
ಚಳ್ಳಕೆರೆ: ಗ್ರಾಮೀಣಾಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪಾತ್ರ ಹಿರಿದಾದುದು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ನಗರದ ಪಾವಗಡ ರಸ್ತೆ ಶ್ರೀ ಸಾಯಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿ, ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಜಿಲ್ಲಾ ಸಹಕಾರ ಇಲಾಖೆಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ಆರ್ಥಿಕ ಅಭಿವೃದ್ಧಿ ಸಲುವಾಗಿ ಜವಾಹರಲಾಲ್ ನೆಹರೂ ಸಹಕಾರಿ ಸಂಘಗಳನ್ನು ಸ್ಥಾಪಿಸಿದ್ದರು. ಈಗ ದೇಶದಲ್ಲಿ 8 ಲಕ್ಷಕ್ಕೂ ಹೆಚ್ಚು ಸಂಘಗಗಳು ಕಾರ್ಯ ನಿರ್ವಹಿಸುತ್ತಿವೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರಲ್ಲಿ ರೈತರಿಗೆ ಸಾಲ ಸೌಲಭ್ಯ ಒದಗಿಸುತ್ತಿದೆ. ಹೀಗಾಗಿ ಸಹಕಾರಿ ತತ್ವವಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಕೃಷಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕು ಎಂದು ರೈತರಿಗೆ ಸಲಹೆ ನೀಡಿದರು.
ತಾಲ್ಲೂಕಿನ ಕೃಷಿ ಮತ್ತು ವ್ಯವಸಾಯ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ನಗರದಲ್ಲಿ ಸಹಕಾರ ಭವನಕ್ಕೆ ನಿವೇಶನ ನೀಡುವುದಲ್ಲದೆ ಭವನ ನಿರ್ಮಾಣಕ್ಕೆ ಹೆಚ್ಚು ಅನುದಾನ ನೀಡಬೇಕು ಎಂದು ಶಾಸಕರಿಗೆ ಶಿಮೂಲ್ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ ಜಿಲ್ಲಾ ಘಟಕದ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಮನವಿ ಮಾಡಿದರು.
ಸಹಕಾರ ಯೂನಿಯನ್ ಜಿಲ್ಲಾ ಘಟಕದ ಎಚ್.ಎನ್. ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಉಪಾಧ್ಯಕ್ಷ ರವಿಕುಮಾರ್, ಆರ್. ರಾಮರೆಡ್ಡಿ, ಆರ್. ಮಲ್ಲೇಶಪ್ಪ ಮಾತನಾಡಿದರು.
ನಿರ್ದೇಶಕ ಜಗ್ಗಣ್ಣ, ಅಜ್ಜಪ್ಪ, ಮಂಜುನಾಥ, ಚನ್ನಬಸಪ್ಪ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್ ಉಲ್ಲಾ ಷರೀಪ್, ಅಂಜನಮೂರ್ತಿ, ಮಲ್ಲಿಕಾರ್ಜುನ, ದಿಲೀಪ್, ಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.