ADVERTISEMENT

ಚಿತ್ರದುರ್ಗ: ಲೆಕ್ಕಕ್ಕುಂಟು, ಆಟಕ್ಕಿಲ್ಲದಂತಾದ ಮೈದಾನಗಳು

ಮಳೆ ಬಂದರೆ ಕೆಸರು ಗದ್ದೆಯಂತಾಗುವ ಸ್ಥಿತಿ: ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ಉಂಟಾಗುತ್ತಿರುವ ಹಿನ್ನಡೆ

ಕೆ.ಪಿ.ಓಂಕಾರಮೂರ್ತಿ
ವಿ.ಧನಂಜಯ
Published 13 ಅಕ್ಟೋಬರ್ 2025, 6:08 IST
Last Updated 13 ಅಕ್ಟೋಬರ್ 2025, 6:08 IST
<div class="paragraphs"><p>ಚಿತ್ರದುರ್ಗದ ಬಾರ್‌ಲೈನ್‌ ರಸ್ತೆಯ ಸರ್ಕಾರಿ ಶಾಲೆಯ ಆವರಣದ ದುಸ್ಥಿತಿ&nbsp; </p></div>

ಚಿತ್ರದುರ್ಗದ ಬಾರ್‌ಲೈನ್‌ ರಸ್ತೆಯ ಸರ್ಕಾರಿ ಶಾಲೆಯ ಆವರಣದ ದುಸ್ಥಿತಿ 

   

ಪ್ರಜಾವಾಣಿ ಚಿತ್ರ; ವಿ.ಚಂದ್ರಪ್ಪ

ಚಿತ್ರದುರ್ಗ/ನಾಯಕನಹಟ್ಟಿ: ದಟ್ಟವಾಗಿ ಬೆಳೆದಿರುವ ಹುಲ್ಲು, ಅಲ್ಲಲ್ಲಿ ಬಿದ್ದಿರುವ ಗುಂಡಿಗಳು, ಕಸದ ರಾಶಿ. ನಿಂತಿರುವ ಮಳೆ ನೀರು...

ADVERTISEMENT

ಜಿಲ್ಲೆಯ ಯಾವುದೇ ಶಾಲೆ–ಕಾಲೇಜುಗಳ ಆಟದ ಮೈದಾನಕ್ಕೆ ಕಾಲಿಟ್ಟರೂ ಇಂತಹದೊಂದು ಚಿತ್ರಣ ಕಣ್ಣಿಗೆ ಗೋಚರಿಸುತ್ತದೆ.  

ಚಿತ್ರದುರ್ಗದಲ್ಲಿರುವ ಬಾಲಕರ ಹಾಗೂ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಸೇರಿದಂತೆ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಮೈದಾನಗಳಿವೆ. ಆದರೆ ಅವು ವಿದ್ಯಾರ್ಥಿಗಳ ಉಪಯೋಗಕ್ಕೆ ಬಾರದಂತಾಗಿವೆ. ಇದರಿಂದ ಕ್ರೀಡಾ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ.

ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಎರಡೂವರೆ ಎಕರೆ ಮೈದಾನ ಹೊಂದಿದೆ. ಇಲ್ಲಿ ಕೆಲ ವರ್ಷಗಳ ಹಿಂದೆ ಬ್ಯಾಸ್ಕೆಟ್‌ಬಾಲ್‌, ವಾಲಿಬಾಲ್‌, ಕ್ರಿಕೆಟ್‌ ಅಂಕಣಗಳು ನಿರ್ಮಾಣಗೊಂಡಿದ್ದವು. ನಿರ್ವಹಣೆಯಿಲ್ಲದೆ ಅವು ಹಾಳಾಗಿದ್ದು, ಮಳೆ, ಚರಂಡಿ ನೀರು ಹರಿಯುವ ಕಾರಣಕ್ಕೆ ಈ ಮೈದಾನ ಈಗ ಅಕ್ಷರಶಃ ಕೆಸರು ಗದ್ದೆಯಂತಾಗಿದೆ. 

ಹುಲುಸಾಗಿ ಹುಲ್ಲು ಬೆಳೆದಿದ್ದು, ವಿಷ ಜಂತುಗಳು, ಸೊಳ್ಳೆಗಳ ಕಾಟದಿಂದಾಗಿ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ. ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡುವ ಕನಸು ಹೊಂದಿರುವವರು ಮೂಲ ಸೌಕರ್ಯಗಳ ಕೊರತೆಯ ಕಾರಣಕ್ಕೆ ದಿಕ್ಕು ತೋಚದಂತಾಗಿದ್ದಾರೆ. ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಆವರಣದಲ್ಲಿದ್ದ ಬ್ಯಾಸ್ಕೆಟ್‌ಬಾಲ್‌ ಅಂಕಣವೂ ಈಗ ಅಸ್ತಿತ್ವ ಕಳೆದುಕೊಂಡಿದೆ.

