
ಚಿತ್ರದುರ್ಗ: ‘ಸಮಾಜದ ಅನಿಷ್ಟ ಪದ್ದತಿಗಳಾದ ಬಾಲ್ಯ ವಿವಾಹ, ಸತಿಸಹಗಮನ, ಕೇಶ ಮುಂಡನ ವಿರುದ್ದ ಹೋರಾಟ ಮಾಡಿದ ಸಾವಿತ್ರಿ ಬಾಯಿ ಫುಲೆ ಅವರು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಅಪಾರ ಶ್ರಮಿಸಿದರು. ಶಾಲೆ, ಅಬಲಾಶ್ರಮ ಸ್ಥಾಪನೆ ಮಾಡಿ ಮಹಿಳೆಯರ ಪಾಲಿಗೆ ಬೆಳಕಾದರು’ ಎಂದು ಕಾಂಗ್ರೆಸ್ ಹಿಂದುಳಿದ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಡಿ.ಕುಮಾರ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವೃಕ್ಷಕ್ಕೆ ತಿಮ್ಮಕ್ಕನಾದರೇ, ಅಕ್ಷರಕ್ಕೆ ಸಾವಿತ್ರಿಬಾಯಿ ಫುಲೆ ಅವರು ಸ್ಫೂರ್ತಿಯಾಗಿದ್ದಾರೆ. ಬಾಲ್ಯ ವಿವಾಹ ರೂಢಿಯಲ್ಲಿದ್ದ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಮದುವೆಯಾದಾಗ ಅವರಿಗೆ 8 ವರ್ಷ ವಯಸ್ಸಾಗಿತ್ತು. ಅವರಿಗೆ ಮನೆಯೇ ಮೊದಲ ಪಾಠಶಾಲೆಯಾಗಿತ್ತು. ಪತಿ ಜ್ಯೋತಿಬಾ ಫುಲೆ ಅವರೇ ಗುರುಗಳಾಗಿದ್ದರು. 1847ರಲ್ಲಿ ಸಾವಿತ್ರಿಬಾಯಿ ಶಿಕ್ಷಕಿಯ ತರಬೇತಿ ಪಡೆದರು. ಆಗ ಅವರಿಗೆ 17 ವರ್ಷ. ಮಹಾರಾಷ್ಟ್ರದಲ್ಲಿ ತರಬೇತಿ ಪಡೆದ ಮೊದಲ ಶಿಕ್ಷಕಿ ಎಂದು ಹೆಸರು ಗಳಿಸಿದರು’ ಎಂದರು.
‘ಶಿಕ್ಷಕಿ, ಶಾಲಾ ಸಂಚಾಲಕಿ, ಮುಖ್ಯ ಶಿಕ್ಷಕಿಯಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದರು. ಬ್ರಿಟಿಷ್ ಸರ್ಕಾರದವರು ಅವರ ಕೆಲಸ ಕಾರ್ಯಗಳನ್ನು ಪರಿಗಣಿಸಿ ಮೆಚ್ಚುಗೆ ಸೂಸಿದ್ದರು. ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ , ಬ್ರಿಟಿಷ್ ಸರಕಾರ ಇವರಿಗೆ ‘ಭಾರತದ ಮೊದಲ ಮಹಿಳಾ ಶಿಕ್ಷಕಿ’ ಎಂಬ ಬಿರುದು ನೀಡಿದರು. ಮಹಿಳೆಯರು ಕೂಡ ಪುರುಷರಂತೆ ಶಿಕ್ಷಣವನ್ನು ಪಡೆಯಬೇಕೆಂಬ ಮಹದಾಸೆಯಿಂದ ತಮಗೆ ಎದುರಾದ ಕಷ್ಟಗಳನ್ನು ಲೆಕ್ಕಿಸದೇ ಮಹಿಳಾ ಶಿಕ್ಷಣಕ್ಕೆ ದಾರಿ ತೋರಿಸಿದರು’ ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಾತನಾಡಿ, ‘ಪತಿ ಜ್ಯೋತಿಬಾ ಫುಲೆಯವರೊಂದಿಗೆ ಸಾವಿತ್ರಿ ಬಾ ಫುಲೆಯವರು ಸೇರಿ ತಳ ಸಮುದಾಯದ ಹೆಣ್ಣುಮಕ್ಕಳಿಗಾಗಿ ಪುಣೆಯಲ್ಲಿ ಶಾಲೆ ಪ್ರಾರಂಭಿಸಿದರು. 1855ರಲ್ಲಿ ಕೂಲಿ ಕಾರ್ಮಿಕರಿಗಾಗಿ ರಾತ್ರಿಪಾಳಿಯ ಶಾಲೆ ಆರಂಭಿಸಿದರು. ಆ ಮೂಲಕ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮುನ್ನುಡಿ ಬರೆದರು’ ಎಂದರು.
