
ಹೊಸದುರ್ಗ: ಸಾಣೇಹಳ್ಳಿ ಶ್ರೀಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪಟ್ಟಾಭಿಷೇಕವಾಗಿ 48 ವರ್ಷ ಪೂರೈಸಿ, 49 ವರ್ಷಕ್ಕೆ ಪಾದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ರಂಗಶಾಲೆ ಶಿಕ್ಷಕರು, ವಿದ್ಯಾರ್ಥಿಗಳು, ಶ್ರೀಮಠದ ಸಿಬ್ಬಂದಿ, ಗ್ರಾಮಸ್ಥರು ಹಾಗೂ ಭಕ್ತರು ಗುರುವಾರ ಅಭಿನಂದನೆ ಸಲ್ಲಿಸಿದರು.
ಅಭಿನಂದನೆ ಸ್ವೀಕರಿಸಿದ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಸ್ವಾಮಿಗಳಿಗೆ ಗೌರವ ಬರುವುದು ಸ್ವಾಮಿಗಳ ಸುತ್ತಮುತ್ತ ಇರುವ ಜನರ ನಡವಳಿಕೆಗಳಿಂದ. ನಮ್ಮ ಸುತ್ತಮುತ್ತಲಿದ್ದವರು ಕಾಯಕ ಶ್ರದ್ಧೆ ಮೈಗೂಡಿಸಿಕೊಂಡು, ಸನ್ಮಾರ್ಗದಲ್ಲಿ ಸಾಗಿದರೆ, ಸ್ವಾಮೀಜಿಯವರಿಗೂ ಗೌರವ ದೊರೆಯುತ್ತದೆ’ ಎಂದರು.
‘ಪಟ್ಟಾಧಿಕಾರಿ ಆದ ಸಂದರ್ಭದಲ್ಲಿ ಸಾಣೇಹಳ್ಳಿಗಿಂತ ಹೆಚ್ಚು ಸಿರಿಗೆರೆಯಲ್ಲೇ ಇದ್ದದ್ದು. ನಮ್ಮ ಹಿರಿಯ ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಒಬ್ಬೊಬ್ಬರಿಗೆ ಒಂದೊಂದು ಕೆಲಸದ ಜವಾಬ್ದಾರಿಯನ್ನು ಕೊಟ್ಟಿದ್ದರು. ಸಿರಿಗೆರೆ ಶ್ರೀಗಳಿಗೆ, ನಮಗೆ ಹಾಗೂ ಮರುಳಸಿದ್ದಯ್ಯನವರಿಗೆ ಅವರ ಕೊಟ್ಟ ಜವಾಬ್ದಾರಿಯನ್ನು ಕಾಯಾ, ವಾಚಾ, ಮನಸ್ಸಿನಿಂದ ಮಾಡುತ್ತಿದ್ದೇವೆ. ಪಟ್ಟಾಭಿಷೇಕವಾಗಿ ಎಷ್ಟು ವರ್ಷ ಆಯ್ತು ಎನ್ನುವುದಕ್ಕಿಂತ ಅಷ್ಟು ವರ್ಷ ನಾವೇನು ಕೆಲಸ ಮಾಡಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳೋಣ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
‘ಇಡೀ ಕರ್ನಾಟಕದಲ್ಲಿ ವೈಚಾರಿಕ ಸ್ವಾಮಿಗಳು ಯಾರಾದರು ಇದ್ದರೆ ಪಂಡಿತಾರಾಧ್ಯ ಸ್ವಾಮಿಗಳು ಮಾತ್ರ. ನಾನು ಯಾವುದೇ ಮಠಗಳಿಗೆ ಹೋದವನಲ್ಲ. ಆದರೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ರಂಗಭೂಮಿಯ ಮೂಲಕ ಸದಾ ವೈಚಾರಿಕ ಚಿಂತನೆ ಮಾಡುತ್ತಿದ್ದಾರೆ. ಇದು ನನ್ನನ್ನು ಮಠದ ಕಡೆ ಸೆಳೆಯುವಂತಾಯಿತು’ ಎಂದು ರಂಗಕರ್ಮಿ ನಟರಾಜ ಹೊನ್ನವಳ್ಳಿ ಹೇಳಿದರು.
ರಂಗಶಾಲೆಯ ಪ್ರಾಚಾರ್ಯ ರಘು ಪುರಪ್ಪೇಮನೆ, ಶಿವಕುಮಾರ ಕಲಾ ಸಂಘದ ಸದಸ್ಯ ಸಾ.ನಿ. ರವಿಕುಮಾರ್, ಮುಖ್ಯ ಶಿಕ್ಷಕರಾದ ಶಿವಕುಮಾರ್ ಬಿ.ಎಸ್., ಬಸವರಾಜ್, ರಂಗಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಶ್ರೀಮಠದ ಭಕ್ತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.