ADVERTISEMENT

ನಟನ ಅಪಘಾತ ಯುವಜನರಿಗೆ ಪಾಠ

ಮಾಜಿ ಸಚಿವ ಎಚ್.ಆಂಜನೇಯ ಅಭಿಮತ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 15:13 IST
Last Updated 16 ಜೂನ್ 2021, 15:13 IST
ಚಿತ್ರದುರ್ಗ ತಾಲ್ಲೂಕಿನ ಸೀಬಾರದಲ್ಲಿ ಬುಧವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ವಿಜಯ್‌ ಭಾವಚಿತ್ರಕ್ಕೆ ಮಾಜಿ ಸಚಿವ ಎಚ್‌.ಆಂಜನೇಯ ಪುಷ್ಪನಮನ ಸಲ್ಲಿಸಿದರು. ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನರಸಿಂಹರಾಜು ಇದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಸೀಬಾರದಲ್ಲಿ ಬುಧವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ವಿಜಯ್‌ ಭಾವಚಿತ್ರಕ್ಕೆ ಮಾಜಿ ಸಚಿವ ಎಚ್‌.ಆಂಜನೇಯ ಪುಷ್ಪನಮನ ಸಲ್ಲಿಸಿದರು. ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನರಸಿಂಹರಾಜು ಇದ್ದಾರೆ.   

ಸೀಬಾರ(ಚಿತ್ರದುರ್ಗ): ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಹೆಲ್ಮೆಟ್‌ ಧರಿಸಿದ್ದರೆ ಅಪರೂಪದ ನಟ ಸಂಚಾರಿ ವಿಜಯ್ ಅವರ ಜೀವ ಉಳಿಯುತ್ತಿತ್ತು. ಈ ಅಪಘಾತದಿಂದ ಯುವ ಸಮೂಹ ಎಚ್ಚರಿಕೆಯ ಪಾಠ ಕಲಿಯಬೇಕಿದೆ ಎಂದು ಮಾಜಿ ಸಚಿವ ಎಚ್‌.ಆಂಜನೇಯ ಅಭಿಪ್ರಾಯಪಟ್ಟರು.

ಚಿತ್ರದುರ್ಗ ತಾಲ್ಲೂಕಿನ ಸೀಬಾರದ ಕಚೇರಿಯಲ್ಲಿ ಬುಧವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ವಿಜಯ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

‘ಹೆಲ್ಮೆಟ್ ಧರಿಸುವುದು ಪೊಲೀಸರ ಭಯಕ್ಕೆ ಅಲ್ಲ ಎಂಬ ಅರಿವು ಯುವಸಮೂಹದಲ್ಲಿ ಮೂಡಬೇಕು. ಇದರಿಂದ ಕೂದಲು ಉದರುತ್ತದೆ ಎಂಬ ಕಲ್ಪನೆ ಬೆಳೆಸಿಕೊಂಡರೆ ಜೀವವನ್ನೇ ಬಲಿಕೊಡಬೇಕಾಗುತ್ತದೆ. ಹೆಲ್ಮೆಟ್‌ ಧರಿಸದ ಪರಿಣಾಮ ವಿಜಯ್‌ ಪ್ರಾಣ ಕಳೆದುಕೊಳ್ಳಬೇಕಾಯಿತು ಎಂಬುದನ್ನು ಪೊಲೀಸರು ಹಾಗೂ ವೈದ್ಯರೇ ಸ್ಪಷ್ಟಪಡಿಸಿದ್ದಾರೆ’ ಎಂದು ಹೇಳಿದರು.

ADVERTISEMENT

‘ತಾಯಿ ಮಾದಿಗ ಸಮುದಾಯ ಹಾಗೂ ತಂದೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ್ದರಿಂದ ವಿಜಯ್‌ ಅವರಲ್ಲಿ ಜಾತ್ಯತೀತ ನಡೆ ಬೇರೂರಿತ್ತು. ಜಾತಿ ವ್ಯವಸ್ಥೆ ಬಲವಾಗಿದ್ದ ಕಾಲದಲ್ಲಿ ಪೋಷಕರು ಅಂತರ್ಜಾತಿ ವಿವಾಹವಾದ ಕುರಿತು ವಿಜಯ್‌ ಆಪ್ತರೊಂದಿಗೆ ಹಂಚಿಕೊಂಡಿದ್ದರು. ಜಾತಿ-ಧರ್ಮದ ಬೇಲಿ ದಾಟಿ ಬೆಳೆಯಬೇಕು ಎಂಬ ಕನಸು ಕಟ್ಟಿಕೊಂಡಿದ್ದರು’ ಎಂದರು.

‘ಅಭೂತಪೂರ್ವ ನಟನೆ ಮೂಲಕ ಚಿಕ್ಕ ವಯಸ್ಸಿನಲ್ಲೇ ಕನ್ನಡಿಗರ ಮನಗೆದ್ದ ಅಪರೂಪದ ನಟ ವಿಜಯ್‌. ‘ನಾನು ಅವನಲ್ಲ ಅವಳು’ ಚಿತ್ರದಲ್ಲಿನ ನೈಜ ನಟನೆಗೆ ರಾಷ್ಟ್ರಮಟ್ಟದ ಶ್ರೇಷ್ಠ ನಟ ಪ್ರಶಸ್ತಿಗೆ ಭಾಜನರಾದರು. ಅವರ ಸೇವಾ

ಕಾರ್ಯ, ನೊಂದವರಿಗೆ ಮಿಡಿಯುತ್ತಿದ್ದ ಹೃದಯವಂತಿಕೆ, ಅಹಂಕಾರ ರಹಿತ ಜೀವನ ನಿಜಕ್ಕೂ ಯುವ ಪೀಳಿಗೆಗೆ ಮಾದರಿ ಆಗಬೇಕು’ ಎಂದು ಹೇಳಿದರು.

ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನರಸಿಂಹರಾಜು, ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ತಾಲ್ಲೂಕು ಘಟಕದ ಅಧ್ಯಕ್ಷ ಅನೀಲ್ ಕೋಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.