
ಸಾಗರ: ಬೀದಿ ದೀಪ, ಚರಂಡಿ ಅವ್ಯವಸ್ಥೆ, ರಸ್ತೆ ದುರಾವಸ್ಥೆ, ಈ ಸ್ವತ್ತು ವಿತರಣೆಯಲ್ಲಿ ವಿಳಂಬ, ಉದ್ಯಾನವನ ಸ್ಥಳದ ಒತ್ತುವರಿ, ಹೊಸ ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ನಿರಾಕ್ಷೇಪಣಾ ಪತ್ರ ನೀಡುವಲ್ಲಿ ಇರುವ ತೊಡಕು ಸೇರಿದಂತೆ ಹಲವು ಮೂಲ ಸೌಕರ್ಯಗಳ ಕೊರತೆಯ ಸಮಸ್ಯೆ ಗುರುವಾರ ನಡೆದ ಜನಸಂಪರ್ಕ ಸಭೆಯಲ್ಲಿ ಮಾರ್ದನಿಸಿತು.
ಇಲ್ಲಿನ ನಗರಸಭೆ ಆವರಣದಲ್ಲಿ ಗುರುವಾರ ನಡೆದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ವಿವಿಧ ಸಮಸ್ಯೆಗಳ ಕುರಿತಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಅರ್ಜಿ ಸ್ವೀಕರಿಸಿ ನಿಗದಿತ ಕಾಲಾವಧಿಯೊಳಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.
ನಗರವ್ಯಾಪ್ತಿಯೊಳಗಿನ ಸರ್ಕಾರಿ ಜಾಗಗಳಿಗೆ ಉಪವಿಭಾಗಾಧಿಕಾರಿ ಮೊಹರು ಇರುವ ನಕಲಿ ಹಕ್ಕುಪತ್ರ ವಿತರಿಸುವ ಜಾಲ ಅತ್ಯಂತ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಇಂತಹ ನಕಲಿ ಹಕ್ಕುಪತ್ರಗಳಿಗೆ ಖಾತೆ ಮಾಡಬಾರದು ಎಂದು ನಿವೃತ್ತ ನೌಕರರೊಬ್ಬರು ಸಭೆಯ ಗಮನ ಸೆಳೆದರು.
ಮಂಕಳಲೆ ಬಡಾವಣೆಯ ಇಂದಿರಾ ನಗರದಲ್ಲಿ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡದ ಕಾರಣ ಕೊಳಚೆ ನೀರು ಕುಡಿಯುವ ನೀರಿನ ಬಾವಿಯೊಳಗೆ ಬಸಿಯುತ್ತಿದೆ. ನೀರು ಕಲುಷಿತಗೊಳ್ಳುತ್ತಿದ್ದು, ಇಲ್ಲಿ ಬಾಕ್ಸ್ ಚರಂಡಿ ನಿರ್ಮಿಸುವಂತೆ ಸ್ಥಳೀಯರು ಒತ್ತಾಯಿಸಿದರು.
ಬಸವೇಶ್ವರ ನಗರ ಬಡಾವಣೆಯಲ್ಲಿ ಕೊಳವೆ ಬಾವಿ ಕೊರೆಸಿ ಒಂದು ವರ್ಷವಾದರೂ ವಿದ್ಯುತ್ ಸಂಪರ್ಕ ನೀಡದ ಕಾರಣ ನೀರು ಪೂರೈಕೆಯಾಗುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ದೂರಿದರು. ‘ನೀರು ಪೂರೈಕೆ ಮಾಡದೆ ಕೊಳವೆ ಬಾವಿಗೆ ಊದುಬತ್ತಿ, ಕರ್ಪೂರ ಹಚ್ಚಿ ಪೂಜೆ ಮಾಡುತ್ತೀರಾ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಬೇಳೂರು, ಮೂರು ದಿನಗಳೊಳಗೆ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸುವಂತೆ ತಾಕೀತು ಮಾಡಿದರು.
ವಿಜಯನಗರ ಬಡಾವಣೆಯಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟ ಜಾಗವನ್ನು ಖಾಸಗಿಯವರಿಗೆ ಖಾತೆ ಮಾಡಿಕೊಡಲಾಗಿದೆ. ಒತ್ತುವರಿಯನ್ನು ತೆರವುಗೊಳಿಸಿ ಉದ್ಯಾನವನವನ್ನು ಅಭಿವೃದ್ಧಿಗೊಳಿಸಬೇಕು ಎಂದು ಅಲ್ಲಿನ ಸ್ಥಳೀಯರು ಅಹವಾಲು ಮಂಡಿಸಿದರು.
ಬಾಪಟ್ ಕಲ್ಯಾಣ ಮಂಟಪದ ಎದುರು ರಸ್ತೆಗೆ ವ್ಯಕ್ತಿಯೊಬ್ಬರು ಕಾಂಪೌಂಡ್ ನಿರ್ಮಿಸಿದ್ದು ಅದನ್ನು ತೆರವುಗೊಳಿಸಬೇಕು, ತಿಮ್ಮಣ್ಣ ನಾಯಕನ ಕೆರೆಯನ್ನು ಅಭಿವೃದ್ಧಿಗೊಳಿಸಬೇಕು, ಭೀಮನಕೋಣೆ ರಸ್ತೆಯ ಡಿವೈಡರ್‌ಗೆ ದೀಪ ಅಳವಡಿಸಬೇಕು ಎಂದು ಸಾರ್ವಜನಿಕರು ಮನವಿ ಸಲ್ಲಿಸಿದರು.
