
ಚಿತ್ರದುರ್ಗ: ‘ರಾಷ್ಟ್ರೀಯ ಸ್ವಯಂ ಸೇವಾ ಸಂಘ (ಆರ್‌ಎಸ್‌ಎಸ್)ದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಎತ್ತಿರುವ ಪ್ರಶ್ನೆಗಳು ಸಮರ್ಪಕವಾಗಿವೆ. ಅವರಿಗೆ ನಾಡಿನ ಚಿಂತಕರು, ಪ್ರಗತಿಪರ ಸಂಘಟನೆಗಳು ಬೆಂಬಲವಾಗಿ ನಿಲ್ಲಬೇಕು. ನೋಂದಣಿಯೂ ಆಗದ ಆರ್‌ಎಸ್‌ಎಸ್‌ಗೆ ವಿವಿಧ ಚಟುವಟಿಕೆ ನಡೆಯಲು ಎಲ್ಲಿಂದ ಹಣ ಬರುತ್ತದೆ ಎಂಬ ಬಗ್ಗೆ ಅಲ್ಲಿಯ ಮುಖಂಡರು ಸ್ಪಷ್ಟಪಡಿಸಬೇಕು’ ಎಂದು ಚಿಂತಕ ಜೆ.ಯಾದವ ರೆಡ್ಡಿ ಒತ್ತಾಯಿಸಿದರು.
‘ನಮ್ಮ ದೇಶದಲ್ಲಿ ಸಂವಿಧಾನವೇ ಮೊದಲು. ಆದರೆ, ಸಂವಿಧಾನದ ವಿರುದ್ಧ ನಡೆದುಕೊಳ್ಳುತ್ತಿರುವ ಆರ್‌ಎಸ್‌ಎಸ್ ಮುಖಂಡರು ಧರ್ಮ, ಜಾತಿ, ದೇವರ ಹೆಸರಿನಲ್ಲಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಪಾರದರ್ಶಕವಾಗಿ ಸಂಘಟನೆ ನಡೆಸುತ್ತಿದ್ದರೆ ತನ್ನೆಲ್ಲಾ ಚಟುವಟಿಕೆಗಳ ಲೆಕ್ಕೆಪತ್ರವನ್ನು ಸಾರ್ವಜನಿಕರ ಮುಂದಿಡಲಿ. ಕರಾವಳಿ ಭಾಗದಲ್ಲಿ ತಳ ಸಮುದಾಯದ ಯುವಕರು ಆರ್‌ಎಸ್‌ಎಸ್ ಸಹವಾಸದಲ್ಲಿ ಜೀವ ಕಳೆದುಕೊಂಡಿದ್ದಾರೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘1925ರಿಂದಲೂ ಒಂದು ಸಮುದಾಯದ ಜನರು ಮಾತ್ರ ಆರ್‌ಎಸ್‌ಎಸ್‌ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಹೀಗಿದ್ದರೂ ತಾವು ಜಾತಿಯ ಪರವಾಗಿಲ್ಲ ಎಂದು ಮುಖಂಡರು ಹೇಳಿಕೊಳ್ಳುತ್ತಾರೆ. ಜಾತಿವಾದಕ್ಕೆ, ಬ್ರಾಹ್ಮಣ್ಯ ಹರಡಲು, ಯೋಜಿತ ಕೃತ್ಯ ನಡೆಸಲು ಆರ್‌ಎಸ್‌ಎಸ್ ಮುಖಂಡರು ಬಡ ಹುಡುಗರನ್ನು ಬಳಸಿಕೊಳ್ಳುತ್ತಾರೆ. ಎಲ್ಲವನ್ನೂ ಒಳಗೊಳ್ಳುವ, ಎಲ್ಲ ಧರ್ಮಗಳನ್ನು ಒಪ್ಪಿ, ಅಪ್ಪಿಕೊಳ್ಳುವ ಉದಾತ್ತ ಮನೋಭಾವ ಆರ್‌ಎಸ್‌ಎಸ್‌ಗೆ ಇಲ್ಲವಾಗಿದೆ’ ಎಂದು ಹೇಳಿದರು.
‘ಒಳ್ಳೆಯದನ್ನು ಸ್ವೀಕರಿಸುವ ಉದಾತ್ತ ಮನೋಭಾವ ಇರುವವನೇ ಹಿಂದೂ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದಾರೆ. ಸಮಾಜದಲ್ಲಿ ಜ್ವಲಂತ ಸಮಸ್ಯೆಯಾಗಿರುವ ಅಸ್ಪೃಶ್ಯತೆ, ದೌರ್ಜನ್ಯ, ಮಹಿಳಾ ತಾರತಮ್ಯಗಳ ವಿರುದ್ಧ ಆರ್‌ಎಸ್‌ಎಸ್ ಮುಖಂಡರು ಎಂದಿಗೂ ಧ್ವನಿ ಎತ್ತಿಲ್ಲ. ಇಂದಿಗೂ ಚಾತುರ್ವರ್ಣ ವ್ಯವಸ್ಥೆಯನ್ನೇ ಬೆಂಬಲಿಸುತ್ತಿರುವುದು ಅವೈಜ್ಞಾನಿಕ ಹಾಗೂ ಹಾಸ್ಯಾಸ್ಪದವಾಗಿದೆ’ ಎಂದರು.
ವಕೀಲ ಶಿವು ಯಾದವ್ ಮಾತನಾಡಿ, ‘ಆರ್‌ಎಸ್‌ಎಸ್ ಸೇರಿ ವಿವಿಧ ಸಂಘಟನೆಗಳು ಸರ್ಕಾರಿ ಜಾಗಗಳಲ್ಲಿ ಯಾವುದೇ ಚಟುವಟಿಕೆ ನಡೆಸುವುದಕ್ಕೆ ಅನುಮತಿ ಪಡೆಯಬೇಕು ಎಂದು ಸರ್ಕಾರ ಹೇಳಿರುವುದು ಸರಿಯಾಗಿದೆ. ಹಿಂದುತ್ವದ ಹೆಸರಿನಲ್ಲಿ ವಿಷ ಬೀಜ ಬಿತ್ತುತ್ತಿರುವ ಸಂಘಟನೆಯ ಮೇಲೆ ನಿಯಂತ್ರಣ ವಿಧಿಸುವುದು ಅನಿವಾರ್ಯವಾಗಿದೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ಜಯಣ್ಣ, ಸುದರ್ಶನ್, ಸರ್ವೋದಯ ಪಕ್ಷದ ಶಿವಕುಮಾರ್, ಸಮಾಜವಾದಿ ಪಕ್ಷದ ಲಕ್ಷ್ಮಿಕಾಂತ್, ಜನಶಕ್ತಿ ಸಂಘಟನೆಯ ಪುರುಷೋತ್ತಮ್, ಡಿಎಸ್‌ಎಸ್‌ನ ಜಯಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.