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಮೈದಾನ ಮತ್ತು ಕ್ರೀಡಾ ತರಬೇತುದಾರರ ಕೊರತೆ ಇದೆ. ನಾಯಕನಹಟ್ಟಿ, ತಳಕು ಹೋಬಳಿ ಸೇರಿದಂತೆ ಚಳ್ಳಕೆರೆ ತಾಲ್ಲೂಕಿನಾದ್ಯಂತ ಬಹುತೇಕ ಶಾಲಾ ಕಾಲೇಜುಗಳಿಗೆ ಸುಸಜ್ಜಿತ ಹಾಗೂ ವಿಶಾಲವಾದ ಮೈದಾನಗಳೇ ಇಲ್ಲ. 

ಕೆಲವೇ ಕೆಲವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳಲ್ಲಿ ಆಟದ ಮೈದಾನಗಳಿದ್ದರೂ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. ಹಾಗೇ ಕ್ರೀಡಾ ಸಲಕರಣೆಗಳೂ ಮರೀಚಿಕೆಯಾಗಿವೆ.

ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಮೈದಾನ ಸೇರಿದಂತೆ ಯಾವುದೇ ಮೂಲ ಸೌಲಭ್ಯಗಳಿಲ್ಲ. ಆದರೂ ಮುಖ್ಯಶಿಕ್ಷಕರು, ಸಹಶಿಕ್ಷಕರ ಶ್ರಮದಿಂದಾಗಿ ಪ್ರತಿವರ್ಷ ಕ್ರೀಡಾಕೂಟ ನಡೆಸಲಾಗುತ್ತಿದೆ.  

ಕೆಲ ಶಾಲೆಗಳಲ್ಲಿ ಆವರಣವೇ ಇಲ್ಲ. ಇದು ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗೆ ತೊಡಕಾಗಿ ಪರಿಣಮಿಸಿದೆ. ಪ್ರಸ್ತುತ ಚಳ್ಳಕೆರೆ ನಗರದಲ್ಲಿ ಬಿಸಿನೀರು ಮುದ್ದಪ್ಪ ಶಾಲೆಯ ಆವರಣ, ಡಿ.ಸುಧಾಕರ ಕ್ರೀಡಾಂಗಣವಿದೆ. ಪರಶುರಾಂಪುರ ಮತ್ತು ಗೊರ್ಲತ್ತು ನಾಯಕನಹಟ್ಟಿ, ತಿಮ್ಮಪ್ಪಯ್ಯನಹಳ್ಳಿ, ತಳಕು ಗ್ರಾಮಗಳಲ್ಲಿ 100, 200, 400 ಮೀಟರ್ ಓಟಗಳಿಗೆ ಪೂರಕವಾದ ಟ್ರ್ಯಾಕ್‌ಗಳಿವೆ. ಆದರೆ ಬಹುಪಾಲು ಶಾಲೆಗಳು ಮೈದಾನದಿಂದ ವಂಚಿತವಾಗಿದ್ದು, ಕ್ರೀಡಾ ಸಲಕರಣೆಗಳ ಕೊರತೆಯೂ ಇದೆ.  

