ADVERTISEMENT

‘ಮರಳು ಮಾಫಿಯಾ ತಡೆಯದಿದ್ದರೆ ಪ್ರತಿಭಟನೆ:ಹೊಳಲ್ಕೆರೆ ಶಾಸಕ ಚಂದ್ರಪ್ಪ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 13:54 IST
Last Updated 7 ಜನವರಿ 2019, 13:54 IST
ಎಂ. ಚಂದ್ರಪ್ಪ, ಶಾಸಕ
ಎಂ. ಚಂದ್ರಪ್ಪ, ಶಾಸಕ   

ಚಿತ್ರದುರ್ಗ: ‘ಜಿಲ್ಲೆಯಲ್ಲಿ ಅವ್ಯಾಹತವಾಗಿ ಮರಳು ಮಾಫಿಯಾ ನಡೆಯುತ್ತಿದ್ದು, ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಸಹಸ್ರಾರು ಮಂದಿಯನ್ನು ಸೇರಿಸಿ ಠಾಣೆಗಳ ಮುಂಭಾಗ ಪ್ರತಿಭಟಿಸುತ್ತೇವೆ’ ಎಂದು ಹೊಳಲ್ಕೆರೆ ಶಾಸಕ ಚಂದ್ರಪ್ಪ ಎಚ್ಚರಿಸಿದರು.

‘ನಿತ್ಯವೂ ಸಾವಿರಾರು ಲೋಡ್ ಮರಳು ಬೆಂಗಳೂರಿಗೆ ಹೋಗುತ್ತಿದೆ. ಪಟ್ಟಭದ್ರಾ ಹಿತಾಸಕ್ತಿಗಳಿಂದ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಲಂಚದ ರೂಪದಲ್ಲಿ ಹಣ ಹೋಗುತ್ತಿದ್ದು, ಯಾವುದೇ ಕ್ರಮಕ್ಕೆ ಪೊಲೀಸರು ಮುಂದಾಗುತ್ತಿಲ್ಲ’ ಎಂದು ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಎಗ್ಗಿಲ್ಲದೆ ರಾಜ್ಯದಾದ್ಯಂತ ನಡೆಯುತ್ತಿರುವ ಮರಳು ಮಾಫಿಯಾ ತಡೆಯಲು ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ, ನಾನೂ ಸೇರಿ ಬಿಜೆಪಿಯ ಅನೇಕ ಶಾಸಕರು ಒತ್ತಾಯಿಸಿದ್ದೇವೆ. ಆದರೂ ಸಮ್ಮಿಶ್ರ ಸರ್ಕಾರ ಕಡಿವಾಣ ಹಾಕಲು ಮುಂದಾಗಿಲ್ಲ. ಅದರಲ್ಲಿ ಸರ್ಕಾರವೂ ಶಾಮೀಲಾಗಿದ್ದು, ಇದು ನಾಚಿಕೆಗೆಟ್ಟ ಸರ್ಕಾರವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರಂಭ ಶೂರತ್ವ ತೋರುತ್ತಾರೆ. ಅಧಿಕಾರ ವಹಿಸಿಕೊಂಡ ಮೊದಲ ವಾರ ಎಲ್ಲ ರೀತಿಯ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಾರೆ. ಹಿಂದಿನ ಎಸ್‌ಪಿಗಿಂತಲೂ ಹೆಚ್ಚಿನ ‘ರೇಟ್ ಫಿಕ್ಸ್’ ಮಾಡಲು ಅವರು ಹೂಡುವ ತಂತ್ರಗಾರಿಕೆ ಇದು. ಪಿಎಸ್‌ಐಯಿಂದ ಎಸ್‌ಪಿವರೆಗೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ’ ಎಂದು ಆರೋಪಿಸಿದರು.

‘ಬಡವರು ಮನೆ ಕಟ್ಟಿಕೊಳ್ಳಲು ಒಂದು ಎತ್ತಿನ ಗಾಡಿಯಲ್ಲಿ ಮರಳು ತೆಗೆದುಕೊಂಡು ಹೋಗುತ್ತಿದ್ದರೆ ಅವರ ವಿರುದ್ಧ ಎಸ್‌ಐಗಳು ಪ್ರಕರಣ ದಾಖಲಿಸುತ್ತಾರೆ. ಲಾರಿಗಳಲ್ಲಿ ಅಕ್ರಮವಾಗಿ ಸಾಗಿಸುವವರ ಬಳಿ ಹಣ ಪಡೆದು ಸುಲಭ ಮಾರ್ಗ ತೋರಿಸುತ್ತಾರೆ. ಇದರ ವಿರುದ್ಧ ದನಿ ಎತ್ತಿದ ಶಾಸಕ ಗೂಳಿಹಟ್ಟಿ ಡಿ. ಶೇಖರ್, ಬಡವರ ವಿರುದ್ಧ ಪ್ರಕರಣ ದಾಖಲಿಸಬೇಡಿ. ಅಕ್ರಮ ತಡೆಯಿರಿ ಎಂದು ಮನವಿ ಮಾಡಿದರೂ ಸ್ಪಂದಿಸಿಲ್ಲ. ಇದರಿಂದ ನೊಂದು ಪೊಲೀಸ್ ಠಾಣೆ ಮುಂಭಾಗದಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ’ ಎಂದು ಹೇಳಿದರು.

‘ಜನರು, ಮತದಾರರು ನಮ್ಮನ್ನು ಚುನಾಯಿಸಿ ಕಳಿಸಿದ್ದಾರೆ. ಅವರಿಗಾಗಿ ನಾನೂ ಏನು ಬೇಕಾದರೂ ಮಾಡಲು ಸಿದ್ಧ. ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳು ಬಡವರ ಪರ ಕೆಲಸ ಮಾಡಬೇಕು. ಮರಳು ಮಾಫಿಯಾ ತಡೆಯಬೇಕು. ಇಲ್ಲದಿದ್ದರೆ, ಜಿಲ್ಲಾ ಬಂದ್‌ಗೆ ಕರೆ ನೀಡಲಿದ್ದೇವೆ’ ಎಂದು ಚಂದ್ರಪ್ಪ ಎಚ್ಚರಿಸಿದರು.

ಬಿಜೆಪಿ ಮುಖಂಡರಾದ ಶಾಮಿಲ್ ಶಿವಣ್ಣ, ಎಲ್‌.ಬಿ. ರಾಜಶೇಖರ್, ಮೋಹನ್, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.