ADVERTISEMENT

ಚಿತ್ರದುರ್ಗ: ಹೆಣ್ಣುಮಕ್ಕಳ ದಿನ: ಕೋವಿಡ್‌ ಮುಂಜಾಗ್ರತಾ ಲಸಿಕಾ ಅಭಿಯಾನ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 6:16 IST
Last Updated 25 ಜನವರಿ 2023, 6:16 IST
ಚಿತ್ರದುರ್ಗ ತಾಲ್ಲೂಕಿನ ಜಿ.ಆರ್‌.ಹಳ್ಳಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಜ್ಞಾನಗಂಗೋತ್ರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಕೋವಿಡ್‌ ಮುಂಜಾಗ್ರತಾ ಲಸಿಕಾ ಅಭಿಯಾನ ಮತ್ತು ಮಾಹಿತಿ ಶಿಕ್ಷಣ ಸಂವಹನ’ದಲ್ಲಿ ಕೋವಿಡ್ ಮುಂಜಾಗ್ರತಾ ಲಸಿಕೆ ಪಡೆದ ವಿದ್ಯಾರ್ಥಿನಿ.
ಚಿತ್ರದುರ್ಗ ತಾಲ್ಲೂಕಿನ ಜಿ.ಆರ್‌.ಹಳ್ಳಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಜ್ಞಾನಗಂಗೋತ್ರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಕೋವಿಡ್‌ ಮುಂಜಾಗ್ರತಾ ಲಸಿಕಾ ಅಭಿಯಾನ ಮತ್ತು ಮಾಹಿತಿ ಶಿಕ್ಷಣ ಸಂವಹನ’ದಲ್ಲಿ ಕೋವಿಡ್ ಮುಂಜಾಗ್ರತಾ ಲಸಿಕೆ ಪಡೆದ ವಿದ್ಯಾರ್ಥಿನಿ.   

ಚಿತ್ರದುರ್ಗ: ಲಿಂಗ ಅಸಮಾನತೆ ಹೋಗಲಾಡಿಸಲು ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಹಾಗೂ ಪ್ರೋತ್ಸಾಹ ನೀಡಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಜಿ.ಆರ್‌.ಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ವಿಶ್ವನಾಥ ಹೇಳಿದರು.

ತಾಲ್ಲೂಕಿನ ಜಿ.ಆರ್‌.ಹಳ್ಳಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಜ್ಞಾನಗಂಗೋತ್ರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಪ್ರಯುಕ್ತ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ‘ಕೋವಿಡ್‌ ಮುಂಜಾಗ್ರತಾ ಲಸಿಕಾ ಅಭಿಯಾನ ಮತ್ತು ಮಾಹಿತಿ ಶಿಕ್ಷಣ ಸಂವಹನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದಿರಾ ಗಾಂಧಿಯವರು ವಿಶ್ವದ ಮೊದಲ ಮಹಿಳಾ ಪ್ರಧಾನಿಯಾದ ನೆನಪಿಗೆ ಪ್ರತಿ ವರ್ಷ ಜ. 24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಣೆ ಮಾಡಲಾಗುತ್ತದೆ. ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ’ ಎಂದರು.

ADVERTISEMENT

‘ಹಿಂದೆ ಸಮಾಜದಲ್ಲಿ ಹೆಣ್ಣುಮಕ್ಕಳನ್ನು ತಾರತಮ್ಯದಿಂದ ನೋಡಲಾಗುತ್ತಿತ್ತು. ಇಂದು ಸನ್ನಿವೇಶ ಬದಲಾಗಿದೆ. ಮಹಿಳೆಯರು ಸಬಲೀಕರಣವಾಗಿ ಪ್ರತಿಯೊಂದು ವೃತ್ತಿಯಲ್ಲೂ ಮುಂದೆ ಬಂದಿದ್ದಾರೆ’ ಎಂದು ಆರೋಗ್ಯ ಶಿಕ್ಷಣಾಧಿಕಾರಿ ಎನ್‌.ಎಸ್‌.ಮಂಜುನಾಥ ತಿಳಿಸಿದರು.

‘ಹೆಣ್ಣುಮಕ್ಕಳ ಸ್ವಾತಂತ್ರ್ಯ, ಆರೋಗ್ಯ ಮತ್ತು ಪೋಷಣೆಗೆ ಉತ್ತೇಜನ ನೀಡಲಾಗಿದೆ. ಅವರ ಹಕ್ಕುಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವು ಮಹತ್ವ ಹೊಂದಿದೆ’ ಎಂದರು.

75 ಅರ್ಹ ವಿದ್ಯಾರ್ಥಿಗಳಿಗೆ ಕೋವಿಡ್ ಮುಂಜಾಗ್ರತಾ ಲಸಿಕೆ ನೀಡಲಾಯಿತು. ಆರೋಗ್ಯ ನಿರೀಕ್ಷಣಾಧಿಕಾರಿ ಗಂಗಾಧರ್‌ ರೆಡ್ಡಿ ಕೋವಿಡ್‌ ಲಸಿಕೆ ಮಹತ್ವ ತಿಳಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಾರುತಿ ಪ್ರಸಾದ್‌, ರಂಗಾರೆಡ್ಡಿ, ಪ್ರಶಾಂತ್‌, ಜ್ಯೋತಿ, ಆರೋಗ್ಯ ಸುರಕ್ಷತಾಧಿಕಾರಿ ಮಂಜುಳಾ, ಶಿಲ್ಪ, ವನಜಾಕ್ಷಿ, ಕೆ.ಎಚ್‌.ಪಿ.ಟಿ ಸಂಚಾಲಕಿ ತಿಪ್ಪಮ್ಮ, ಎನ್‌ಎಸ್‌ಎಸ್‌ ಅಧಿಕಾರಿ ಶಶಿಧರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.