ಚಳ್ಳಕೆರೆ: ಇಲ್ಲಿನ ಪಾವಗಡ ಮಾರ್ಗದ ರಸ್ತೆ ರೈಲ್ವೆಗೇಟ್ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ಭೂ ಸ್ವಾಧೀನದ ಸಲುವಾಗಿ ಗುರುವಾರ ನಗರಸಭೆ, ಕಂದಾಯ ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ನಡೆಸಿದರು.
‘ಉತ್ತರ ಕನ್ನಡ ಜಿಲ್ಲೆ ಕುಮಟಾದಿಂದ– ಆಂಧ್ರಪ್ರದೇಶದ ಕಡಮಡಗುವರೆಗಿನ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಶಾಸಕ ಟಿ.ರಘುಮೂರ್ತಿ ಅವರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.
ಅಲ್ಲದೇ ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ರೈಲ್ವೆ ಮೇಲ್ಸೇತುವೆಯನ್ನು 4 ಲೇನ್ ಮಾಡುವಂತೆ ಒತ್ತಡ ಹಾಕಿದ್ದರು. ಹೀಗಾಗಿ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ರೈಲ್ವೆ ಇಲಾಖೆ ಒಪ್ಪಿಗೆ ಸೂಚಿಸಿದೆ’ ಎಂದು ತಹಶೀಲ್ದಾರ್ ರೇಹಾನ್‍ಪಾಷ ತಿಳಿಸಿದರು.
ರೈಲ್ವೆ ಇಲಾಖೆ ಅಧಿಕಾರಿ ಹರೀಶ್ ಮಾತನಾಡಿ, ‘ವಾಹನ ಸಂಚಾರ ಮತ್ತು ನಾಗರಿಕರ ಓಡಾಟಕ್ಕೆ ಆಗುತ್ತಿದ್ದ ತೊಂದರೆ ತಪ್ಪಿಸಲು ಪಾವಗಡ ರಸ್ತೆ ರೈಲ್ವೆಗೇಟ್ ಬಳಿ ₹ 74 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸಲಾಗುವುದು’ ಎಂದು ಹೇಳಿದರು.
ಪದೇ ಪದೆ ರೈಲ್ವೆಗೇಟ್ ಹಾಕುತ್ತಿದ್ದರಿಂದ ಶಾಲೆ– ಕಾಲೇಜು ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಆದ್ದರಿಂದ ಮೇಲ್ಸೇತುವೆಗೆ ಒತ್ತಾಯಿಸಿ ರೈತ ಸಂಘಟನೆ ಹಾಗೂ ವಿವಿಧ ಪ್ರಗತಿಪರ ಸಂಘ ಸಂಸ್ಥೆಗಳ ನೇತೃತ್ವದಲ್ಲಿ 5– 6 ಬಾರಿ ರೈಲು ತಡೆ, ರಸ್ತೆತಡೆ ಹೋರಾಟ ನಡೆಸಿದ್ದರಿಂದ ಮೇಲ್ಸೇತುವೆ ನಿರ್ಮಾಣ ಭಾಗ್ಯ ಒದಗಿ ಬಂದಂತಾಗಿದೆ.
‘ಭೂ ಸ್ವಾಧೀನ ಹಾಗೂ ಸರ್ವೆ ಕಾರ್ಯದಲ್ಲಿ ವರ್ಷಗಳು ನೂಕಬಾರದು. ರೈಲ್ವೆ ಮೇಲ್ಸೇತುವೆ ಕಾಮಗಾರಿ ತುರ್ತಾಗಿ ಆರಂಭಿಸಬೇಕು. ಇಲ್ಲವಾದಲ್ಲಿ ಪುನಃ ಹೋರಾಟ ರೂಪಿಸಲಾಗುವುದು’ ಎಂದು ರೈತ ಮುಖಂಡ ಕೆ.ಪಿ.ಭೂತಯ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರಸಭೆ ಸಹಾಯಕ ಎಂಜಿನಿಯರ್ ಲೋಕೇಶ್, ಎಡಿಎಲ್‍ಆರ್ ಬಾಬುರೆಡ್ಡಿ, ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ರವಿಕುಮಾರ್, ಕಂದಾಯ ಅಧಿಕಾರಿ ತಿಪ್ಪೇಸ್ವಾಮಿ, ಗ್ರಾಮ ಆಡಳಿತಾಧಿಕಾರಿ ಪ್ರಕಾಶ್, ತಿಪ್ಪೇಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.