ಚಿತ್ರದುರ್ಗ: ಮಧ್ಯ ಕರ್ನಾಟಕದ ವೈಚಾರಿಕ ಚಿಂತನೆಯ ದಸರಾ ಎಂದೇ ಖ್ಯಾತಿಗಳಿಸಿರುವ ಶರಣ ಸಂಸ್ಕೃತಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುರುಘಾ ಮಠದ ಅಂಗಳ ಭಕ್ತರ ಸ್ವಾಗತಕ್ಕೆ ಸಜ್ಜಾಗಿದೆ.
ಕೃಷಿ, ಯುವಜನಕ್ಕೆ ವಿಶೇಷ ಕಾರ್ಯಕ್ರಮ ರೂಪಿಸುವ ಮೂಲಕ ಪ್ರತಿ ವರ್ಷಕ್ಕಿಂತ ಈ ಬಾರಿ ಕೊಂಚ ವಿಭಿನ್ನ ಸ್ವರೂಪದಲ್ಲಿ ಉತ್ಸವ ಆಚರಿಸಲಾಗುತ್ತಿದೆ. ಸೆ.20 ರಿಂದ ಅ.3ರವರೆಗೆ 13 ದಿನ ಉತ್ಸವ ನಡೆಯಲಿದೆ.
ಉತ್ಸವದ ಹಿನ್ನೆಲೆಯಲ್ಲಿ ಮಠದಲ್ಲಿ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ನಾಡಿನ ವಿವಿಧ ಭಾಗದಿಂದ ಬರುವ ಭಕ್ತರಿಗೆ ದಾಸೋಹ, ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದೆ. ಅನುಭವ ಮಂಟಪದಲ್ಲಿ ವೇದಿಕೆ ಸಜ್ಜುಗೊಳಿಸಿದ್ದು, ಏಕಕಾಲಕ್ಕೆ ಸಾವಿರಾರು ಭಕ್ತರು ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.
20 ರಂದು ಬೆಳಿಗ್ಗೆ 5.15ಕ್ಕೆ ಯೋಗಗುರು ಚನ್ನಬಸವಣ್ಣ ಅವರ ನೇತೃತ್ವದಲ್ಲಿ ಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಬೆಳಿಗ್ಗೆ 10.30ಕ್ಕೆ ಎಸ್‌ಜೆಎಂಟಿ ಕ್ಯಾಂಪಸ್ ಆವರಣದಲ್ಲಿ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಜಮುರಾ ಕ್ರೀಡಾಕೂಟ ಪ್ರಾರಂಭವಾಗಲಿದೆ. 23 ರಂದು ಶಿವಶರಣ ವೇಷಭೂಷಣ ಹಾಗೂ ವಚನ ಕಂಠ ಸ್ಪರ್ಧೆ, 24 ರಂದು ರಂಗೋಲಿ, ಸಾವಯವ ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆ ಸ್ಪರ್ಧೆ ನಡೆಯಲಿದೆ.
25 ರಂದು ಬೆಳಿಗ್ಗೆ 7.30ಕ್ಕೆ ಬಸವತತ್ವ ಧ್ವಜಾರೋಹಣ ನೆರವೇರಿಸಲಾಗುತ್ತದೆ. ಗುರುಮಠಕಲ್‌ನ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿಯಿಂದ ಸಹಜ ಶಿವಯೋಗ ಪ್ರಾರಂಭವಾಗಲಿದೆ. ಬಳಿಕ ಮುರುಘೇಂದ್ರ ಶಿವಯೋಗಿಗಳ ಕುರಿತು ವಿಚಾರ ಗೋಷ್ಠಿ. 26ರಂದು ಮುರಿಗೆ ಶಾಂತವೀರ ಸ್ವಾಮೀಜಿ ಕೃತಿಗಳ ಕುರಿತು ವಿಚಾರ ಸಂಕಿರಣ, 27ರಂದು ವಿಚಾರ ಗೋಷ್ಠಿ, ಸಮಾರೋಪ, 28ರಂದು ಭಾನುವಾರ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗೆ ಸಂವಾದ, ಜಮುರಾ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ವಚನ ಝೇಂಕಾರ ಸಮಾರಂಭ ನಡೆಯಲಿದೆ. ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಂವಾದ ನಡೆಸಿಕೊಡಲಿದ್ದಾರೆ.
29ರಂದು ಯುವ ಜನೋತ್ಸವದಲ್ಲಿ ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ, ಗೌರಿಗದ್ದೆಯ ವಿನಯ್ ಗುರೂಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಸಚಿವರಾದ ಸಂತೋಷ್ ಲಾಡ್, ಮಧು ಬಂಗಾರಪ್ಪ, ಡಿಐಜಿ ರವಿ ಡಿ.ಚೆನ್ನಣ್ಣನವರ, ಮಹೇಶ್ ಮಾಸಾಳ್ ಭಾಗವಹಿಸುವರು.
ತುಮಕೂರು ಸಿದ್ಧಗಂಗಾಮಠದ ಸಿದ್ಧಲಿಂಗ ಸ್ವಾಮೀಜಿ, ಗೋಕಾಕ್‌ನ ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಹೊಸದುರ್ಗದ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಸಮ್ಮುಖದಲ್ಲಿ 30ರಂದು ಕೃಷಿ ಮತ್ತು ಕೈಗಾರಿಕಾ ಮೇಳ ನಡೆಯಲಿದೆ. ಜೋಡೆತ್ತು, ದೇಶಿತಳಿ ಮತ್ತು ಸಾಕುಪ್ರಾಣಿಗಳ ಪ್ರದರ್ಶನ ಮತ್ತು ಸ್ಪರ್ಧೆಗೆ ಚಾಲನೆ ದೊರೆಯಲಿದೆ.
1 ರಂದ ವಚನಕಮ್ಮಟ ಪರೀಕ್ಷೆ ರ‍್ಯಾಂಕ್ ವಿಜೇತರಿಗೆ ಪ್ರಶಸ್ತಿ ಪ್ರದಾನ, ಸಂಜೆ ಜಾನಪದ ಸಮಾವೇಶ, 2ರಂದು ಜಾನಪದ ಕಲಾಮೇಳ, ಸಂಜೆ 4 ಗಂಟೆಗೆ ಮೇಲುದುರ್ಗದ ಮುರುಘಾಮಠದ ಆವರಣದಲ್ಲಿ ಶ್ರೀಗಳಿಗೆ ಭಕ್ತಿ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. 3ರಂದು ಬೆಳಿಗ್ಗೆ 9.30ಕ್ಕೆ ಶೂನ್ಯ ಪೀಠಾರೋಹಣ, ಬಳಿಕ ಅಲ್ಲಮಪ್ರಭುದೇವರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ, 11.30ಕ್ಕೆ ಶ್ರೀ ಜಯದೇವ ಜಂಗೀಕುಸ್ತಿ ಹಾಗೂ ಸಂಜೆ 6 ಗಂಟೆಗೆ ಶರಣ ಸಂಸ್ಕೃತಿ ಉತ್ಸವ ಸಮಾರೋಪ ಸಮಾರಂಭದ ಮೂಲಕ ವೈಭವಕ್ಕೆ ತೆರೆ ಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.