ADVERTISEMENT

ಗುಂಡಿಮಯ ರಸ್ತೆಯಲ್ಲಿ ಸಂಚಾರಕ್ಕೆ ಸಂಚಕಾರ

ನಾಯಿಗೆರೆ– ಎಸ್. ನೇರಲಕೆರೆವರೆಗಿನ 11 ಕಿ.ಮೀ ರಸ್ತೆಯಲ್ಲಿ ಗುಂಡಿಗಳ ಕಾರುಬಾರು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 4:33 IST
Last Updated 29 ಅಕ್ಟೋಬರ್ 2025, 4:33 IST
ಹೊಸದುರ್ಗದಿಂದ ಬೆಂಗಳೂರಿಗೆ ತೆರಳುವ ಅರಲಹಳ್ಳಿ ಗೇಟ್‌ನಿಂದ ಎಸ್. ನೇರಲಕೆರೆವರೆಗೂ ಇರುವ ಗುಂಡಿಮಯ ರಸ್ತೆ
ಹೊಸದುರ್ಗದಿಂದ ಬೆಂಗಳೂರಿಗೆ ತೆರಳುವ ಅರಲಹಳ್ಳಿ ಗೇಟ್‌ನಿಂದ ಎಸ್. ನೇರಲಕೆರೆವರೆಗೂ ಇರುವ ಗುಂಡಿಮಯ ರಸ್ತೆ   

ಹೊಸದುರ್ಗ: ಹೊಸದುರ್ಗದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ನಾಯಿಗೆರೆ ಮತ್ತು ಎಸ್. ನೇರಲಕೆರೆವರೆಗೂ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿ ಬಿದ್ದಿದ್ದು, ಮಳೆ ಬಂದಾಗ ನೀರು ತುಂಬುತ್ತವೆ. ಚಿಕ್ಕದಾಗಿದ್ದ ಗುಂಡಿಗಳು ನಿರಂತರ ಮಳೆಯಿಂದಾಗಿ ದೊಡ್ಡದಾಗಿವೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಹ ದುಃಸ್ಥಿತಿ ಎದುರಾಗಿದೆ.

ತಾಲ್ಲೂಕಿನ ಹಾಗಲಕೆರೆ ಮಧ್ಯದಿಂದ ಅರಲಹಳ್ಳಿ ಮಾರ್ಗವಾಗಿ ಬೆಂಗಳೂರಿಗೆ ಹೋಗುವ ರಸ್ತೆ 11 ಕಿ.ಮೀ.ವರೆಗೂ ಗುಂಡಿಗಳಿಂದ ತುಂಬಿದೆ. ಮಾಳಪ್ಪನಹಳ್ಳಿ ಗೇಟ್, ನಾಯಿಗೆರೆ, ಅರಲಹಳ್ಳಿ ಸೇರಿ ಸುತ್ತಲಿನ ಗ್ರಾಮಗಳ ಜನರು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ನಿತ್ಯ ನೂರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ. ದ್ವಿಚಕ್ರ ವಾಹನ ಸವಾರರಂತೂ ಗುಂಡಿಯಲ್ಲಿ ಉರುಳಿ ಬಿದ್ದಿದ್ದಾರೆ. ರಾತ್ರಿ ಲೆಕ್ಕವಿಲ್ಲದಷ್ಟು ಅಪಘಾತಗಳು ಸಂಭವಿಸುತ್ತಿವೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿಗೆ ಕ್ರಮ ಕೈಗೊಳ್ಳದೇ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.

ಮಳೆನೀರು ನಿಂತಾಗ ಗುಂಡಿಗಳ ಬಗ್ಗೆ ಗೊತ್ತಾಗದೆ ಅದೆಷ್ಟೋ ಬೈಕ್ ಸವಾರರು ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ. ಈ ರಸ್ತೆಯು ಭಾರಿ ವಾಹನಗಳ ಸಂಚಾರದಿಂದ ಸಂಪೂರ್ಣ ಹದಗೆಟ್ಟಿದೆ.

