ಹೊಳಲ್ಕೆರೆ: ತಾಲ್ಲೂಕಿನ ಪಾಪೇನಹಳ್ಳಿಯಲ್ಲಿ ₹16.56 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಮಂಗಳವಾರ ಚಾಲನೆ ನೀಡಿದರು.
‘ಈ ರಸ್ತೆ ಪಾಪೇನಹಳ್ಳಿಯಿಂದ ಸಿರಾಪನಹಳ್ಳಿ, ಮಲಸಿಂಗನಹಳ್ಳಿ, ಟಿ.ಎಮ್ಮಿಗನೂರು ಮೂಲಕ ರಾಷ್ಟ್ರೀಯ ಹೆದ್ದಾರಿ-13ಕ್ಕೆ ಸಂಪರ್ಕ ಕಲ್ಪಿಸಲಿದೆ. ಪಾಪೇನಹಳ್ಳಿ ಹೊಳಲ್ಕೆರೆ ತಾಲ್ಲೂಕಿಗೆ ಸೇರಿದ್ದು, ಇದು ಹೊಸದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಗಿ ಮತ್ತೆ ನಮ್ಮ ತಾಲ್ಲೂಕನ್ನು ಸಂಪರ್ಕಿಸುತ್ತದೆ. ಆದ್ದರಿಂದ ಹೊಸದುರ್ಗ ಕ್ಷೇತ್ರದ ಶಾಸಕ ಬಿ.ಜಿ.ಗೋವಿಂದಪ್ಪ ಅವರ ಉಪಸ್ಥಿತಿಯಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅವರೂ ಜನಪರ ಕಾಳಜಿ ಉಳ್ಳವರು. ಬಡವರು, ರೈತರ ಬಗ್ಗೆ ಒಲವು ಹೊಂದಿದ್ದಾರೆ. ಅವರು ರಾಜಕಾರಣದಲ್ಲಿ ನನಗೆ ಮಾರ್ಗದರ್ಶಕರಾಗಿದ್ದಾರೆ’ ಎಂದು ಚಂದ್ರಪ್ಪ ಎಂದರು.
ಹೆಚ್ಚು ಬಾಳಿಕೆ ಬರುವ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದ್ದು, ರಸ್ತೆ ನಿರ್ಮಾಣಕ್ಕೂ ಮೊದಲು ಪೈಪ್‌ಲೈನ್ ಅಳವಡಿಸಿಕೊಳ್ಳಿ. ಕಾಮಗಾರಿ ಮುಗಿದ ನಂತರ ರಸ್ತೆಗೆ ಅಡ್ಡಲಾಗಿ ಪೈಪ್ ಅಳವಡಿಸಲು ಗುಂಡಿ ತೆಗೆಯಬೇಡಿ ಎಂದು ಮನವಿ ಮಾಡಿದರು.
‘ಶಾಸಕ ಎಂ.ಚಂದ್ರಪ್ಪ ಅಭಿವೃದ್ದಿ ಕೆಲಸಗಳಲ್ಲಿ ಜಿಲ್ಲೆಯ ಎಲ್ಲಾ ಶಾಸಕರಿಗಿಂತಲೂ ಮುಂಚೂಣಿಯಲ್ಲಿದ್ದಾರೆ. ಅವರು ಉತ್ತಮ ಆಡಳಿತಗಾರ ಹಾಗೂ ಒಳ್ಳೆಯ ಕೆಲಸಗಾರ. ಹಿಡಿದ ಕೆಲಸವನ್ನು ಆಗುವತನಕ ಬಿಡುವುದಿಲ್ಲ. ನಮ್ಮದು ಬೇರೆ ಬೇರೆ ಪಕ್ಷ ಇರಬಹುದು. ಮನಸ್ಸು ಮಾತ್ರ ಒಂದೇ. ಅಭಿವೃದ್ದಿ ವಿಚಾರ ಬಂದಾಗ ಸಾಕಷ್ಟು ಚರ್ಚಿಸುತ್ತೇವೆ. ಮೂರ್ನಾಲ್ಕು ತಿಂಗಳಲ್ಲಿ ಭದ್ರಾ ಯೋಜನೆಯಿಂದ ತಾಲ್ಲೂಕಿಗೆ ನೀರು ಹರಿಯಲಿದೆ. ಮೊದಲು ಹೊಸದುರ್ಗಕ್ಕೆ ನೀರು ಬರುತ್ತದೆ. ನಂತರ ಹೊಳಲ್ಕೆರೆ, ಹಿರಿಯೂರು ತಲುಪುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿ ಯೋಜನೆ ಉದ್ಘಾಟಿಸಲಾಗುವುದು’ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಲಮ್ಮ, ಸದಸ್ಯರಾದ ಗೌರಮ್ಮ, ರೀಟಾ ಅಂಜಿನಪ್ಪ, ಸದಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜಪ್ಪ, ಅಜ್ಜಪ್ಪ, ಮಂಜಪ್ಪ, ರುದ್ರಪ್ಪ, ಹನುಮಂತಪ್ಪ, ವಿರುಪಾಕ್ಷಪ್ಪ, ಕೇಶವ, ದಾಸಯ್ಯನಹಟ್ಟಿ ರಮೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.