯಾಯಾಧೀಶ ರೋಣ ವಾಸುದೇವ್ ಸೂಚಿಸಿದರು.
‘2023ರಲ್ಲಿ 131 ಪೋಕ್ಸೊ ಪ್ರಕರಣ, 2024ರಲ್ಲಿ 150 ಪ್ರಕರಣಗಳು ದಾಖಲಾಗಿದ್ದವು. 2025 ಸೆಪ್ಟೆಂಬರ್ ಅಂತ್ಯಕ್ಕೆ 122 ಪ್ರಕರಣಗಳು ದಾಖಲಾಗಿವೆ. ಹೆಚ್ಚುತ್ತಿರುವ ಅಂಕಿ– ಅಂಶ ಗಮನಿಸಿದರೆ ಮುಂದೆ ಪ್ರಕರಣಗಳ ಸಂಖ್ಯೆ ತೀವ್ರಗೊಳ್ಳಲಿವೆ. ಪೋಕ್ಸೊ ಕಾಯ್ದೆ ಕುರಿತು ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ, ವಿದ್ಯಾರ್ಥಿಗಳಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದು ಮಕ್ಕಳ ರಕ್ಷಣಾಧಿಕಾರಿ ಪ್ರೇಮಮೂರ್ತಿ ಅವರಿಗೆ ಸೂಚಿಸಿದರು.
‘ಪದೇ ಪದೇ ಬಾಲಕಾರ್ಮಿಕರು ಪತ್ತೆಯಾಗುವ ಸ್ಥಳಗಳ ಬಗ್ಗೆ ಪಟ್ಟಿ ಮಾಡಬೇಕು. ಮಾಲೀಕರ ಉದ್ದಿಮೆ ಪರವಾನಗಿ ರದ್ದು ಮಾಡಲು ಸ್ಥಳೀಯ ಸಂಸ್ಥೆಗಳಿಗೆ ಕಾರ್ಮಿಕ ಇಲಾಖೆಯಿಂದ ಶಿಫಾರಸು ಮಾಡಬೇಕು. ದಂಡ ವಸೂಲಿಯ ಜೊತೆಗೆ ಕಠಿಣ ಶಿಕ್ಷೆಯಾದರೆ ಮಾತ್ರ ಬಾಲಕಾರ್ಮಿರನ್ನು ನೇಮಿಸಿಕೊಳ್ಳವ ಪ್ರವೃತ್ತಿ ಕಡಿಮೆಯಾಗುವುದು. ಪ್ರಸಕ್ತ ವರ್ಷದಲ್ಲಿ 5 ಬಾಲಕಾರ್ಮಿಕ ಪ್ರಕರಣಗಳು ದಾಖಲಾಗಿವೆ. ಕಾರ್ಮಿಕ ನಿರೀಕ್ಷಕರು ತಪಾಸಣೆಗೆ ಆದ್ಯತೆ ನೀಡಬೇಕು. ಪತ್ತೆಯಾದ ಬಾಲ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಿ ಮುಖ್ಯವಾಹಿನಿಗೆ ತರಬೇಕು’ ಎಂದರು.
‘ಬಾಲ ಗರ್ಭಿಣಿಯರ ಸಂಖ್ಯೆ ಇಳಿಮುಖವಾಗುತ್ತಿರುವುದು ಆಶಾದಾಯಕ ಸಂಗತಿ. ಖಾಸಗಿ ಆಸ್ಪತ್ರೆ ಹಾಗೂ ವೈದ್ಯರಿಗೆ ಬಾಲಗರ್ಭಿಣಿಯರು ಕಂಡು ಬಂದ ತಕ್ಷಣವೇ ವರದಿ ಮಾಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಖಾಸಗಿ ವೈದ್ಯರು ಬಾಲಗರ್ಭಿಣಿಯರಿಗೆ ಸಮರ್ಪಕ ಚಿಕಿತ್ಸೆ ನೀಡಬೇಕು. ಬಾಲ ಗರ್ಭಿಣಿಯರು ಪತ್ತೆಯಾದ ಬಗ್ಗೆ ವೈದ್ಯರು ಗಮನಕ್ಕೆ ತರದೇ ಹೋದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
ಜಿಲ್ಲೆಯಲ್ಲಿ 2022– 23ನೇ ಸಾಲಿನಲ್ಲಿ 867, 2023– 24ರಲ್ಲಿ 660, 2024– 25ರಲ್ಲಿ 279 ಹಾಗೂ ಪ್ರಸಕ್ತ ವರ್ಷದಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ 69 ಬಾಲಗರ್ಭಿಣಿ ಪ್ರಕರಣ ಪತ್ತೆಯಾಗಿವೆ ಎಂದು ’ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅಭಿನವ್ ಮಾಹಿತಿ ನೀಡಿದರು.
