ಚಿತ್ರದುರ್ಗ: ವರ್ಷ ಪೂರ್ತಿ ಕಸರತ್ತು ನಡೆಸಿದರೂ ಜಿಲ್ಲೆಯ ದ್ವಿತೀಯ ಪಿಯು ಫಲಿತಾಂಶ ಮಾತ್ರ ಸುಧಾರಣೆ ಕಾಣುತ್ತಿಲ್ಲ. ಕಳಪೆ ಫಲಿತಾಂಶದ ಕಳಂಕದಿಂದ ಹೊರಬರಲು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) 26 ಅಂಶದ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ.
ಶೈಕ್ಷಣಿಕ ವರ್ಷದ ಪ್ರಾರಂಭದಲ್ಲೇ ಉಪನ್ಯಾಸಕರ ಕೊರತೆಯನ್ನು ಸರಿದೂಗಿಸುವ ಮೂಲಕ ಫಲಿತಾಂಶ ಸುಧಾರಣೆಗೆ ಮುನ್ನುಡಿ ಇಟ್ಟಿದೆ. ಬಳಿಕ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ವಿಷಯವಾರು ಪಟ್ಟಿ ಸಿದ್ಧಗೊಳಿಸಿ ನಿತ್ಯ ಬೆಳಿಗ್ಗೆ 9.30 ರಿಂದ 10.30ರವರೆಗೆ ವಿಶೇಷ ತರಗತಿ ನಡೆಸಿ ತೇರ್ಗಡೆಯ ದಡ ಸೇರಿಸಲು ಮುಂದಾಗಿದೆ.
ಜಿಲ್ಲೆಯಲ್ಲಿ 30 ಸರ್ಕಾರಿ, 45 ಅನುದಾನಿತ, 44 ಅನುದಾನರಹಿತ, ವಸತಿ ಶಿಕ್ಷಣ ಸಂಸ್ಥೆ, ಕೆಪಿಎಸ್ ಹಾಗೂ ಆದರ್ಶ ಸಂಸ್ಥೆ ಸೇರಿ ಒಟ್ಟು 135 ಪದವಿ ಪೂರ್ವ ಕಾಲೇಜುಗಳಿವೆ. ಇದರಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 3,829, ವಿಜ್ಞಾನ ವಿಭಾಗದಲ್ಲಿ 6,207 ಹಾಗೂ ವಾಣಿಜ್ಯ ವಿಭಾಗದಲ್ಲಿ 3,305 ಸೇರಿ 13,341 ವಿದ್ಯಾರ್ಥಿಗಳಿದ್ದಾರೆ.
ಈ ಹಿಂದಿನ ಫಲಿತಾಂಶವನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಕಂಡುಬಂದ ಪ್ರಮುಖ ನ್ಯೂನತೆಗಳನ್ನು ಆರಂಭದಲ್ಲೇ ಪತ್ತೆ ಮಾಡಿ ಸರಿಪಡಿಸಲಾಗಿದೆ. 2024–25ನೇ ಸಾಲಿನ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಪಡೆದ ಹಾಗೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿರುವ 10 ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಬಾರಿ ಫಲಿತಾಂಶ ಸುಧಾರಣೆಯಲ್ಲಿ ಈ ಹತ್ತು ಕಾಲೇಜುಗಳು ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೇಳಾಪಟ್ಟಿ ರೂಪಿಸಿ ವಿಶೇಷ ತರಗತಿ ನಡೆಸುವ ಜತೆಗೆ ಪ್ರತಿ ಅಧ್ಯಾಯ ಮುಗಿದ ಬಳಿಕ 25 ಅಂಕಗಳಿಗೆ ಘಟಕ ಪರೀಕ್ಷೆ ಮಾಡಲಾಗುತ್ತಿದೆ. ಮೌಲ್ಯಮಾಪನದ ಬಳಿಕ ವಿದ್ಯಾರ್ಥಿಗಳಿಗೆ ಪುನಃ ಪ್ರಶ್ನೆಪತ್ರಿಕೆ ನೀಡಿ ಪ್ರತಿ ಪ್ರಶ್ನೆಗೆ ಉತ್ತರ ಬರೆದು ಪುನರ್‌ಮನನ ಮಾಡುವಂತೆ ಸೂಚಿಸಲಾಗುತ್ತಿದೆ. ಅಲ್ಲದೆ ಆ ಅಂಕಗಳ ಪಟ್ಟಿ ಹಾಗೂ ಉತ್ತರ ಪತ್ರಿಕೆಯನ್ನು ಪ್ರಾಂಶುಪಾಲರು ಪರಿಶೀಲಿಸಿ ಇಲಾಖೆಯ ಉಪನಿರ್ದೇಶಕರಿಗೆ ಸಲ್ಲಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಿಂದಿನ ವರ್ಷಗಳ ವಾರ್ಷಿಕ ಪರೀಕ್ಷೆಗಳಲ್ಲಿ ಪುನರಾವರ್ತನೆಯಾಗಿರುವ ಪ್ರಶ್ನೆಗಳನ್ನು ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿ ತಿಂಗಳು ಉಪನ್ಯಾಸಕರ, ಪಾಲಕರ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆ ನಡೆಸುವುದನ್ನು ಕಡ್ಡಾಯಗೊಳಿಸಲಾಗಿದೆ. ವಿದ್ಯಾರ್ಥಿಯ ಕಲಿಕಾ ಪ್ರಗತಿಯನ್ನು ಸಕಾಲಕ್ಕೆ ಗಮನಿಸಿ ಮಾರ್ಗದರ್ಶನ ನೀಡುವಂತೆ ಸೂಚಿಸಲಾಗಿದೆ.