ಚಿಕ್ಕಜಾಜೂರು ಸಮೀಪದ ಚಿಕ್ಕಂದವಾಡಿಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಬೆಳೆದಿರುವ ಹುಲ್ಲು
ನಾಯಕನಹಟ್ಟಿ ಹೋಬಳಿಯ ಮನಮೈನಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ
ಚಳ್ಳಕೆರೆ ತಾಲ್ಲೂಕಿನ ಗೊರ್ಲಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದ ದುಃಸ್ಥಿತಿ 
ಜಿಲ್ಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯಿದೆ. ಶಾಲೆ ಶುರುವಾದಾಗಲೇ ಈ ಕುರಿತು ಕ್ರಿಯಾ ಯೋಜನೆ ಸಿದ್ಧಪಡಿಸಿ ನೀಡಲಾಗಿದೆ. ಅದರಂತೆ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ಮೈದಾನದ ಸ್ವಚ್ಛತೆ ಬಗ್ಗೆ ಸೂಚನೆ ನೀಡಲಾಗುವುದು
ಚಿದಾನಂದ ಸ್ವಾಮಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ
ಸುಸಜ್ಜಿತ ಮೈದಾನವಿಲ್ಲದ ಕಾರಣ ಕ್ರೀಡಾ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ನಿತ್ಯ ನಮಗೆ ತೋಚಿದ ಆಟಗಳನ್ನಷ್ಟೇ ಆಡುತ್ತೇವೆ. ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯಿಂದ ಯಾವ ಕ್ರೀಡೆಯ ಬಗ್ಗೆಯೂ ಸರಿಯಾದ ಮಾಹಿತಿಯೇ ಇಲ್ಲದಾಗಿದೆ
ಡಿ.ಮಹೇಶ ವಿದ್ಯಾರ್ಥಿ ನಾಯಕನಹಟ್ಟಿ
ಸರ್ಕಾರ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಬೇಕು. ಈ ಮೂಲಕ ಶಾಲೆಗಳಲ್ಲಿ ನಿರಂತರವಾಗಿ ಕ್ರೀಡಾ ಚಟುವಟಿಕೆ ಜರುಗುವಂತೆ ಪ್ರೋತ್ಸಾಹಿಸಬೇಕು
ಇ.ನಾಗರಾಜ್ ಅಧ್ಯಕ್ಷ ರೈತಸಂಘ ಹೋಬಳಿ ಘಟಕ 

ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ

ಜಿಲ್ಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಹೆಚ್ಚಾಗಿದ್ದು ಕೇವಲ 87 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಚಳ್ಳಕೆರೆ ಹೊಸದುರ್ಗ ಹೊಳಲ್ಕೆರೆಯಲ್ಲಿ ತಲಾ 13 ಮೊಳಕಾಲ್ಮುರು 4 ಚಿತ್ರದುರ್ಗ 23 ಹಾಗೂ ಹಿರಿಯೂರಿನಲ್ಲಿ 21 ಶಿಕ್ಷಕರಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯಿಂದ ಸರ್ಕಾರಿ ಶಾಲೆಗಳಲ್ಲಿ ಕ್ರೀಡಾ ತರಬೇತಿ ನೀಡುವ ಜವಾಬ್ದಾರಿಯೂ ವಿಷಯವಾರು ಶಿಕ್ಷಕರ ಹೆಗಲೇರಿದೆ. ಆದರೂ ಇಲಾಖೆ ನಡೆಸುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ಕ್ರೀಡಾಕೂಟಗಳು ಯಶಸ್ವಿಯಾಗಿ ನಡೆಯುತ್ತಿವೆ. ಪ್ರತಿವರ್ಷ ಗ್ರಾಮೀಣ ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ಸೂಕ್ತ ವೇದಿಕೆ ದೊರೆಯುತ್ತಿದೆ. ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಶೈಕ್ಷಣಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗಿಂತಲೂ ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ಇಷ್ಟಾದರೂ ಸೂಕ್ತ ತರಬೇತಿ ಮತ್ತು ಕ್ರೀಡಾ ಸಲಕರಣೆಗಳು ಅವರಿಗೆ ದೊರಕುತ್ತಿಲ್ಲ.