‘ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ನೇಮಕವಾದ ಸದಸ್ಯರು ಕಡ್ಡಾಯವಾಗಿ ಸಭೆಗಳಲ್ಲಿ ಪಾಲ್ಗೊಳ್ಳಬೇಕು. ಸದಸ್ಯರ ಗೈರು ಹಾಜರಿ ಕಂಡುಬಂದರೆ ಅಂಥವರನ್ನು ಸಮಿತಿಯಿಂದ ಕೈ ಬಿಡಲು ಶಿಫಾರಸು ಮಾಡಲಾಗುವುದು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಪ್ರತಿ ಬಾರಿ ನಡೆಯುವ ಸಭೆಯ ವಿವರಗಳನ್ನು ಸಿಸಿಟಿವಿ ವಿಡಿಯೊ ಸಹಿತ ಜಿಲ್ಲಾ ನ್ಯಾಯಾಲಯಕ್ಕೆ ಕಳುಹಿಸಿಕೊಡಬೇಕು. ಕಲ್ಯಾಣ ಸಮಿತಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಬೇಕು’ ಎಂದು ಸೂಚಿಸಿದರು.
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಜ್ವಲಾ ವೀರಣ್ಣ ಸಿದ್ದಣ್ಣವರ್, ಪ್ರಧಾನ ಹಿರಿಯ ನ್ಯಾಯಾಧೀಶೆ ಟಿ.ಮಮತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಜಿಲ್ಲಾ ಕಾರಾಗೃಹ ಅಧೀಕ್ಷಕ ಸಿದ್ದರಾಮಪ್ಪ ಪಾಟೀಲ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರೇಣುಪ್ರಸಾದ್, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ವಿಜಯ್‍ಕುಮಾರ್ ಇದ್ದರು.
‘ಕಾನೂನಿನ ಸಂರಕ್ಷಣೆಯಲ್ಲಿರುವ ಬಾಲಕರ ಸಂಖ್ಯೆಗೆ ಅನುಗುಣವಾಗಿ ಸದ್ಯ ನಗರದಲ್ಲಿ ಬಾಡಿಗೆ ಕಟ್ಟಡಲ್ಲಿರುವ ಬಾಲಕರ ಸರ್ಕಾರಿ ವೀಕ್ಷಣಾಲಯವು ಸೂಕ್ತ ಸೌಕರ್ಯಗಳಿಂದ ವಂಚಿತವಾಗಿದೆ. ಹೀಗಾಗಿ ತಿಂಗಳ ಒಳಗಾಗಿ ಸುಸಜ್ಜಿತವಾಗಿರುವ ಬೇರೆ ಕಟ್ಟಡಕ್ಕೆ ಬಾಲಕರ ಸರ್ಕಾರಿ ವೀಕ್ಷಣಾಲಯವನ್ನು ಸ್ಥಳಾಂತರಿಸಬೇಕು’ ಎಂದು ರೋಣ ವಾಸುದೇವ ಗಡುವು ನೀಡಿದರು. ‘ನಿಯಮಾನುಸಾರ ವೀಕ್ಷಣಾಲಯದಲ್ಲಿ ಸುರಕ್ಷಿತ ಕ್ರಮಗಳನ್ನು ಪಾಲಿಸಬೇಕು. ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು. ಉಚಿತವಾಗಿ ಕಾನೂನಿನ ಸೇವೆ ನೀಡಬೇಕು. ಮಕ್ಕಳನ್ನು ಸುಧಾರಿಸಿ ಉತ್ತಮ ನಾಗರಿಕರನ್ನಾಗಿ ಮಾಡಲು ಪ್ರಯತ್ನ ಪಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.