ADVERTISEMENT

ರುದ್ರಮ್ಮನಹಳ್ಳಿ: ನಲ್ಲಜರುವ ಓಬಳಸ್ವಾಮಿ ಜಾತ್ರೆಗೆ ವೈಭವದ ತೆರೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 5:49 IST
Last Updated 28 ಜನವರಿ 2026, 5:49 IST
ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ರುದ್ರಮ್ಮನಹಳ್ಳಿಯಲ್ಲಿ ಈಚೆಗೆ ನಲ್ಲಜರುವ ಓಬಳಸ್ವಾಮಿ ಜಾತ್ರೆ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು 
ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ರುದ್ರಮ್ಮನಹಳ್ಳಿಯಲ್ಲಿ ಈಚೆಗೆ ನಲ್ಲಜರುವ ಓಬಳಸ್ವಾಮಿ ಜಾತ್ರೆ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು    

ಮೊಳಕಾಲ್ಮುರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರುದ್ರಮ್ಮನಹಳ್ಳಿಯಲ್ಲಿ ಪ್ರಸಿದ್ಧ ನಲ್ಲಜರುವ ಓಬಳಸ್ವಾಮಿ ಜಾತ್ರೆಯು 4 ದಿನಗಳ ಕಾಲ ವೈಭವದಿಂದ ನಡೆದು ಸೋಮವಾರ ಮುಕ್ತಾಯವಾಯಿತು.

ಪ್ರತಿವರ್ಷ ಶೂನ್ಯ ಮಾಸದಲ್ಲಿ ಈ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಮ್ಯಾಸನಾಯಕ ಜನಾಂಗದ ಕೆಲ ಕಟ್ಟೆಮನೆಗಳಿಗೆ ಈ ದೇವರು ಮನೆ ದೇವರಾಗಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಸಿರುವ ಕಟ್ಟೆಮನೆಯವರು ಇಲ್ಲಿಗೆ ಬಂದು ವಾರ್ಷಿಕವಾಗಿ ಪೂಜೆ ಸಲ್ಲಿಸುವುದು ನಡೆದುಕೊಂಡು ಬಂದಿದೆ.

ಜಾತ್ರೆ ಅಂಗವಾಗಿ ಶುಕ್ರವಾರ ಸಂಜೆ ದೇವರ ಎತ್ತುಗಳನ್ನು ದೇವಸ್ಥಾನ ಮುಂಭಾಗದಲ್ಲಿ ಪೂಜೆ ಸಲ್ಲಿಸುವ ಮೂಲಕ ಸ್ವಾಗತ ಮಾಡಿಕೊಳ್ಳಲಾಯಿತು. ಶನಿವಾರ ಬುಡಕಟ್ಟು ವಾದ್ಯಗಳು ಹಾಗೂ ಸಂಪ್ರದಾಯಗಳ ಸಮ್ಮುಖದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಗಂಗಾಪೂಜೆಗೆ ಕರೆದುಕೊಂಡು ಹೋಗಲಾಯಿತು. ಮರಳಿ ಬಂದು ಸಂಜೆ ದೇವರುಗಳನ್ನು ಗುಡಿದುಂಬಿಸಲಾಯಿತು.

ADVERTISEMENT

ಭಾನುವಾರ ಬೆಳಿಗ್ಗೆ ಮೀಸಲು ಹುರಳಿಯಿಂದ ತಯಾರಿಸಿದ್ದ ಗುಗ್ಗರಿ ನೈವೇದ್ಯ ಅರ್ಪಣೆ, 101 ಪೂಜೆ, ಸೂರ್ಯಪಾಡ್ಯ ತೀರಿಸುವ ಕಾರ್ಯಕ್ರಮ, ದೇವಸ್ಥಾನ ಮುಂಭಾಗದಲ್ಲಿ ದೇವರ ಎತ್ತುಗಳನ್ನು ಓಡಿಸುವುದು, ನಂತರ ದಾಸೋಹ ಮತ್ತು ಮಣೇವು ಅರ್ಪಣೆ ಕಾರ್ಯಕ್ರಮ ನಡೆದವು.

ಸೋಮವಾರ ಬೆಳಿಗ್ಗೆ ಮಹಾ ಮಂಗಳಾರತಿ, ಅಣ್ಣ ತಮ್ಮಂದಿರರಿಗೆ ಹಣ್ಣು– ಹೂವು ವಿತರಣೆ, ಪ್ರಸಾದ ವಿನಿಯೋಗ ನಂತರ ದೇವರ ಎತ್ತುಗಳನ್ನು ಬೀಳ್ಕೊಡುವ ಮೂಲಕ ಜಾತ್ರೆಗೆ ತೆರೆಬಿದ್ದಿತು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.