ADVERTISEMENT

ಚಂದ್ರಪ್ಪ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿ

ಮಾದಿಗ ದಂಡೋರ ಜಿಲ್ಲಾ ಘಟಕ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಜೂನ್ 2023, 12:35 IST
Last Updated 8 ಜೂನ್ 2023, 12:35 IST

ಚಿತ್ರದುರ್ಗ: ಮಾದಿಗ ಸಮುದಾಯದ ನಾಯಕರೂ ಆಗಿರುವ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹಾಗೂ ಮಾಜಿ ಸಚಿವ ಗೋವಿಂದ ಕಾರಜೋಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಬೇಕು ಎಂದು ಮಾದಿಗ ದಂಡೋರ ಜಿಲ್ಲಾ ಘಟಕ ಅಧ್ಯಕ್ಷ ತಿಪ್ಪೇಸ್ವಾಮಿ ಒತ್ತಾಯಿಸಿದರು.

‘ರಾಜ್ಯದಲ್ಲಿ ಬಿಜೆಪಿ ಸೋಲು ಅನುಭವಿಸಲು ಭ್ರಷ್ಟಾಚಾರ, ಶೇ 40ರಷ್ಟು ಕಮಿಷನ್‌, ಆಡಳಿತ ವಿರೋಧಿ ಅಲೆ ಹಾಗೂ ಬೆಲೆ ಏರಿಕೆ ಕಾರಣ. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ತಂದಿದ್ದರಿಂದ ಬಿಜೆಪಿಗೆ ಸೋಲುಂಟಾಯಿತು ಎಂಬುದು ತಪ್ಪು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮಾದಿಗ ಸಮುದಾಯದ ನಾಯಕರ ವಿರುದ್ಧ ನೀಡಿದ ಹೇಳಿಕೆಗೆ ಚಂದ್ರಪ್ಪ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದರೆ ಬಿಜೆಪಿ ರಾಜ್ಯ ಕಚೇರಿ ಹಾಗೂ ಜಿಲ್ಲಾ ಕಚೇರಿ ಎದುರು ಧರಣಿ ನಡೆಸಲಾಗುವುದು. ಶಾಸಕರ ಸರ್ಕಾರಿ ಕಾರ್ಯಕ್ರಮ ಹಾಗೂ ಪ್ರಗತಿ ಪರಿಶೀಲನಾ ಸಭೆಗಳಿಗೂ ಘೇರಾವ್ ಹಾಕಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಒಳಮೀಸಲು ಸೌಲಭ್ಯ ಮಾದಿಗ ಸಮುದಾಯದ ಹಕ್ಕು. ಇದಕ್ಕಾಗಿ ಸಮುದಾಯ ಸುದೀರ್ಘ ಹೋರಾಟ ನಡೆಸಿದೆ. ಈ ಬೇಡಿಕೆಗೆ ಸ್ಪಂದಿಸಿದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸದಾಶಿವ ಆಯೋಗದ ವರದಿ ಜಾರಿಗೊಳಿಸಿದ್ದಾರೆ. ಚಂದ್ರಪ್ಪ ಅವರು ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು’ ಎಂದು ಆಗ್ರಹಿಸಿದರು.

ಮಾದಿಗ ದಂಡೋರ ಮುಖಂಡರಾದ ಎಚ್.ರವಿಚಂದ್ರ, ಜೆ.ಎನ್.ಕೋಟೆ ಆರ್.ನಾಗರಾಜ್, ಶ್ರೀನಿವಾಸ್, ಹನುಮಂತಪ್ಪ, ಕಾಂತರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.