ಸಾಂದರ್ಭಿಕ ಚಿತ್ರ
ಹಿರಿಯೂರು: ಲೆಫ್ಟ್–ರೈಟ್, ಲೆಫ್ಟ್ ರೈಟ್, ಆಗೇ ಚಲ್, ಪೀಚೇ ಮೂಡ್, ದೈನೇ ದೇಖ್, ಬಾಹೇ ದೇಖ್.. ಇಂತಹ ಸೂಚನೆಗಳನ್ನು ಪೊಲೀಸರ ಪಥಸಂಚಲನದಲ್ಲಿ ಕೇಳುವುದು ಸಹಜ. ಆದರೆ, ಹಿರಿಯೂರು ತಾಲ್ಲೂಕಿನ ಐಮಂಗಲ ಗ್ರಾಮದಲ್ಲಿರುವ ಪೊಲೀಸ್ ತರಬೇತಿ ಶಾಲೆಯಲ್ಲಿ ಪಥ ಸಂಚಲನಕ್ಕೆ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಲನಚಿತ್ರದ ‘ಕನ್ನಡ ನಾಡಿನ ವೀರ ರಮಣಿಯ’ ಹಾಡನ್ನು ಬಳಸುವ ಮೂಲಕ ವಿನೂತನ ಪ್ರಯತ್ನ ನಡೆಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದೆ.
‘ಕನ್ನಡ ನಾಡಿನ ವೀರರಮಣಿಯ, ಗಂಡು ಭೂಮಿಯ ವೀರನಾರಿಯ’ ಎಡಬಲ, ಎಡಬಲ ಎಂಬ ಹಾಡಿಗೆ ಪ್ರಶಿಕ್ಷಣಾರ್ಥಿಗಳು ಹೆಜ್ಜೆ ಹಾಕುವುದರೊಂದಿಗೆ ಪಥಸಂಚಲನ ಸಾಗುತ್ತದೆ. ಚಿತ್ರದ ಹಾಡಿಗೆ ಎಡಬಲ, ಎಡಬಲ ಪದಗಳನ್ನು ಸೇರಿಸಿಕೊಂಡು ಪ್ರಶಿಕ್ಷಣಾರ್ಥಿಗಳು ಪಥಸಂಚಲನ ಮಾಡುತ್ತಿದ್ದರೆ ಕೆಲವು ಕ್ಷಣವಾದರು ನಿಂತು ನೋಡಬೇಕೆನಿಸುತ್ತದೆ.
‘ಲೆಫ್ಟ್ ರೈಟ್, ಲೆಫ್ಟ್ ರೈಟ್ ಪದಗಳ ಪಥ ಸಂಚಲನ ಕೈಬಿಟ್ಟಿಲ್ಲ. ನಾಗರಹಾವು ಚಿತ್ರದ ಹಾಡನ್ನು ಏಕೆ ಪಥ ಸಂಚಲನಕ್ಕೆ ಬಳಸಿಕೊಳ್ಳಬಾರದು ಎಂದು ಆಲೋಚಿಸಿ, ಚಿಕ್ಕದೊಂದು ಪ್ರಯೋಗ ಮಾಡಿದ್ದೇವೆ. ಇದರಿಂದ ಹೊರಗಿನಿಂದ ಬಂದಿರುವ ಪ್ರಶಿಕ್ಷಣಾರ್ಥಿಗಳಿಗೆ ಚಿತ್ರದುರ್ಗ ಜಿಲ್ಲೆಯ ಇತಿಹಾಸದ ಪರಿಚಯ ಮಾಡಿಕೊಟ್ಟಂತೆಯೂ ಆಗುತ್ತದೆ’ ಎನ್ನುತ್ತಾರೆ ಶಾಲೆಯ ಪ್ರಾಂಶುಪಾಲ ಎನ್. ಶ್ರೀನಿವಾಸ್.
ದುರ್ಗಾಸ್ತಮಾನ ಪ್ರೇರಣೆ:
‘ತ.ರಾ.ಸು. ಅವರ ದುರ್ಗಾಸ್ತಮಾನ ಕಾದಂಬರಿ ಓದಿದ ನಂತರ ದುರ್ಗದ ಕೋಟೆಯನ್ನು ಕನಿಷ್ಟ 10 ಬಾರಿ ಹತ್ತಿ ಇಳಿದಿದ್ದಾರೆ. ದುರ್ಗದ ಇತಿಹಾಸ ಓದುವುದು ರೋಮಾಂಚನ ಉಂಟು ಮಾಡುತ್ತದೆ. ಹೀಗಾಗಿ ತರಬೇತಿ ಶಾಲೆಯಲ್ಲಿ ಒನಕೆ ಓಬವ್ವನ ಕುರಿತು ಇರುವ ಹಾಡನ್ನು ಪಥ ಸಂಚಲನಕ್ಕೆ ಬಳಸಿಕೊಳ್ಳುವ ಆಲೋಚನೆ ಬಂತು’ ಎಂದು ಎನ್. ಶ್ರೀನಿವಾಸ್. ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.