ಚಿತ್ರದುರ್ಗ: ‘ಒಳಮೀಸಲಾತಿ ಜಾರಿ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ನೀಡಿ ಆಗಸ್ಟ್ 1ಕ್ಕೆ ವರ್ಷ ಪೂರ್ಣವಾಗುತ್ತಿದೆ. ಈ ವರ್ಷದ ಆಗಸ್ಟ್ 1ರೊಳಗೆ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸದಿದ್ದರೆ ಮಾದಿಗ ಸಮಾಜದ ಒಕ್ಕೂಟಗಳಿಂದ ರಾಜ್ಯ ಬಂದ್ ಆಚರಿಸಲಾಗುವುದು’ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.
‘ಒಳಮೀಸಲಾತಿ ಜಾರಿಗೊಳಿಸಲು ಸರ್ಕಾರ ವರ್ಷದಿಂದಲೂ ಮೀನ– ಮೇಷ ಎಣಿಸುತ್ತಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರಿಂದ ಇಂದಿಗೂ ವರದಿ ಪಡೆಯಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಪರಿಶಿಷ್ಟ ಜಾತಿಗಳಿಗಾಗಿ ನಡೆಸಿದ ಜನಗಣತಿ ಗೊಂದಲದ ಗೂಡಾಗಿದ್ದು, ಅದೂ ಸಮರ್ಪಕವಾಗಿ ನಡೆದಿಲ್ಲ. ಒಳಮೀಸಲಾತಿ ಜಾರಿಗೊಳಿಸುವ ಬದ್ಧತೆಯನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಪ್ರದರ್ಶನ ಮಾಡುತ್ತಿಲ್ಲ. ಹೀಗಾಗಿ ನಾವು ಬೀದಿಗಿಳಿಯುವುದು ಅನಿವಾರ್ಯವಾಗಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಮೂರು ದಶಕಗಳ ಹೋರಾಟದಿಂದ ದಣಿದಿದ್ದು, ನಮ್ಮ ಸಹನೆಯ ಕಟ್ಟೆ ಒಡೆದಿದೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರವೂ ಒಳಮೀಸಲಾತಿ ಜಾರಿಗೊಳಿಸದಿರುವುದು ಅಕ್ಷಮ್ಯ. ಆಗಸ್ಟ್ 1ರವರೆಗೂ ನಾವು ಕಾಯುತ್ತೇವೆ. ನಂತರವೂ ಜಾರಿಗೊಳಿಸದಿದ್ದರೆ ಎಲ್ಲ ಜಿಲ್ಲೆಗಳಲ್ಲಿ ಬಂದ್ ಆಚರಿಸಿ, ಆಡಳಿತ ಯಂತ್ರವನ್ನು ನಿಷ್ಕ್ರಿಯಗೊಳಿಸಿ ಅಸಹಕಾರ ಚಳವಳಿ ನಡೆಸಲಾಗುವುದು’ ಎಂದರು.
‘ರಾಜ್ಯದ ವಿವಿಧೆಡೆ ಜಾತಿ ಜನಗಣತಿ ಶೇ 91ರಷ್ಟು ಪೂರ್ಣಗೊಂಡಿದ್ದರೆ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಶೇ 50ರಷ್ಟೂ ಪೂರ್ಣವಾಗಿಲ್ಲ. ಸಮರ್ಪಕವಾಗಿ ಜಾಗೃತಿ ಮೂಡಿಸದ ಕಾರಣ ಜನಗಣತಿ ಸರಿಯಾಗಿ ನಡೆದಿಲ್ಲ. ಒಳಮೀಸಲಾತಿ ಜಾರಿಗೊಳಿಸುವ ಬಗ್ಗೆ ನಮ್ಮಲ್ಲಿ ಅನುಮಾನ ಮೂಡಿರುವ ಕಾರಣ ಹೋರಾಟಕ್ಕೆ ಇಳಿಯುತ್ತಿದ್ದೇವೆ. ಎಲ್ಲ ಜಿಲ್ಲೆಗಳ ಮಾದಿಗ ಸಮುದಾಯದ ಯುವಜನರು ಬೀದಿಗಿಳಿಯಲಿದ್ದಾರೆ’ ಎಂದರು.
‘ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಕೆಲವೇ ತಿಂಗಳುಗಳಲ್ಲಿ ಆಂಧ್ರಪ್ರದೇಶ, ತೆಲಂಗಾಣದಲ್ಲಿ ಒಳಮೀಸಲಾತಿ ಜಾರಿಗೊಳಿಸಲಾಯಿತು. ದತ್ತಾಂಶ ಸಂಗ್ರಹ ನೆಪದಲ್ಲಿ ಆಯೋಗ ರಚಿಸಿದ ರಾಜ್ಯ ಸರ್ಕಾರ ದಿನ ದೂಡುತ್ತಲೇ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಒಳಮೀಸಲಾತಿ ಜಾರಿಗೊಳಿಸುವ ಪರವಾಗಿದ್ದಾರೆ. ಆದರೆ, ಕಾಂಗ್ರೆಸ್ ಮುಖಂಡರಿಗೆ ಬದ್ಧತೆ ಇಲ್ಲ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.