ಎಚ್.ಆಂಜನೇಯ
ಚಿತ್ರದುರ್ಗ: ‘ಮೀಸಲು ಹಂಚಿಕೆ ಜಾತಿ ಆಧಾರಿತವಲ್ಲ. ಆದ್ದರಿಂದ ಆ. 19ರಂದು ನಡೆಯುವ ವಿಶೇಷ ಸಚಿವ ಸಂಪುಟದಲ್ಲಿಯೇ ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗದ ವರದಿಯನ್ನು ಜಾರಿಗೊಳಿಸಬೇಕು’ ಎಂದು ಆಗ್ರಹಿಸಿ ಮಾಜಿ ಸಚಿವ ಎಚ್.ಆಂಜನೇಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
‘ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂಬ ಮಹತ್ವದ ತೀರ್ಪನ್ನು 2024ರ ಆಗಸ್ಟ್ 1ರಂದು ಸುಪ್ರೀಂ ಕೋರ್ಟ್ ನೀಡಿದೆ. ಸಾಮಾಜಿಕ ಕಾಳಜಿಯನ್ನಿಟ್ಟುಕೊಂಡು ಎಲ್ಲಿಯೂ ಸಣ್ಣ ಲೋಪ ಆಗದ ರೀತಿ ಒಳಮೀಸಲಾತಿ ಹಂಚಿಕೆಗೆ ಕ್ರಮ ಕೈಗೊಂಡಿದ್ದೀರಿ. ಎಷ್ಟೇ ಒತ್ತಡ ಬಂದರೂ ಯಾವುದಕ್ಕೂ ಜಗ್ಗದೆ 101 ಜಾತಿಗಳ ಪ್ರಸ್ತುತ ಸ್ಥಿತಿಗತಿ ಅಧ್ಯಯನದೊಂದಿಗೆ ನಿಖರ ಮಾಹಿತಿ ಸಂಗ್ರಹಿಸಲು ಕಾರಣಕರ್ತರಾಗಿದ್ದೀರಿ’ ಎಂದು ತಿಳಿಸಿದ್ದಾರೆ.
‘ಜಾತಿ ಸಂಬಂಧಿತಗಳಿಗಿಂತಲೂ ಹಿಂದುಳಿರುವಿಕೆ ಪ್ರಕಾರ ಎ, ಬಿ, ಸಿ, ಡಿ, ಇ ಎಂದು ಗುಂಪು ರಚಿಸಲಾಗಿದೆ. ಆದರೆ, ಈ ವಿಷಯದಲ್ಲಿ ನಮ್ಮ ಸಹೋದರರಾದ ಹೊಲೆಯ ಸಮುದಾಯದವರು ಗೊಂದಲಕ್ಕೆ ಸಿಲುಕಿದ್ದಾರೆ. ವಾಸ್ತವವಾಗಿ ಜಾತಿ ಆಧಾರಿತ ಗುಂಪು ರಚಿಸಿಲ್ಲ, ಅವರವರ ಹಿಂದುಳಿವಿಕೆ ಪರಿಗಣಿಸಿ ವರ್ಗೀಕರಣ ಮಾಡಲಾಗಿದೆ. ಇದು ಸುಪ್ರೀಂ ಕೋರ್ಟ್ ಆದೇಶ ಆಗಿದೆ’ ಎಂದು ವಿವರಿಸಿದ್ದಾರೆ.
‘ಈ ಸತ್ಯ ಅರಿತೋ ಅಥವಾ ತಿಳಿಯದೆಯೋ ಛಲವಾದಿ ಸಮುದಾಯದಲ್ಲಿನ ಕೆಲವರು ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ. ಆದ್ದರಿಂದ ಈ ವಿಷಯಕ್ಕೆ ತಾವು ಯಾವುದೇ ರೀತಿ ಮನ್ನಣೆ ನೀಡಬಾರದು. ಒಂದು ವೇಳೆ ಮಾದಿಗ (ಬಿ) ಗುಂಪಿನಲ್ಲಿರುವ ಛಲವಾದಿ ಸಂಬಂಧಿತ ಜಾತಿಗಳಾದ ಪರಿಯಾ, ಮುಗೇರಾ ಇವುಗಳನ್ನು ಹೊಲೆಯ (ಸಿ) ಗುಂಪಿಗೆ ಸೇರಿಸಿದರೂ ಮಾದಿಗರಿರುವ (ಬಿ) ಗುಂಪು ಜನಸಂಖ್ಯೆಯಲ್ಲಿ ಹೆಚ್ಚು ಇರುತ್ತದೆ. ಇಲ್ಲಿ ಮುಖ್ಯವಾಗಿ ಜಾತಿ ಜನಸಂಖ್ಯೆ ಮೇಲೆ ಮೀಸಲಾತಿ ಹಂಚಿಕೆ ಆಗಿಲ್ಲವೆಂಬ ಸತ್ಯ ಅರಿತುಕೊಳ್ಳಬೇಕು. ಅವರವರ ಹಿಂದುಳಿವಿಕೆಯನ್ನೇ ಪ್ರಧಾನವಾಗಿಟ್ಟುಕೊಂಡು ಮೀಸಲಾತಿ ವರ್ಗೀಕರಣ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
‘ಪ್ರಜ್ಞಾವಂತರು, ಶಿಕ್ಷಣ, ಉದ್ಯೋಗ, ಸಾಮಾಜಿಕ ಸ್ಥಿತಿಗತಿಯಲ್ಲಿ ಮಾದಿಗರಿಗಿಂತಲೂ ಮುಂದಿರುವ ಸಹೋದರರಾದ ಹೊಲೆಯ ಸಮುದಾಯದವರು ಒಳಮೀಸಲಾತಿ ವರ್ಗೀಕರಣವನ್ನು ಸಂವಿಧಾನದ ಕಣ್ಣುಗಳಲ್ಲಿ ನೋಡಬೇಕಾಗಿದೆ. ಯಾವುದೇ ರೀತಿ ವೈಯಕ್ತಿಕ ನೆಲೆಗಟ್ಟಿನಲ್ಲಿ ಪರಿಶೀಲಿಸಿದರೆ ಅಂಬೇಡ್ಕರ್ ಸಿದ್ಧಾಂತಕ್ಕೆ ವಿರುದ್ಧ ನಡೆ ಆಗಿರಲಿದೆ ಎಂಬುದನ್ನು ಮನದಟ್ಟು ಮಾಡಿಕೊಡಬೇಕು. ದೇವನೂರು ಮಹಾದೇವ ಅಂತಹ ಹಿರಿಯ ಸಾಹಿತಿಗಳು ಪ್ರಜ್ಞಾಪೂರ್ವಕವಾಗಿಯೇ ಮುಖ್ಯಮಂತ್ರಿಗೆ ಪತ್ರ ಬರೆದು ಯಥವತ್ತಾಗಿ ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿರುವುದು, ಇದೇ ರೀತಿ ಅನೇಕ ಅನ್ಯ ಸಮುದಾಯದವರು, ಛಲವಾದಿ ಜಾತಿಯ ಪ್ರಜ್ಞಾವಂತರು ವರದಿ ಜಾರಿಗೊಳಿಸುವಂತೆ ಕೋರಿದ್ದಾರೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.