ADVERTISEMENT

ಆಮ್ಲಜನಕ ಉತ್ಪಾದನೆಯಲ್ಲಿ ಸ್ವಾವಲಂಬನೆ- ಸಚಿವ ಬಿ. ಶ್ರೀರಾಮುಲು

ಆರೋಗ್ಯ ಮೇಳಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಮೇ 2022, 4:28 IST
Last Updated 1 ಮೇ 2022, 4:28 IST
ಮೊಳಕಾಲ್ಮುರು ತಾಲ್ಲೂಕಿನ ರಾಂಪುರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಆರೋಗ್ಯ ಮೇಳವನ್ನು ಸಚಿವ ಬಿ. ಶ್ರೀರಾಮುಲು ಉದ್ಘಾಟಿಸಿದರು.
ಮೊಳಕಾಲ್ಮುರು ತಾಲ್ಲೂಕಿನ ರಾಂಪುರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಆರೋಗ್ಯ ಮೇಳವನ್ನು ಸಚಿವ ಬಿ. ಶ್ರೀರಾಮುಲು ಉದ್ಘಾಟಿಸಿದರು.   

ಮೊಳಕಾಲ್ಮುರು: ಕೋವಿಡ್ ಸಂಕಷ್ಟ ಮತ್ತೊಮ್ಮೆ ಎದುರಾದಲ್ಲಿ ರೋಗಿಗಳಿಗೆ ಅಗತ್ಯವಿರುವ ಆಮ್ಲಜನಕ ಪೂರೈಕೆ ವಿಚಾರದಲ್ಲಿ ಚಿತ್ರದುರ್ಗ ಜಿಲ್ಲೆಯು ಸಂಪೂರ್ಣ ಸ್ವಾವಲಂಬನೆ ಸಾಧಿಸಿದೆ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು.

ತಾಲ್ಲೂಕಿನ ರಾಂಪುರ ಸಮುದಾಯ ಆರೋಗ್ಯಕೇಂದ್ರ ವ್ಯಾಪ್ತಿಯಲ್ಲಿ ಶನಿವಾರ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ‘ತಾಲ್ಲೂಕು ಮಟ್ಟದ ಆರೋಗ್ಯ ಮೇಳ’ ಉದ್ಘಾಟಿಸಿ ಅವರು ಮಾತನಾಡಿದರು.

‘ಆಮ್ಲಜನಕದ ಬಳಕೆ ಆರೋಗ್ಯ ಕ್ಷೇತ್ರದಲ್ಲಿ ಎಷ್ಟರ ಮಟ್ಟಿಗೆ ಅಗತ್ಯ ಎಂಬುದು ಮನವರಿಕೆಯಾಗಿದ್ದು ಕೋವಿಡ್ ಸಮಯದಲ್ಲಿ. ಅಲ್ಲಿಯವರೆಗೆ ಕೈಗಾರಿಕಾ ಕ್ಷೇತ್ರದಲ್ಲಿ ಇದರ ಬಳಕೆಯನ್ನು ನೋಡುತ್ತಿದ್ದೆವು. ಕೋವಿಡ್ ಆರಂಭದಲ್ಲಿ ಜಿಲ್ಲೆಯಲ್ಲಿ ಆಮ್ಲಜನಕದ ಸಮಸ್ಯೆಯಾಗಿತ್ತು. ಈಗ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ, ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಪ್ಲಾಂಟ್‌ಗಳನ್ನು ಸ್ಥಾಪಿಸಲಾಗಿದೆ. ಬೇರೆ ಜಿಲ್ಲೆಗಳಿಗೂ ಕೊಡುವಷ್ಟು ಸ್ವಾವವಂಬನೆ ಸಾಧಿಸಲಾಗಿದೆ’ ಎಂದುಹೇಳಿದರು.

ADVERTISEMENT

‘ಕೋವಿಡ್‌ನ 4ನೇ ಅಲೆ ಬರುವ ಸೂಚನೆಯನ್ನು ತಜ್ಞರು ನೀಡಿದ್ದಾರೆ. ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಸರ್ಕಾರ ಆಯುಷ್ಮಾನ್ ಕಾರ್ಡ್ ಮೂಲಕ ಗಂಭೀರ ಸೇರಿದಂತೆ ಎಲ್ಲ ಬಗೆಯ ಕಾಯಿಲೆಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದೆ’ ಎಂದು ಮನವಿ ಮಾಡಿದರು.

ತುಂಗಭದ್ರಾ ಹಿನ್ನೀರು ಕುಡಿಯುವ ನೀರು ಯೋಜನೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.

ಶಿಬಿರದಲ್ಲಿ 3,158 ಮಂದಿ ತಪಾಸಣೆಗೆ ಒಳಪಟ್ಟಿದ್ದು, 221 ಜನರಿಗೆ ಆಯುಷ್ಮಾನ್ ಕಾರ್ಡ್‌ಗಳನ್ನು ವಿತರಿಸಲಾಯಿತು. 65 ರೋಗಿಗಳಿಗೆ ಟೆಲಿ ಚಿಕಿತ್ಸೆ ನೀಡಲಾಗಿದ್ದು, 34 ಮಂದಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯ ಗುರುತಿಸಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಕುಮಾರ್ ಹೇಳಿದರು. ತಹಶೀಲ್ದಾರ್ ಸುರೇಶ್ ಕುಮಾರ್, ತಾಲ್ಲೂಕು ಪಂಚಾಯಿತಿ ಇಒ ಕೆ.ಇ. ಜಾನಕೀರಾಮ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಮಂಡಲಾಧ್ಯಕ್ಷ ಡಾ.ಪಿ.ಎಂ. ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್ವರಪ್ಪ, ಆಡಳಿತ ವೈದ್ಯಾಧಿಕಾರಿ ಡಾ.ಅಭಿನವ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.