ಹೊಸದುರ್ಗ: ಸಾಣೇಹಳ್ಳಿಯಿಂದ ಸಂತೇಬೆನ್ನೂರಿಗೆ ನಮ್ಮ ನಡೆ ಸರ್ವೋದಯದೆಡೆಗೆ’ ಪಾದಯಾತ್ರೆ ಜ. 27ರಿಂದ 30 ರವರಗೆ ನಾಲ್ಕು ದಿನಗಳ ಕಾಲ ನಡೆಯಲಿದೆ.
ಜ. 27ರಂದು ಬೆಳಿಗ್ಗೆ 7ಕ್ಕೆ ಸಾಣೇಹಳ್ಳಿಯ ಶ್ರೀಮಠದ ಆವರಣದಲ್ಲಿ ಶಿವಧ್ವಜಾರೋಹಣ, ಶಿವಮಂತ್ರ ಲೇಖನ, ಚಿಂತನ ಕಾರ್ಯಕ್ರಮ ನಡೆಯಲಿದೆ. ನಂತರ ಪಾದಯಾತ್ರೆ ಮುಂದುವರಿಯುತ್ತದೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪಾದಯಾತ್ರೆಯೂ ಸಾಂಸ್ಕೃತಿಕ ಕ್ಷೇತ್ರ ಸಾಣೇಹಳ್ಳಿಯಲ್ಲಿ ಜ. 27ರಂದು ಪ್ರಾರಂಭವಾಗಿ 30ರಂದು ಐತಿಹಾಸಿಕ ಕ್ಷೇತ್ರ ಸಂತೇಬೆನ್ನೂರಿನಲ್ಲಿ ಸಮಾಪನೆಗೊಳ್ಳಲಿದೆ. ಪ್ರತಿದಿನ 20ರಿಂದ 22ಕಿ.ಮೀ. ಪಾದಯಾತ್ರೆ ನಡೆಯುತ್ತದೆ. ಮಧ್ಯಾಹ್ನ ಮತ್ತು ಸಂಜೆ ಸಾರ್ವಜನಿಕ ಕಾರ್ಯಕ್ರಮ, ಕ್ರಾಂತಿಗೀತೆಗಳು, ಬೀದಿನಾಟಕ ಮತ್ತು ಉಪನ್ಯಾಸ ನಡೆಯಲಿವೆ.
27ರ ಮಧ್ಯಾಹ್ನ 1ಕ್ಕೆ ಬೇಗೂರಿನಲ್ಲಿ, ಸಂಜೆ 7ಕ್ಕೆ ಅಜ್ಜಂಪುರದಲ್ಲಿ, 28ರಂದು ಮಧ್ಯಾಹ್ನ 1ಕ್ಕೆ ಬುಕ್ಕಾಂಬುದಿಯಲ್ಲಿ, ಸಂಜೆ 7ಕ್ಕೆ ತಾವರಕೆರೆಯಲ್ಲಿ, 29ರ ಮಧ್ಯಾಹ್ನ ಪಾಂಡೋಮಟ್ಟಿಯಲ್ಲಿ, ಸಂಜೆ ಚನ್ನಗಿರಿಯಲ್ಲಿ, 30ರಂದು ಮಧ್ಯಾಹ್ನ 1 ಗಂಟೆಗೆ ದೇವರಹಳ್ಳಿಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅಂದು ಸಂಜೆ 7 ಗಂಟೆಗೆ ಸಂತೇಬೆನ್ನೂರಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
‘ಪ್ರಸ್ತುತ ಜನರಲ್ಲಿ ಪರಿಸರ ಕಾಳಜಿ ಕಡಿಮೆ ಆಗಿದೆ. ಕೃಷಿ ಬದಲಾವಣೆ ಆಗಿದೆ. ಆರೋಗ್ಯ ಹದಗೆಟ್ಟಿದೆ. ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ. ರಾಜಕೀಯ ಕ್ಷೇತ್ರ ಕುಲಗೆಟ್ಟಿದೆ. ಈ ಐದು ಕ್ಷೇತ್ರಗಳಲ್ಲಿ ಜನರನ್ನು ಜಾಗೃತಗೊಳಿಸಿದರೆ ಮತ್ತೆ ಕಲ್ಯಾಣ ರಾಜ್ಯವನ್ನು ನೆಲೆಗೊಳಿಸಲು ಸಾಧ್ಯ. ಈ ನೆಲೆಯಲ್ಲಿ ಇದೊಂದು ವಿಶಿಷ್ಟ, ವಿನೂತನ ಪಾದಯಾತ್ರೆ’ ಎಂದು ಸಾಣೇಹಳ್ಳಿ ಶ್ರೀ ಹೇಳಿದರು.
ಪಾದಯಾತ್ರೆಯಲ್ಲಿ ಸಾರ್ವಜನಿಕರು, ಸಾಹಿತಿಗಳು, ಮಠಾಧೀಶರು, ಚಿಂತಕರು ಭಕ್ತರು ಸೇರಿ ಹಲವರು ಭಾಗವಹಿಸಲಿದ್ದಾರೆ. ಪಾದಯಾತ್ರೆ ಕೇವಲ ಯಾತ್ರೆಯಲ್ಲ, ಗಾಂಧೀಜಿಯವರು ಸ್ವಾತಂತ್ರ್ಯ ಪೂರ್ವದಲ್ಲಿ ಜನರನ್ನು ಜಾಗೃತಗೊಳಿಸಲು ಹೇಗೆ ಪಾದಯಾತ್ರೆಗಳನ್ನು ಮಾಡುತ್ತಿದ್ದರೋ ಅದೇ ಮಾದರಿಯಲ್ಲಿ ಈ ಪಾದಯಾತ್ರೆ ನಡೆಯಲಿದೆ. ಇದನ್ನು ಕರ್ನಾಟಕದುದ್ದಕ್ಕೂ ಬೇರೆ ಬೇರೆ ಭಾಗಗಳಲ್ಲಿ ಅಲ್ಲಿಯ ಸಂಘಟಕರು ಮುಂದುವರಿಸಿಕೊಂಡು ಹೋಗಬೇಕು ಎನ್ನುವುದೇ ಸರ್ವೋದಯ ಸಂಘಟನೆಯ ಆಶಯ ಎಂದು ಸ್ವಾಮೀಜಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.