ADVERTISEMENT

‘ಈ ರಸ್ತೆಯಲ್ಲಿ ಬಹಳಷ್ಟು ಗುಂಡಿಗಳಿವೆ. ಮಳೆ ಬಂದಾಗ ನೀರು ತುಂಬುತ್ತದೆ. ಬಸ್ ಸವಾರರು ಕಷ್ಟ ಪಡುತ್ತಿದ್ದಾರೆ. ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಈ ಮಾರ್ಗದಲ್ಲಿ ಓಡಾಡಲು ಅಂಜುವಂತಾಗಿದೆ. ಶಾಲೆ, ಕಾಲೇಜು ವಿದ್ಯಾರ್ಥಿಗಳು ಬಸ್‌ಗಳಿಗಾಗಿ ಕಾಯುತ್ತಾ ನಿಂತರೆ, ಇತರೆ ವಾಹನಗಳು ಓಡಾಡುವಾಗ ಗುಂಡಿಯೊಳಗಿನ ನೀರು ಚಿಮ್ಮುತ್ತದೆ. ಸುಸಜ್ಜಿತ ರಸ್ತೆ ಮಾಡುವುದಿರಲಿ, ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕಾರ್ಯವಾದರೂ ಆಗಬೇಕು’ ಎನ್ನುತ್ತಾರೆ ಎಸ್. ನೇರಲಕೆರೆ ಗ್ರಾಮದ ರವಿ ಎನ್. 

ದೂಳಿನ ಸಮಸ್ಯೆ: ‘ಮಳೆ ಬಂದಾಗ ಗುಂಡಿಮಯ ರಸ್ತೆಯಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಅಡಚಣೆಯಾದರೆ, ಮಳೆ ನಿಂತಾಗ ದೂಳು ತುಂಬಿ ಸಂಚಾರಕ್ಕೆ ತೊಂದರೆಯಾಗುತ್ತದೆ. ಇದು ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸರ್ಕಾರ ರಸ್ತೆ ದುರಸ್ತಿ ಕಾರ್ಯ ನಡೆಸಬೇಕು’ ಎಂದು ಸ್ಥಳೀಯರು ಕೋರಿದರು.

ಈ ರಸ್ತೆಯಲ್ಲಿನ ಗುಂಡಿಗಳು ಹಲವು ತಿಂಗಳುಗಳಿಂದ ಹಾಗೆಯೇ ಇವೆ. ಮಳೆ ಕಡಿಮೆಯಾದರೂ ಸಂಬಂಧಪಟ್ಟವರು ದುರಸ್ತಿ ಕಾರ್ಯ ನಡೆಸದೆ, ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಇಲ್ಲಿನವರ ಅಳಲು.

ಹೊಸದುರ್ಗದ ಶ್ರೀರಾಂಪುರ ಹೋಬಳಿಯ ನಾಯಿಗೆರೆ ಸಮೀಪದ ರಸ್ತೆಯಲ್ಲಿ ಗುಂಡಿ
ಗುಂಡಿಮಯ ರಸ್ತೆಯಲ್ಲಿ ನಿಧಾನವಾಗಿ ಸಾಗುತ್ತಿರುವ ಬಸ್

ಮಳೆ ನಿಂತರೆ ಗುಂಡಿ ಮುಚ್ಚಲಾಗುವುದು

ಅರಲಹಳ್ಳಿ ಗೇಟ್‌ನಿಂದ ಎಸ್. ನೇರಲಕೆರೆವರೆಗೂ 11 ಕಿ.ಮೀ. ರಸ್ತೆ ಅಭಿವೃದ್ಧಿಗಾಗಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ₹ 25 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗುವುದು. ಮಳೆ ಕಡಿಮೆಯಾದ ಕೂಡಲೇ ಗುಂಡಿ ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುಲಾಗುವುದು ಮಂಜುನಾಥ್ ಬಿ ಎಇಇ ಲೋಕೋಪಯೋಗಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.