ADVERTISEMENT

ರೈತರ ಪ್ರತಿಭಟನೆ: ಬೆಂಬಲ ಬೆಲೆಯಡಿ ರಾಗಿ ಖರೀದಿ ಮಾಡಿ

ರಾಜ್ಯ ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 4:22 IST
Last Updated 11 ಫೆಬ್ರುವರಿ 2022, 4:22 IST
ಬೆಂಬಲ ಬೆಲೆಯಡಿ ಎಲ್ಲ ರೈತರ ರಾಗಿ ಖರೀದಿಸಬೇಕು ಎಂದು ಒತ್ತಾಯಿಸಿ ಹೊಸದುರ್ಗದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯಿಂದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು
ಬೆಂಬಲ ಬೆಲೆಯಡಿ ಎಲ್ಲ ರೈತರ ರಾಗಿ ಖರೀದಿಸಬೇಕು ಎಂದು ಒತ್ತಾಯಿಸಿ ಹೊಸದುರ್ಗದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯಿಂದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು   

ಹೊಸದುರ್ಗ: ರಾಗಿ ಬೆಳೆಗಾರರಿಗೆ ಸರ್ಕಾರ ಸಣ್ಣ ಹಾಗೂ ದೊಡ್ಡ ರೈತ ಎಂದು ತಾರತಮ್ಯ ಮಾಡದೇ ಬೆಂಬಲ ಬೆಲೆಯಡಿ ರಾಗಿ ಖರೀದಿಸಬೇಕು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಸಿ. ಮಹೇಶ್ವರಪ್ಪ ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ರಾಗಿ ಖರೀದಿಗೆ ಬೆಂಬಲ ಬೆಲೆಯೊಂದಿಗೆ ಸಮಾನ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ‘ರೈತರ ರಾಗಿಯೊಂದಿಗೆ ನಿರಂತರ ಪ್ರತಿಭಟನೆ’ ಎಂಬ ಘೋಷವಾಕ್ಯದೊಂದಿಗೆ ತಹಶೀಲ್ದಾರ್ ಕಚೇರಿ ಎದುರು ಗುರುವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

‘ರಾಗಿ ಖರೀದಿಗೆ ಸಣ್ಣ ಹಾಗೂ ದೊಡ್ಡ ರೈತ ಎಂಬುದಾಗಿ ಸರ್ಕಾರ ತಾರತಮ್ಯ ಮಾಡುತ್ತಿದೆ. 4 ಎಕರೆ 30 ಗುಂಟೆಗಿಂತ ಅಧಿಕ ಜಮೀನು ಇರುವವರಿಗೆ ರಾಗಿ ಖರೀದಿಗೆ ಅವಕಾಶ ಕಲ್ಪಿಸಿಲ್ಲ. ಈ ಕುರಿತು ಕಳೆದ ತಿಂಗಳಲ್ಲಿ ತಹಶೀಲ್ದಾರ್‌ಗೆ ಮನವಿಪತ್ರ ಸಲ್ಲಿಸಿದ್ದರೂ ಯಾವುದೇ ಬದಲಾವಣೆಯಾಗಿಲ್ಲ.ಬೆಳೆದ ರಾಗಿ ಮನೆಯಲ್ಲೇ ಇದೆ. ಈ ಬಾರಿ ಅಕಾಲಿಕ ಮಳೆಯಾಗಿ, ರಾಗಿಯೂ ನಷ್ಟವಾಗಿದೆ. ಇದರಿಂದ ತೊಂದರೆಯಾಗಿದೆ. ರಾಗಿ ಖರೀದಿಗೆ ಕಳೆದ ಬಾರಿ ತಾಲ್ಲೂಕಿನಲ್ಲಿ 9000 ಜನರ ನೋಂದಣಿಯಾಗಿತ್ತು. ಈ ಬಾರಿ ಕೇವಲ 2000 ಜನರ ನೋಂದಣಿಯಾಗಿದೆ. ಎಲ್ಲಾ ರೈತರ ರಾಗಿ ಖರೀದಿಗೆ ಸರ್ಕಾರ ಅವಕಾಶ ನೀಡುವವರೆಗೂ ಪ್ರತಿಭಟನೆ ಮುಂದುವರಿಯಲಿದೆ’ ಎಂದು ಹೇಳಿದರು.

ADVERTISEMENT

ಸರ್ಕಾರವು ಸಣ್ಣ ಹಾಗೂ ದೊಡ್ಡ ರೈತರೆನ್ನದೇ ರಾಗಿ ಖರೀದಿಗೆ ಪುನಃ ಗಣಕೀಕೃತ ವ್ಯವಸ್ಥೆ ಕಲ್ಪಿಸಬೇಕು. ಎಪಿಎಂಸಿಯಲ್ಲಿ ವಿದ್ಯುತ್ ದೀಪ, ಕುಡಿಯುವ ನೀರು ಸೌಲಭ್ಯ, ಸುಸಜ್ಜಿತ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕು. ರಾಗಿ ಗುಣಮಟ್ಟ ಪರಿಶೀಲಿಸುವವರು ಹಾಗೂ ಹಮಾಲರು ರೈತರಿಂದ ಹಣ ಪಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಕರ್ನಾಟಕದ ರೈತ ಸಂಘ ಸಮಿತಿ ಕಾರ್ಯಧ್ಯಕ್ಷ ಈಚಗಟ್ಟ ಸಿದ್ಧವೀರಪ್ಪ, ಜಿಲ್ಲಾ ಸಲಹಾ ಸಮಿತಿಯವರಾದ ರಘು, ಕರಿಸಿದ್ಧಯ್ಯ, ಬೋರೇಶ್,ಹರೀಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.