ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ: ಜಾಮೀನು ಸಿಕ್ಕರೂ 6ನೇ ಆರೋಪಿ ಬಿಡುಗಡೆ ಇಲ್ಲ

ಬಾಂಡ್‌ಗಾಗಿ ಪರದಾಡುತ್ತಿರುವ ಆರೋಪಿ ಜಗದೀಶ್‌ ಸಂಬಂಧಿಗಳು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2024, 15:49 IST
Last Updated 17 ಡಿಸೆಂಬರ್ 2024, 15:49 IST
<div class="paragraphs"><p>ಜೈಲು (ಪ್ರಾತಿನಿಧಿಕ ಚಿತ್ರ)</p></div>

ಜೈಲು (ಪ್ರಾತಿನಿಧಿಕ ಚಿತ್ರ)

   

ಚಿತ್ರದುರ್ಗ: ರೇಣುಕಸ್ವಾಮಿ ಕೊಲೆ ಪ್ರಕರಣದ 6ನೇ ಆರೋಪಿ ಜಗದೀಶ್‌ ಅಲಿಯಾಸ್‌ ಜಗ್ಗನಿಗೆ ಜಾಮೀನು ಸಿಕ್ಕಿದ್ದರೂ ಭದ್ರತೆಗಾಗಿ ಅಗತ್ಯ ಬಾಂಡ್‌ ಒದಗಿಸಲು ಆಸ್ತಿ ಇಲ್ಲದ ಕಾರಣ ಜೈಲಿನಿಂದ ಹೊರಗೆ ಕರೆತರಲು ಸಾಧ್ಯವಾಗುತ್ತಿಲ್ಲ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.

ಇಲ್ಲಿನ ಮಹಾವೀರ ನಗರ ನಿವಾಸಿ ಜಗದೀಶ್‌, ಆಟೊ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕುಟುಂಬಕ್ಕೆ ಆತನೇ ಆಸರೆ. ಹೈಕೋರ್ಟ್‌ ಜಾಮೀನು ನೀಡಿದ್ದು ಭದ್ರತೆಗಾಗಿ ಇಬ್ಬರು ತಮ್ಮ ಆಸ್ತಿಯ ಪಹಣಿಯೊಂದಿಗೆ ಸಹಿ ಮಾಡಿದ ಬಾಂಡ್‌ ನೀಡಬೇಕಾಗಿದೆ. ಕುಟುಂಬ ಸದಸ್ಯರಲ್ಲಿ ಯಾರ ಬಳಿಯೂ ಆಸ್ತಿ ಇಲ್ಲ. ಜೊತೆಗೆ ಸಹಿ ಮಾಡಲು ಆಸ್ತಿ ಇರುವ ಸಂಬಂಧಿಕರೂ ಮುಂದೆ ಬರುತ್ತಿಲ್ಲ. ಅಂತೆಯೇ ನಟ ದರ್ಶನ್‌ ಅವರೇ ಯಾರ ಕಡೆಯಿಂದಾದರೂ ವ್ಯವಸ್ಥೆ ಮಾಡಬೇಕು ಎಂದು ಜಗದೀಶ್‌ ತಾಯಿ ಸುಲೋಚನಮ್ಮ ಮೊರೆ ಇಟ್ಟಿದ್ದಾರೆ.

ADVERTISEMENT

‘ಬೆಂಗಳೂರಿಗೆ ಹೋಗಿ ದರ್ಶನ್‌ ಭೇಟಿ ಮಾಡಿ ಬರಲೂ ನಮ್ಮ ಬಳಿ ಹಣ ಇಲ್ಲ. ದುಡಿಯುವ ಮಗ ಜೈಲು ಸೇರಿದ ನಂತರ ಕಷ್ಟ ಅನುಭವಿಸಿದ್ದೇವೆ. ದರ್ಶನ್‌ ಅವರೇ ಮಗನ ಬಿಡುಗಡೆಗೆ ವ್ಯವಸ್ಥೆ ಮಾಡಬೇಕು’ ಎಂದು ಅವರು ಕೋರಿದ್ದಾರೆ.

‘ನಾವು ಅವರಿವರಲ್ಲಿ ಮನವಿ ಮಾಡಿ ಭದ್ರತೆಗಾಗಿ ₹ 1 ಲಕ್ಷ ಹೊಂದಿಸಿ, 1 ಪಹಣಿ ವ್ಯವಸ್ಥೆ ಮಾಡಿಕೊಂಡು ಬೆಂಗಳೂರಿಗೆ ತೆರಳಿದ್ದೆವು. ಆದರೆ, ಇನ್ನೊಂದು ಪಹಣಿ ತರುವಂತೆ ಕೋರ್ಟ್‌ ಸಿಬ್ಬಂದಿ ವಾಪಸ್‌ ಕಳುಹಿಸಿದರು’ ಎಂದು ಆರೋಪಿಯ ಸಂಬಂಧಿ ಮೂರ್ತಿ ತಿಳಿಸಿದ್ದಾರೆ.

ಪ್ರಕರಣದ ಆರೋಪಿಗಳಾದ ಜಗದೀಶ್‌ ಹಾಗೂ ಎಂ.ಲಕ್ಷ್ಮಣ್‌ ಶಿವಮೊಗ್ಗದ ಕಾರಾಗೃಹದಲ್ಲಿದ್ದು, ಲಕ್ಷ್ಮಣ್‌ನನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.