ಚಳ್ಳಕೆರೆ: ಅಸ್ತಿತ್ವ ಕಳೆದುಕೊಂಡ ಮೈದಾನಗಳು

ಸುತ್ತಲೂ ತಡೆಗೋಡೆಗಳಿಲ್ಲದ ಕಾರಣ ತಾಲ್ಲೂಕಿನ ಬಹುತೇಕ ಶಾಲೆಗಳ ಮೈದಾನಗಳು ಅಸ್ತಿತ್ವ ಕಳೆದುಕೊಂಡಿವೆ. ಕಾಪರಹಳ್ಳಿ ಗಾನಪ್ಪನಹಟ್ಟಿ ಗೋಪನಹಳ್ಳಿ ಗೋವರ್ಧನಗಿರಿ ಹೊಟ್ಟೆಪ್ಪನಹಳ್ಳಿ ಕಾಮಸಮುದ್ರ ಬೋಗನಹಳ್ಳಿ ಕರೆಕಾಟ್ಲಹಟ್ಟಿ ಬಂಡೆಹಟ್ಟಿ ಕುರುಡಿಹಳ್ಳಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬಳಿಯ ಸರ್ಕಾರಿ ಉರ್ದುಶಾಲೆ ಬಿ.ಎಂ. ಸರ್ಕಾರಿ ಪ್ರೌಢಶಾಲೆ ಹಿಂಭಾಗ ಪಾವಗಡ ರಸ್ತೆ ಬಳಿಯ ಆದರ್ಶ ಶಾಲೆ ಸೇರಿ ನಾನಾ ಶಾಲೆಗಳ ಆವರಣಗಳು ಹಾಳಾಗಿವೆ. ರಕ್ಷಣೆ ಸಲುವಾಗಿ ಆದರ್ಶ ಶಾಲೆ ಸುತ್ತಲೂ ಕಲ್ಲು ಕಂಬ ನೆಡಲಾಗಿತ್ತು. ಅವು ಈಗ ಮುರಿದು ಬಿದ್ದಿವೆ. ಇವುಗಳಿಗೆ ಅಳವಡಿಸಿದ್ದ ತಂತಿ ಕಿತ್ತು ಹೋಗಿದೆ. ಇದರಿಂದ ಶಾಲೆಗೆ ಸೂಕ್ತ ರಕ್ಷಣೆಯೇ ಇಲ್ಲವಾಗಿದೆ. ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗೂ ತೀವ್ರ ತೊಂದರೆಯಾಗುತ್ತಿದೆ. ಬಿ.ಎಂ. ಸರ್ಕಾರಿ ಪ್ರೌಢಶಾಲೆ ಹಿಂಭಾಗದಲ್ಲಿ ಕಾಂಪೌಂಡ್‌ ನಿರ್ಮಿಸದಿರುವ ಕಾರಣ ಶಾಲೆ ಜಾಗ ದಿನ ದಿನಕ್ಕೂ ಒತ್ತುವರಿಯಾಗುತ್ತಿದೆ. ಆವರಣದ ಮಧ್ಯೆ ವಾಹನಗಳು ನಿರಂತರ ಸಂಚರಿಸುತ್ತವೆ. ಇದರಿಂದ ಮಕ್ಕಳ ಪಾಠ- ಪ್ರವಚನಕ್ಕೆ ಅಡಚಣೆ ಉಂಟಾಗುತ್ತಿದೆ. ತಾಲ್ಲೂಕಿನಲ್ಲಿ ತಡೆಗೋಡೆಗಳಿಲ್ಲದ ಶಾಲೆಗಳನ್ನು ಗುರುತಿಸಿ ಅವುಗಳಿಗೆ ಮೂಲ ಸೌಲಭ್ಯ ಒದಗಿಸಬೇಕು ಎಂದು ನವಜಾಗೃತಿ ಯುವ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಚಿತ್ರಲಿಂಗಪ್ಪ ಆಗ್ರಹಿಸಿದರು. 

