ADVERTISEMENT

ಹೊಳಲ್ಕೆರೆ: ಕರೆಂಟ್ ಕೊಡದೆ ಜಾಗದಿಂದ ಕದಲುವುದಿಲ್ಲ

ಎರಡನೇ ದಿನವೂ ಮುಂದುವರಿದ ಪ್ರತಿಭಟನೆ, 5 ಗಂಟೆ ವಿದ್ಯುತ್‌ಗೆ ರೈತರ ಬಿಗಿಪಟ್ಟು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 2:32 IST
Last Updated 17 ಫೆಬ್ರುವರಿ 2021, 2:32 IST
ಹೊಳಲ್ಕೆರೆಯ ಬೆಸ್ಕಾಂ ಕಚೇರಿ ಎದುರು ಮಂಗಳವಾರ ರೈತ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು (ಎಡಚಿತ್ರ). ಬೆಸ್ಕಾಂ ಕಚೇರಿ ಆವರಣದಲ್ಲೇ ರೈತರು ಅಡುಗೆ ತಯಾರಿಸಿದರು.
ಹೊಳಲ್ಕೆರೆಯ ಬೆಸ್ಕಾಂ ಕಚೇರಿ ಎದುರು ಮಂಗಳವಾರ ರೈತ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು (ಎಡಚಿತ್ರ). ಬೆಸ್ಕಾಂ ಕಚೇರಿ ಆವರಣದಲ್ಲೇ ರೈತರು ಅಡುಗೆ ತಯಾರಿಸಿದರು.   

ಹೊಳಲ್ಕೆರೆ: ಕೊಳವೆಬಾವಿ ಪಂಪ್‌ಸೆಟ್ಗಳಿಗೆ ಹಗಲಿನಲ್ಲಿ ನಿರಂತರ 5 ಗಂಟೆ ವಿದ್ಯುತ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘದ ಸದಸ್ಯರು ನಡೆಸುತ್ತಿರುವ ಪ್ರತಿಭಟನೆ 2ನೇ ದಿನವಾದ ಮಂಗಳವಾರವೂ ಮುಂದುವರಿಯಿತು.

ನಿರಂತರ 5 ಗಂಟೆ ವಿದ್ಯುತ್ ಸರಬರಾಜು ಮಾಡುವ ಮಾತು ಕೊಡದೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ರೈತರು ಪಟ್ಟು ಹಿಡಿದರು. ಯಾವುದೇ ಕಾರಣಕ್ಕೂ ಬರಿಗೈಲಿ ಹಿಂದಿ
ರುಗುವುದಿಲ್ಲ ಎಂದು ಧರಣಿ ಕುಳಿತ ರೈತರು ಬೆಸ್ಕಾಂ ಕಚೇರಿ ಆವರಣದಲ್ಲೇ ಅಡುಗೆ ತಯಾರಿಸಿ ಊಟ ಮಾಡಿದರು.

‘ಸುತ್ತಲಿನ ತಾಲ್ಲೂಕುಗಳಲ್ಲಿ 5, 6 ಗಂಟೆ ವಿದ್ಯುತ್ ಕೊಡುತ್ತಿದ್ದು, ನಮ್ಮ ತಾಲ್ಲೂಕಿನಲ್ಲಿ ಮಾತ್ರ ಈ ಸಮಸ್ಯೆ ಎದುರಾಗಿದೆ. ಇದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಕಾರಣ. ಕಳೆದ ವರ್ಷವೂ ಇದೇ ಸಮಸ್ಯೆ ಎದುರಾಗಿತ್ತು. ಆಗ ಅನೇಕ ಬಾರಿ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಲಾಗಿತ್ತು. ಆದರೂ ನಿರ್ಲಕ್ಷ್ಯ ಮಾಡಿದ್ದರಿಂದ ಈ ಬಾರಿಯೂ ಸಮಸ್ಯೆ ಉಂಟಾಗಿದೆ’ ಎಂದು ದೂರಿದರು.

ADVERTISEMENT

‘ಜನಪ್ರತಿನಿಧಿಗಳು ಹಾಗೂ ಬೆಸ್ಕಾಂ ಅಧಿಕಾರಿಗಳು ಹೊಸ ವಿದ್ಯುತ್ ಲೈನ್ ಅಳವಡಿಸಿದ ನಂತರ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳುತ್ತಾರೆ. ಹೊಸ ಲೈನ್ ಅಳವಡಿಸುವಷ್ಟರಲ್ಲಿ ನಮ್ಮ ತೋಟಗಳೇ ಒಣಗಿ ಹೋಗುತ್ತವೆ. ಆಗ ಕರೆಂಟ್ ನೀಡಿದರೆ ಏನು ಪ್ರಯೋಜನ? ಯಾವುದೇ ಮಾರ್ಗದಲ್ಲಾದರೂ ನಮಗೆ ವಿದ್ಯುತ್ ನೀಡುವ ಭರವಸೆ ನೀಡಿದರೆ ಮಾತ್ರ ಮುಷ್ಕರ ಹಿಂಪಡೆಯುತ್ತೇವೆ’ ಎಂದು ಪ್ರತಿಭಟನಕಾರರು ಹಠ ಹಿಡಿದರು.

ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಅಪ್ಪರಸನಹಳ್ಳಿ ಬಸವರಾಜಪ್ಪ, ರೈತ ಸಂಘದ ಮುಖಂಡರಾದ ಚಂದ್ರಪ್ಪ, ಜಿ.ಎಲ್. ಜೀವನ್, ಬಸವರಾಜ್, ವೀರಭದ್ರಪ್ಪ, ರಂಗಪ್ಪ, ಮಂಜುನಾಥ್, ಶಿವಲಿಂಗ ಸ್ವಾಮಿ, ಉಮೇಶ್, ಸತೀಶ್, ನಾಗರಾಜ್, ಶಂಕರಮೂರ್ತಿ, ರಂಗಯ್ಯ, ಗಂಗಮ್ಮ, ಸದಾಶಿವಪ್ಪ, ನಾಗೇಂದ್ರಪ್ಪ, ಶಿವಕುಮಾರ್, ಜಯಪ್ಪ, ರವಿಕುಮಾರ್, ಕೊಟ್ರೆ ಶಂಕರಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.