ADVERTISEMENT

PV Web Exclusive: ದಲಿತ ಹೋರಾಟಗಾರನಿಗೆ ‘ಅಭಿಮಾನ’ದ ಸ್ಮಾರಕ

ಜಿ.ಬಿ.ನಾಗರಾಜ್
Published 18 ಡಿಸೆಂಬರ್ 2020, 13:13 IST
Last Updated 18 ಡಿಸೆಂಬರ್ 2020, 13:13 IST
ಎಂ.ಜಯಣ್ಣ
ಎಂ.ಜಯಣ್ಣ   

ಚಿತ್ರದುರ್ಗ: ದಲಿತ ಚಳವಳಿಯ ನೇತಾರ ಎಂ.ಜಯಣ್ಣ ಅವರಿಗೆ ಒಡನಾಡಿಗಳು ಹಾಗೂ ಅಭಿಮಾನಿಗಳು ಸ್ವಂತ ಖರ್ಚಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸರ್ಕಾರಕ್ಕೆ ಅರ್ಜಿ ಹಾಕದೆ, ಅನುದಾನಕ್ಕೆ ಕಾಯದೆ ಸ್ವಯಂ ಪ್ರೇರಣೆಯಿಂದ ಸ್ಮಾರಕ ನಿರ್ಮಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಸ್ವಾತಂತ್ರ್ಯ ಚಳವಳಿ ನೆನಪಿಸುವ ಸ್ಮಾರಕಗಳು ಅಲ್ಲಲ್ಲಿ ಸಿಗುತ್ತವೆ. ಗಣ್ಯರು, ರಾಜಕಾರಣಿಗಳು, ಸಿನಿಮಾ ನಟರ ಸ್ಮಾರಕಗಳಿವೆ. ಸಿನಿಮಾ ನಟರು ನಿಧನರಾದಾಗ ಸ್ಮಾರಕ ನಿರ್ಮಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತದೆ. ಆದರೆ, ಹೋರಾಟಗಾರರೊಬ್ಬರಿಗೆ ಅಭಿಮಾನದಿಂದ ಸ್ಮಾರಕ ನಿರ್ಮಿಸಿರುವುದು ಅಪರೂಪ.

ಚಿತ್ರದುರ್ಗ ತಾಲ್ಲೂಕಿನ ಕ್ಯಾದಿಗೆರೆ ಸಮೀಪದ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಎಕರೆ ಭೂಮಿಯನ್ನು ಸ್ಮಾರಕಕ್ಕೆ ಮೀಸಲಿಡಲಾಗಿದೆ. ಸಂಸದ ಎ.ನಾರಾಯಣಸ್ವಾಮಿ ಹಾಗೂ ಮಾಜಿ ಸಚಿವ ಎಚ್‌.ಆಂಜನೇಯ ತಲಾ ಒಂದು ಎಕರೆ ಭೂಮಿಯನ್ನು ಖರೀದಿಸಿ ಕೊಟ್ಟಿದ್ದಾರೆ. ಎಂ.ಜಯಣ್ಣ ಮೆಮೋರಿಯಲ್‌ ಚಾರಿಟಬಲ್‌ ಟ್ರಸ್ಟ್‌ ಕೂಡ ಅಸ್ತಿತ್ವಕ್ಕೆ ಬಂದಿದೆ. ಜಯಣ್ಣ ಅವರ ಪುತ್ರ ಜೆ.ಪ್ರಸನ್ನಕುಮಾರ್‌ ಕಾರ್ಯದರ್ಶಿಯಾಗಿದ್ದಾರೆ. ಟ್ರಸ್ಟ್‌ ಹಾಗೂ ಸ್ಮಾರಕದ ರೂಪುರೇಷೆಗಳು ಇನ್ನೂ ಅಂತಿಮ ಹಂತಕ್ಕೆ ಬರಬೇಕಿದೆ.

ADVERTISEMENT

ದಲಿತ ಚಳವಳಿಯ ನೇತಾರ ಪ್ರೊ.ಬಿ.ಕೃಷ್ಣಪ್ಪ ಒಡನಾಡಿಯಾಗಿದ್ದ ಎಂ.ಜಯಣ್ಣ ದಲಿತ ಸಂಘರ್ಷ ಸಮಿತಿ ಅಸ್ತಿತ್ವಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಭಾವಿ ದಲಿತ ನಾಯಕರಾಗಿ ರೂಪುಗೊಂಡರೂ ಬೇರೆ ರೀತಿಯ ಹಣೆಪಟ್ಟಿಗಳು ಅಂಟದಂತೆ ಎಚ್ಚರ ವಹಿಸಿದ್ದರು. ನಾಲ್ಕೈದು ದಶಕಗಳ ಕಾಲ ತತ್ವ, ಬದ್ಧತೆ, ಸರಳತೆಯಿಂದ ಹೋರಾಟದ ಕಾವನ್ನು ಉಳಿಸಿಕೊಂಡವರು. ದಲಿತ ಮುಖಂಡರಾಗಿಯೂ ಎಲ್ಲ ಜನಾಂಗದ ಪ್ರೀತಿ, ಅಭಿಮಾನಕ್ಕೆ ಪಾತ್ರರಾಗಿದ್ದರು. ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಪ್ರಮುಖ ರಾಜಕೀಯ ಪಕ್ಷಗಳು ಇವರನ್ನು ಸೆಳೆಯಲು ಪ್ರಯತ್ನಿಸಿದ್ದವು.

