ADVERTISEMENT

ವಿವಿ ಸಾಗರಕ್ಕೆ ಭದ್ರತೆ: ಪ್ರವೇಶಕ್ಕೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 10 ಮೇ 2025, 15:15 IST
Last Updated 10 ಮೇ 2025, 15:15 IST
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಅಣೆಕಟ್ಟೆ ಪ್ರವೇಶ ನಿಷೇಧಿಸಿ ಅಳವಡಿಸಿರುವ ಫ್ಲೆಕ್ಸ್‌
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಅಣೆಕಟ್ಟೆ ಪ್ರವೇಶ ನಿಷೇಧಿಸಿ ಅಳವಡಿಸಿರುವ ಫ್ಲೆಕ್ಸ್‌   

ಹಿರಿಯೂರು: ಭಾರತ–ಪಾಕಿಸ್ತಾನ ಸಂಘರ್ಷದ ಕಾರಣ ರಾಜ್ಯದ ಎಲ್ಲಾ ಪ್ರವಾಸಿತಾಣಗಳಲ್ಲೂ ಕಟ್ಟೆಚ್ಚರ ವಹಿಸುವಂತೆ ಸರ್ಕಾರ ಸೂಚಿಸಿದ್ದು, ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯದಲ್ಲೂ ಪೊಲೀಸ್‌ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಇಲ್ಲಿಯವರೆಗೂ ಜಲಾಶಯಕ್ಕೆ ಇಬ್ಬರು ಗೃಹರಕ್ಷಕ ದಳದ ಸಿಬ್ಬಂದಿಯನ್ನು ಮಾತ್ರ ಭದ್ರತೆಗೆ ನಿಯೋಜಿಸಲಾಗಿತ್ತು. ಜಲಾಶಯದ ಬಳಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ಬಂದ ಕಾರಣ ಜಲಾಶಯದ ಮೂರೂ ಗೇಟ್‌ಗಳನ್ನು ಬಂದ್‌ ಮಾಡಲಾಗಿದೆ. ಪ್ರತಿ ಗೇಟ್‌ಗೆ ತಲಾ ಇಬ್ಬರು ಸೇರಿದಂತೆ ಒಟ್ಟು 6 ಪೊಲೀಸ್‌ ಸಿಬ್ಬಂದಿಯನ್ನು ನೇಮಿಸಲಾಗಿದೆ. ಹಿನ್ನೀರು ಭಾಗದಲ್ಲಿ ನಡೆಯುತ್ತಿದ್ದ ಬೋಟಿಂಗ್‌ ಸೌಲಭ್ಯವನ್ನೂ ಸ್ಥಗಿತಗೊಳಿಸಲಾಗಿದೆ.

ಅಣೆಕಟ್ಟೆಯ ಎಡಭಾಗದಲ್ಲಿ ಕಣಿವೆ ಮಾರಮ್ಮ ದೇವಸ್ಥಾನದಿಂದ ಗುಡ್ಡದ ಮೇಲಿನ ಪ್ರವಾಸಿ ಮಂದಿರದ ಕಡೆ ಹೋಗುವ ದಾರಿಯನ್ನು ಬಂದ್ ಮಾಡಲಾಗಿದೆ. ಅಣೆಕಟ್ಟೆಯ ಬಲಭಾಗದಲ್ಲಿ ಕಲ್ಲಿನ ಮಂಟಪದ ಕಡೆ ಬೇಲಿ ಹಾಕಲಾಗಿದ್ದು, ಅಲ್ಲಿನ ಗೇಟ್‌ ಬಂದ್ ಮಾಡಲಾಗಿದೆ.

ADVERTISEMENT

ಪ್ರವಾಸಿಗರು ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ಕಣಿವೆ ಮಾರಮ್ಮ ದೇವಸ್ಥಾನದ ಹಿಂಭಾಗದ ಮೆಟ್ಟಿಲುಗಳ ಮೂಲಕ ಜಲಾಶಯದ ಮೇಲೇರುತ್ತಿದ್ದರು. ಇದನ್ನು ತಪ್ಪಿಸಲು ಅಲ್ಲೂ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 

‘ಜಲಾಶಯಕ್ಕೆ ಭದ್ರತೆ ಕೋರಿ ವಿಶ್ವೇಶ್ವರಯ್ಯ ನೀರಾವರಿ ನಿಗಮ ಪತ್ರ ಬರೆದಿದೆ. ಹೀಗಾಗಿ ಅಲ್ಲಿಗೆ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್‌ ಬಂಡಾರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.