ಕಾರ್ಯಕ್ರಮದಲ್ಲಿ ಸೈಯದ್ ಖುದ್ದುಸ್, ಎಸ್.ಟಿ.ಘಟಕದ ಅಧ್ಯಕ್ಷ ಮಂಜುನಾಥ್, ಮಹಿಳಾ ಕಾಂಗ್ರೆಸ್ ಉಪಾಧಕ್ಷರಾದ ಪವಿತ್ರಾ, ಮಧುಗೌಡ, ನೇತ್ರಾವತಿ ಬಸವರಾಜು, ಪ್ರಕಾಶ ರಾಮನಾಯ್ಕ ಇದ್ದರು.
ಮೊಳಕಾಲ್ಮುರು: ‘ದೇಶದ ಮಹಿಳೆಯರು ಶಿಕ್ಷಣದ ಮೂಲಕ ಮುಖ್ಯವಾಹಿನಿಗೆ ಬರಲು ರಹದಾರಿ ಮಾಡಿಕೊಟ್ಟ ಖ್ಯಾತಿ ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲಬೇಕು’ ಎಂದು ಡಯಟ್ ಉಪನ್ಯಾಸಕ ರಾಮಚಂದ್ರಪ್ಪ ಹೇಳಿದರು.
ಸರ್ಕಾರಿ ಪದವಿ ಕಾಲೇಜಿನ ಸಭಾಂಗಣದಲ್ಲಿ ಸಮಾಜ ಪರಿವರ್ತನಾ ವೇದಿಕೆಯಿಂದ ಶನಿವಾರ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.
‘ದೇಶದ ಪ್ರಥಮ ಶಿಕ್ಷಕಿ ಯಾಗಿಯೂ ಸಾವಿತ್ರಿಬಾಯಿ ಫುಲೆ ಗುರುತಿಸಿಕೊಂಡಿದ್ದಾರೆ. ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ ಶಾಲೆಗಳನ್ನು ಆರಂಭಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದರು. ಇದರ ಫಲವಾಗಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಸೇವೆ ಸಲ್ಲಿಸಲು ಸಾಧ್ಯವಾಗಿದೆ’ ಎಂದರು.
ಸಾಹಿತಿ ಮೋದೂರು ತೇಜ ಮಾತನಾಡಿದರು. ಸಾಧಕ ಶಿಕ್ಷಕಿಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.
ಪಶು ಸಹಾಯಕ ನಿರ್ದೇಶಕ ಡಾ.ರಂಗಪ್ಪ, ಪರಿವರ್ತನಾ ವೇದಿಕೆ ಸ್ಥಾಪಕ ನಾಗಸಮುದ್ರ ಮರಿಸ್ವಾಮಿ, ಗೌರವಾಧ್ಯಕ್ಷ ಭಂಗಿ ನಾಗರಾಜ್, ಕಾರ್ಯದರ್ಶಿ ಎಸ್. ಪರಮೇಶ್, ಸಾಹಿತಿ ಲೋಕೇಶ್ ಪಲ್ಲವಿ, ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ತಿಪ್ಪೇಶ್, ವಡೇರಹಳ್ಳಿ ಬಸವರಾಜ್, ಶಿಕ್ಷಣ ಇಲಾಖೆಯ ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.