ಕಾನ್ಷಿರಾಂ ಹಾಗೂ ಮಾಯಾವತಿ ಪ್ರಭಾವದಿಂದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಸೇರಿದ್ದರು. ಭರಮಸಾಗರ ವಿಧಾನಸಭಾ ಕ್ಷೇತ್ರ ಹಾಗೂ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಿಂದ ಬಿಎಸ್‌ಪಿ ಅಭ್ಯರ್ಥಿಯಾಗಿ ಮೂರು ಬಾರಿ ಸ್ಪರ್ಧಿಸಿದ್ದರು. 2009ರಲ್ಲಿ ಲೋಕಸಭಾ ಚುನಾವಣೆಗೆ ಬಿಎಸ್‌ಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಪರಾಭವಗೊಂಡಿದ್ದರು. ಬೆಂಬಲಿಗರ ಒತ್ತಡಕ್ಕೆ ಮಣಿದು ಕಾಂಗ್ರೆಸ್‌ ಸೇರಿದರೂ ಸಕ್ರಿಯರಾಗಲು ಆರೋಗ್ಯ ಸ್ಪಂದಿಸಲಿಲ್ಲ.

ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾಗಿದ್ದ ಜಯಣ್ಣ, ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಚಳವಳಿ ನಡೆಸಿದರು. ಬೆಂಬಲಿಗರು ಇವರನ್ನು ‘ಬಯಲುಸೀಮೆ ಭಗೀರಥ’ ಎಂದೇ ಗುರುತಿಸುತ್ತಿದ್ದರು. ಬದುಕಿನ ಬಹುದಿನಗಳನ್ನು ಹೋರಾಟಕ್ಕೆ ಮುಡಿಪಾಗಿಟ್ಟಿದ್ದರು. ಒಳಮೀಸಲಾತಿ ಬಗ್ಗೆ ರಾಜ್ಯದಲ್ಲಿ ಧ್ವನಿ ಎತ್ತಿದ ಮೊದಲಿಗರಲ್ಲಿ ಜಯಣ್ಣ ಕೂಡ ಒಬ್ಬರು.

ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿ ಬೆತ್ತಲೆ ಸೇವೆ ವಿರೋಧಿಸಿ ನಡೆದ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಶೋಷಿತ ಸಮುದಾಯದ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ವಿರುದ್ಧ ನಿರಂತರ ಹೋರಾಟ ಸಂಘಟಿಸಿದ್ದರು. ಚಿತ್ರದುರ್ಗದಲ್ಲಿ ನಾಲ್ಕನೇ ಬಂಡಾಯ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದರು. ಬಡವರು, ಶೋಷಿತರ ಹೋರಾಟಕ್ಕೆ ಜೀವನ ಮುಡಿಪಾಗಿಟ್ಟಿದ್ದರು. ರಾಜ್ಯದ ದಲಿತ ಸಮುದಾಯದ ಅಭಿಮಾನಕ್ಕೆ ಪಾತ್ರರಾಗಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ಜಯಣ್ಣ ನ.9ರಂದು ಬೆಂಗಳೂರಿನ ಎಂ.ಎಸ್‌.ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾದರು. ಅಗಸನಕಲ್ಲು ಗ್ರಾಮದಲ್ಲಿ ಅಂತ್ಯಕ್ರಿಯೆಗೆ ಕುಟುಂಬ ಸಿದ್ಧತೆ ಮಾಡಿಕೊಂಡಿತ್ತು. ನ.10ರಂದು ಸಾವಿರಾರು ಜನ ಚಿತ್ರದುರ್ಗಕ್ಕೆ ಆಗಮಿಸುವುದರೊಂದಿಗೆ ಅಂತ್ಯಸಂಸ್ಕಾರದ ಚಿತ್ರಣ ಬದಲಾಯಿತು. ಜಯಣ್ಣ ಅವರ ಹೋರಾಟದ ನೆನಪು ಚಿರಕಾಲ ಉಳಿಯುವಂತೆ ಮಾಡಲು ಸಮುದಾಯದ ಮುಖಂಡರೂ ಆಗಿರುವ ಸಂಸದ ಎ.ನಾರಾಯಣಸ್ವಾಮಿ ಹಾಗೂ ಮಾಜಿ ಸಚಿವ ಎಚ್‌.ಆಂಜನೇಯ ಭೂಮಿ ಒದಗಿಸುವ ತೀರ್ಮಾನ ಕೈಗೊಂಡರು. ಶಾಸಕರಾದ ಜಿ.ಎಚ್‌.ತಿಪ್ಪಾರೆಡ್ಡಿ ಮತ್ತು ಟಿ.ರಘುಮೂರ್ತಿ ಇದಕ್ಕೆ ಕೈಜೋಡಿಸಿದರು.

‘ದಲಿತ ಚಳವಳಿಯು ನಡೆದುಬಂದ ದಾರಿ, ಹೋರಾಟ, ಚಿಂತನೆ ಹಾಗೂ ಅಧ್ಯಯನಕ್ಕೆ ಪ್ರೇರಣೆಯಾಗುವ ರೀತಿಯಲ್ಲಿ ಸ್ಮಾರಕ ನಿರ್ಮಿಸಲಾಗುವುದು. ಸಮಾಧಿ ಸಮೀಪ ಮಂಟಪ ನಿರ್ಮಿಸಿ ಬುದ್ಧನ ಪ್ರತಿಮೆ ಸ್ಥಾಪಿಸಲಾಗುತ್ತದೆ. ವಿಚಾರ ಸಂಕಿರಣ, ಇತರೆ ಕಾರ್ಯಕ್ರಮಗಳಿಗೆ ಸಭಾಂಗಣ ಕಟ್ಟುವ ಆಲೋಚನೆ ಇದೆ’ ಎಂದು ಮಾಜಿ ಸಚಿವ ಎಚ್‌.ಆಂಜನೇಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.