ಚಿತ್ರದುರ್ಗ: ‘ಜನಸಂಖ್ಯೆ ಹೆಚ್ಚಾದಂತೆ ಬಡತನ, ಅರಣ್ಯನಾಶ, ಮೂಲ ಸೌಕರ್ಯಗಳ ಕೊರತೆ, ಆಹಾರ, ಕುಡಿಯುವ ನೀರು ಕೊರತೆಯಾಗುವ ಸಾಧ್ಯತೆ ಇದೆ. ವಾಯುಮಾಲಿನ್ಯ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳೂ ತಲೆದೋರಬಹುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಹೇಳಿದರು.
ಇಲ್ಲಿನ ಬುದ್ಧನಗರ ಆರೋಗ್ಯ ಕೇಂದ್ರ ಆವರಣದಲ್ಲಿ ಶುಕ್ರವಾರ ವಿಶ್ವ ಜನಸಂಖ್ಯಾ ದಿನಾಚರಣೆಯ ಅಂಗವಾಗಿ ನಡೆದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
‘ನಮ್ಮ ದೇಶ ಹೆಚ್ಚು ಜನಸಂಖ್ಯೆ ಹೊಂದಿದ ದೇಶವಾಗಿ ಬೆಳೆಯುತ್ತಿದ್ದು, ಅಭಿವೃದ್ಧಿಯ ದೃಷ್ಟಿಯಿಂದ ಜನಸಂಖ್ಯಾ ಸ್ಥಿರತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಭೂಮಿಯ ಗಾತ್ರ ಇದ್ದಷ್ಟೇ ಇದೆ, ಆದರೆ ಜನಸಂಖ್ಯೆ ಮಿತಿಮೀರಿ ಬೆಳೆಯುತ್ತಿದೆ. ಜನಸಂಖ್ಯಾ ಸ್ಥಿರತೆ ಕಾಪಾಡಿಕೊಂಡು ಪರಿಸರ ಸಂರಕ್ಷಣೆಯ ಜೊತೆಗೆ ಪರಿಸರ ಮಾಲಿನ್ಯವಾಗದಂತೆ ಎಚ್ಚರಿಕೆ ವಹಿಸಬೇಕು. ಆ ಮೂಲಕ ಸಾಂಕ್ರಾಮಿಕ ರೋಗಗಳಿಗೆ ಕಡಿವಾಣ ಹಾಕಬೇಕು. ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಖಾ ಮಾತನಾಡಿ, ‘ಕರ್ನಾಟಕದಲ್ಲಿ ಫಲವತ್ತತೆ ದರ 1.7ರಷ್ಟಿದ್ದರೆ ಚಿತ್ರದುರ್ಗ ಜಿಲ್ಲೆಯಲ್ಲಿ 1.8ರಷ್ಟಿದೆ. ಕುಟುಂಬದಲ್ಲಿ ಎರಡಕ್ಕಿಂತ ಕಡಿಮೆ ಮಕ್ಕಳನ್ನುಹೊಂದಿದ್ದಾರೆ. ಜನಸಂಖ್ಯಾ ಸ್ಥಿರತೆ ಕಾಪಾಡಿಕೊಳ್ಳುವಂತೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಕುಟುಂಬ ಕಲ್ಯಾಣ ಶಾಶ್ವತ ವಿಧಾನಗಳಿಗಿಂತ ಆಧುನಿಕ ತಾತ್ಕಾಲಿಕ ವಿಧಾನಗಳ ಕಡೆ ಹೆಚ್ಚು ಒತ್ತು ಕೊಡಬೇಕಾಗಿದೆ. ಹೆಣ್ಣುಮಕ್ಕಳಿಗೆ ಮೂರು ತಿಂಗಳಿಗೊಮ್ಮೆ ಲಸಿಕೆ, ವಾರಕ್ಕೊಮ್ಮೆ ಛಾಯಾ ಮಾತ್ರೆ ನೀಡಬೇಕು. ಇವುಗಳ ಸದುಪಯೋಗ ಪಡಿಸಿಕೊಳ್ಳುವಂತೆ ಪ್ರಚಾರ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅಭಿನವ್ ಮಾತನಾಡಿ, ‘ಎರಡು ಮಕ್ಕಳನ್ನು ಹೊಂದಿದ ದಂಪತಿ ಕಾಪರ್– ಟಿ, 380–ಎ ಮೂಲಕ 10 ವರ್ಷಗಳ ತನಕ ಗರ್ಭಧಾರಣೆಯನ್ನು ತಡೆಯುವ ಆಧುನಿಕ ವಿಧಾನವನ್ನು ಅನುಸರಿಸಬಹುದು. ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಅಂತರ ಕಾಯ್ದುಕೊಳ್ಳಲು ಮಹಿಳೆಯರಿಗೆ ಹೆರಿಗೆಯ ನಂತರ ಪಿಪಿಐಯುಸಿಡಿ ಒಂದು ಉತ್ತಮ ವಿಧಾನವಾಗಿದೆ. ಇವುಗಳ ಸದುಪಯೋಗ ಮಾಡಿಕೊಂಡು ಜನಸಂಖ್ಯಾ ಸ್ಥಿರತೆಗೆ ಶ್ರಮಿಸಬೇಕಾಗಿದೆ’ ಎಂದರು.
ತಾಲ್ಲೂಕು ಅರೋಗ್ಯಾಧಿಕಾರಿ ಡಾ.ಬಿ.ವಿ ಗಿರೀಶ್ ಮಾತನಾಡಿ, ‘ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಜನಸಂಖ್ಯಾ ಸ್ಫೋಟದ ಬಗ್ಗೆ ಮತ್ತು ಜನಸಂಖ್ಯಾ ಸ್ಥಿರತೆ ಕಾಪಾಡುವ ಬಗ್ಗೆ ಯುವ ಪೀಳಿಗೆಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಹೇಳಿದರು.
ಜಾಗೃತಿ ಜಾಥಾದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ, ಬಿ.ಜಾನಕಿ ಅವರು, ‘ಚಿಕ್ಕ ಕುಟುಂಬ ಸುಖೀ ಕುಟುಂಬ, ಜನಸಂಖ್ಯಾ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ, ಅಪಾರ ಪರಿವಾರ ದೇಶಕ್ಕೆ ಬಲು ಭಾರ, ಮನೆಗೊಂದು ಮಗುವಿರಲಿ ಮನೆ ತುಂಬಾ ನಗುವಿರಲಿ, ಕುಟುಂಬ ಕಲ್ಯಾಣ ವಿಧಾನಗಳ ಬಳಸಿ ಜನಸಂಖ್ಯಾ ಸ್ಥಿರತೆ ಕಾಪಾಡಿ ಮುಂತಾದ ಘೋಷಣೆಗಳ ಬಗ್ಗೆ ಪ್ರಚಾರ ಮಾಡಿದರು.
ನಗರಸಭಾ ಸದಸ್ಯೆ ಶ್ರೀದೇವಿ ಚಕ್ರವರ್ತಿ, ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ.ಕಾಶಿ, ಡಾ.ನಾಗರಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೌರಮ್ಮ, ವೈದ್ಯಾಧಿಕಾರಿಗಳಾದ ಡಾ. ಸುರೇಂದ್ರ. ಡಾ. ಅಕ್ಷತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.