ನೂತನವಾಗಿ ಮನೆ ನಿರ್ಮಿಸಿದವರಿಗೆ ವಿದ್ಯುತ್ ಸಂಪರ್ಕ ಪಡೆಯಲು ನಿರಾಕ್ಷೇಪಣಾ ಪತ್ರ ನೀಡುವಲ್ಲಿ ಇರುವ ಕಾನೂನಿನ ತೊಡಕು ಸಭೆಯಲ್ಲಿ ಚರ್ಚೆಗೆ ಗ್ರಾಸ ಒದಗಿಸಿತ್ತು. ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ’ ಎಂದು ಶಾಸಕ ಬೇಳೂರು ಸಭೆಯಲ್ಲಿ ಪ್ರಸ್ತಾಪಿಸಿದರು.
ನಿವೃತ್ತ ನೌಕರರ ಸಂಘ, ಸವಿತಾ ಸಮಾಜ, ದೈವಜ್ಞ ಸಂವರ್ಧನ ಕೋ ಆಪರೇಟಿವ್ ಸೊಸೈಟಿ ಪ್ರಮುಖರು ತಮ್ಮ ಸಂಘಟನೆ ಕಾರ್ಯ ಚಟುವಟಿಕೆಗೆ ನಿವೇಶನ ನೀಡುವಂತೆ ಅಹವಾಲು ಸಲ್ಲಿಸಿದರು.
ನಗರದ ವಿವಿಧ ಬಡಾವಣೆಗಳಲ್ಲಿ ಲೇ ಔಟ್ ನಿರ್ಮಿಸಿದ ನಂತರ ನಿಯಮಗಳನ್ನು ಪಾಲಿಸದೆ ಇರುವುದರಿಂದ ಸ್ಥಳೀಯರಿಗೆ ಆಗುತ್ತಿರುವ ವಿವಿಧ ರೀತಿಯ ಸಮಸ್ಯೆಗಳು ಸಭೆಯಲ್ಲಿ ಪ್ರತಿಧ್ವನಿಸಿತು. ‘ಲೇ ಔಟ್ ನಿರ್ಮಾಣ ಸಂದರ್ಭದಲ್ಲೆ ಕಾನೂನು ಪಾಲನೆಗೆ ಕಟ್ಟುನಿಟ್ಟಿನ ಕ್ರಮ ವಹಿಸಿದರೆ ಈ ರೀತಿ ಆಗುವುದಿಲ್ಲ. ಲೇ ಔಟ್ ಮಾಲಿಕರೇನು ನಿಮ್ಮ ಮಾವಂದಿರೆ’ ಎಂದು ಬೇಳೂರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಸಾಗರ ಜಿಲ್ಲಾ ಹೋರಾಟ ಸಮಿತಿ ಪ್ರಮುಖರಿಂದ ಜಿಲ್ಲಾ ಕೇಂದ್ರ ರಚನೆಗೆ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಸಾಗರ ಜಿಲ್ಲಾ ರಚನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ನಿಯೋಗ ತೆರಳಲು ದಿನಾಂಕ ನಿಗದಿ ಪಡಿಸುವುದಾಗಿ ಭರವಸೆ ನೀಡಿದರು.
ಉಪವಿಭಾಗಾಧಿಕಾರಿ ವೀರೇಶ್ ಕುಮಾರ್, ತಹಶೀಲ್ದಾರ್ ರಶ್ಮಿ, ಪೌರಾಯುಕ್ತ ಎಚ್.ಕೆ.ನಾಗಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್, ಯೋಜನಾ ನಿರ್ದೇಶಕ ರಂಗಸ್ವಾಮಿ, ಪ್ರಮುಖರಾದ ಐ.ಎನ್. ಸುರೇಶ್ ಬಾಬು, ಗಣಪತಿ ಮಂಡಗಳಲೆ, ಮಧುಮಾಲತಿ, ಸೋಮಶೇಖರ್ ಲ್ಯಾವಿಗೆರೆ, ಮಕ್ಬುಲ್ ಅಹ್ಮದ್ ಇದ್ದರು.
ನಕಲಿ ಹಕ್ಕುಪತ್ರಗಳಿಗೆ ಖಾತೆ ಏರಿಸದಂತೆ ಒತ್ತಾಯ ಕೆರೆ, ಉದ್ಯಾನವನ ಅಭಿವೃದ್ಧಿಗೆ ಒತ್ತು ನೀಡಲು ಮನವಿ ಲೇ ಔಟ್‌ಗಳ ರಚನೆ ವೇಳೆ ನಿಯಮ ಪಾಲಿಸಲು ಸೂಚನೆ
ನೂತನ ಜಿಲ್ಲೆ ರಚನೆ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ರಾಜ್ಯದಲ್ಲಿ ಸದ್ಯಕ್ಕೆ ನೂತನ ಜಿಲ್ಲಾ ರಚನೆ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಒಂದು ವೇಳೆ ನೂತನ ಜಿಲ್ಲೆಗಳನ್ನು ರಚಿಸುವ ಸಂದರ್ಭ ಬಂದರೆ ಸಾಗರಕ್ಕೆ ಜಿಲ್ಲಾ ಕೇಂದ್ರದ ಸ್ಥಾನಮಾನ ನೀಡುವಂತೆ ಸರ್ಕಾರದ ಮೇಲೆ ಒತ್ತಡ ತರುತ್ತೇನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.