ಚಿಕ್ಕಜಾಜೂರು: ಶಾಲಾ– ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ

ಮೈದಾನದ ನಿರ್ವಹಣೆ ವಿಚಾರದಲ್ಲಿ ತೋರುತ್ತಿರುವ ನಿರ್ಲಕ್ಷ್ಯದಿಂದಾಗಿ ಬಿ. ದುರ್ಗ ಹೋಬಳಿ ಹಾಗೂ ಚಿಕ್ಕಜಾಜೂರು ವ್ಯಾಪ್ತಿಯ ಶಾಲಾ ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಹೋಬಳಿ ಹಾಗೂ ಚಿಕ್ಕಜಾಜೂರು ವ್ಯಾಪ್ತಿಯಲ್ಲಿ ನಾಲ್ಕು ಸರ್ಕಾರಿ ಪ್ರೌಢಶಾಲೆ ಒಂದು ಕರ್ನಾಟಕ ಪಬ್ಲಿಕ್‌ ಶಾಲೆ ಆರು ಅನುದಾನಿತ ನಾಲ್ಕು ಅನುದಾನ ರಹಿತ ಪ್ರೌಢಶಾಲೆಗಳು ಇವೆ. 40ಕ್ಕೂ ಹೆಚ್ಚು ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಹಿರಿಯ ಪ್ರಾಥಮಿಕ ಶಾಲೆಗಳು 15ಕ್ಕೂ ಹೆಚ್ಚು ಕಿರಿಯ ಪ್ರಾಥಮಿಕ ಶಾಲೆಗಳಿವೆ. ಆದರೆ ಇವುಗಳಲ್ಲಿ ಮೂರ್ನಾಲ್ಕು ಶಾಲೆಗಳನ್ನು ಬಿಟ್ಟರೆ ಉಳಿದೆಡೆ ಆಟದ ಮೈದಾನಗಳಿಲ್ಲ. ಹೋಬಳಿ ಮಟ್ಟದ ಕ್ರೀಡಾಕೂಟಗಳನ್ನು ಬಿ. ದುರ್ಗ ಅಥವಾ ಚಿಕ್ಕಜಾಜೂರಿನಲ್ಲಿ ನಡೆಸಬೇಕು.  ಹಿರೇಕಂದವಾಡಿ ಚಿಕ್ಕಂದವಾಡಿ ಕೊಡಗವಳ್ಳಿಹಟ್ಟಿ ಹಿರೇಎಮ್ಮಿಗನೂರು ಗ್ರಾಮಗಳಲ್ಲಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಶಾಲವಾದ ಮೈದಾನಗಳಿವೆ. ಆದರೆ ನಿರ್ವಹಣೆ ಕೊರತೆಯಿಂದ ಅವು ನಲುಗುತ್ತಿವೆ.   ‘ಮಳೆಗಾಲದಲ್ಲಿ ನಾವು ಆಟದ ಮೈದಾನಕ್ಕಿಳಿದರೆ ನಮ್ಮ ಬಟ್ಟೆಗಳೆಲ್ಲಾ ಕೆಸರುಮಯವಾಗಿ ಬಿಡುತ್ತದೆ.  ಮೈದಾನದಲ್ಲಿ ಸಣ್ಣ ಸಣ್ಣ ಕಲ್ಲುಗಳು ಇರುವುದರಿಂದ ಬಹುತೇಕ ವಿದ್ಯಾರ್ಥಿಗಳು ಗಾಯಗೊಳ್ಳುವ ಭೀತಿಯಿಂದಾಗಿ ಕ್ರೀಡಾ ಚಟುವಟಿಕೆಗಳಿಂದಲೇ ದೂರ ಉಳಿಯುತ್ತಾರೆ’ ಎನ್ನುತ್ತಾರೆ ಚಿಕ್ಕಂದವಾಡಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಕೀರ್ತಿ. ಗುಂಪು ಆಟಗಳನ್ನು ಕಲಿಸಲು ಶಾಲಾ ಆವರಣದಲ್ಲಿ ಶಿಕ್ಷಕರೇ ಅಂಕಣಗಳನ್ನು ನಿರ್ಮಿಸಿದ್ದಾರೆ. ಆದರೆ ಅಥ್ಲೆಟಿಕ್ಸ್‌ಗೆ ಪೂರಕವಾದ ಸೌಕರ್ಯ ಎಲ್ಲಿಯೂ ಇಲ್ಲ. 

ಹೊಸದುರ್ಗ: ಕ್ರೀಡಾಂಗಣಗಳಲ್ಲಿ ಮೂಲ ಸೌಕರ್ಯಗಳಿಲ್ಲ

ತಾಲ್ಲೂಕಿನಲ್ಲಿ ಕೆಲ ಪ್ರಾಥಮಿಕ ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ನಾಮಕಾವಾಸ್ಥೆಗೆ ಮೈದಾನಗಳಿವೆ. ಆದರೆ ಅವು ಆಟಕ್ಕೆ ಯೋಗ್ಯವಾಗಿಲ್ಲ.  ತಾಲ್ಲೂಕಿನ ಮತ್ತೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಪಟ್ಟಣದ ಪದವಿಪೂರ್ವ ಕಾಲೇಜು ಕ್ರೀಡಾಂಗಣ ಸೇರಿದಂತೆ ಹಲವು ಆಟದ ಮೈದಾನಗಳು ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗುತ್ತವೆ. ಇದರಿಂದಾಗಿ ಕ್ರೀಡಾಪಟುಗಳು ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ. ಮಳೆ ಬಂದಾಗ ಮೈದಾನದ ತುಂಬೆಲ್ಲಾ ನೀರು ನಿಂತಿರುತ್ತದೆ. ಅದು ಒಣಗುವವರೆಗೂ ತರಬೇತಿಯೇ ಇಲ್ಲದಂತಾಗಿರುತ್ತದೆ. ಜಿಲ್ಲಾ ಕ್ರೀಡಾಂಗಣ ಬಿಟ್ಟರೆ ಹೊಸದುರ್ಗ ತಾಲ್ಲೂಕು ಕ್ರೀಡಾಂಗಣದಲ್ಲಿ ಮಾತ್ರ ಸಿಂಥೆಟಿಕ್‌ ಟ್ರ್ಯಾಕ್‌ ಇದೆ. ಆದರೆ ಇಲ್ಲಿ ಒಂದು ಶೌಚಾಲಯದ ಸೌಲಭ್ಯವೂ ಇಲ್ಲ. ಕ್ರೀಡಾ ತರಬೇತುದಾರರಂತೂ ದೂರದ ಮಾತು. ಶಾಲೆಗಳಲ್ಲೂ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.