ಉಪನ್ಯಾಸಕರು ತಮಗೆ ನಿಗದಿಪಡಿಸಿರುವ ಅವಧಿಯ ಜತೆಗೆ ಪ್ರತಿ ಭಾನುವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿಶೇಷ ತರಗತಿ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಗುಂಪುಗಳನ್ನು ರಚಿಸಿ, ಹಾಜರಾತಿ ಹೆಚ್ಚಿಸಲು ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಳಪೆ ಫಲಿತಾಂಶದಿಂದ ಹೊರಬರಲು 26 ಅಂಶದ ಕಾರ್ಯಕ್ರಮ ರೂಪಿಸಿ ಜಾರಿಗೊಳಿಸಲಾಗಿದೆ. ಮುಖ್ಯ ಪರೀಕ್ಷೆ ಮಾದರಿಯಲ್ಲಿ ತರಗತಿಯ ಪರೀಕ್ಷೆ ನಡೆಸಲಾಗುತ್ತಿದೆ. ವಿಶೇಷ ಕಾರ್ಯಾಗಾರ ನಡೆಸಲಾಗಿದೆಕೆ.ತಿಮ್ಮಯ್ಯ ಉಪ ನಿರ್ದೇಶಕ ಪದವಿಪೂರ್ವ ಶಿಕ್ಷಣ ಇಲಾಖೆ
ಫಲಿತಾಂಶ ಸುಧಾರಣೆಗೆ ಇಲಾಖೆ ಸೂಚಿಸಿದ ಪ್ರತಿ ಅಂಶಗಳನ್ನು ಕಾಲೇಜುಗಳಲ್ಲಿ ಕಾರ್ಯರೂಪಕ್ಕೆ ತರಲಾಗಿದೆ. ವಿಶೇಷ ತರಗತಿ ನಡೆಸಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಲಗುತ್ತಿದೆಪಿ.ಎಂ.ಜಿ.ರಾಜೇಶ್ ಅಧ್ಯಕ್ಷ ಪ್ರಾಂಶುಪಾಲರ ಸಂಘದ ಜಿಲ್ಲಾ ಘಟಕ
ವಿದ್ಯಾರ್ಥಿ ನಿಲಯಗಳ ಮೇಲೆ ನಿಗಾ
ಬಹಳಷ್ಟು ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಗಳ ಮೇಲೆ ಅವಲಂಬಿತರಾಗಿದ್ದಾರೆ. ಈ ಕಾರಣಕ್ಕೆ ಜಿಲ್ಲೆಯ 44 ವಸತಿ ನಿಲಯಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ವಸತಿ ನಿಲಯಗಳಿಗೆ ನಿತ್ಯ ಸಂಜೆ ಉಪನ್ಯಾಸಕರು ತೆರಳಿ ಒಂದು ಗಂಟೆ ಪಾಠ ಮಾಡುತ್ತಿದ್ದಾರೆ. ಜತೆಗೆ ಪಾಲಕರ ಸಭೆ ನಡೆಸಿ ಸಲಹೆ ಸೂಚನೆ ನೀಡುವ ಕೆಲಸ ಮಾಡುತ್ತಿದ್ದಾರೆ. ರಾತ್ರಿ ಊಟದ ನಂತರ ವಿದ್ಯಾರ್ಥಿಗಳು ಓದುವುದನ್ನು ಗಮನಿಸಿ ಮಾಹಿತಿ ನೀಡುವಂತೆ ನಿಲಯ ಪಾಲಕರಿಗೆ ಸೂಚನೆ ನೀಡಲಾಗಿದೆ. ಇದು ಕಡ್ಡಾಯ ಹಾಜರಾತಿಗೆ ನೆರವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಪನ್ಯಾಸಕರಿಗೆ ವಿದ್ಯಾರ್ಥಿಗಳು ದತ್ತು
ಪ್ರತಿ ಕಾಲೇಜಿನಲ್ಲಿ ಹಾಜರಾತಿ ಪ್ರಕಾರ 10 ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಉಪನ್ಯಾಸಕರೊಬ್ಬರಿಗೆ ವಹಿಸಲಾಗಿದೆ. ಆಯಾ ತಂಡದಲ್ಲಿರುವ ವಿದ್ಯಾರ್ಥಿಗಳ ಪ್ರತಿ ಮಾಹಿತಿ ಸಂಗ್ರಹ ಕಲಿಕಾ ಗುಣಮಟ್ಟ ಸುಧಾರಿಸುವುದು ಕಾಲೇಜಿಗೆ ಗೈರಾದರೆ ಕರೆ ಮಾಡುವುದು ನಿತ್ಯ ಬೆಳಿಗ್ಗೆ ರಾತ್ರಿ ಕರೆ ಮಾಡಿ ಸೂಚಿಸಿದ ಪಠ್ಯದ ಅಭ್ಯಾಸದ ಬಗ್ಗೆ ಮಾಹಿತಿ ಪಡೆದು ಪುಸ್ತಕದಲ್ಲಿ ದಿನಾಂಕವಾರು ದಾಖಲಿಸುವ ಕೆಲಸ ಮಾಡುವಂತೆ ಇಲಾಖೆ ನಿರ್ದೇಶನ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.