ADVERTISEMENT

ಸನಾತನ ದಸರಾ ಬದಲಿಗೆ ವಚನ ಚಳವಳಿಯ ಪ್ರತೀಕ ಚಿತ್ರದುರ್ಗ ‘ಶರಣ ಸಂಸ್ಕೃತಿ ಉತ್ಸವ’

ಬಸವಾದಿ ಶರಣರ ಆಶಯದ ಪ್ರಜಾಪ್ರಭುತ್ವ, ಸಾಂವಿಧಾನಿಕ ತತ್ವಗಳೇ ಉತ್ಸವದ ಮೂಲ ಉದ್ದೇಶ

ಎಂ.ಎನ್.ಯೋಗೇಶ್‌
Published 26 ಸೆಪ್ಟೆಂಬರ್ 2025, 7:51 IST
Last Updated 26 ಸೆಪ್ಟೆಂಬರ್ 2025, 7:51 IST
ಚಿತ್ರದುರ್ಗದಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘರಾಜೇಂದ್ರ ಬೃಹನ್ಮಠದ ಅಂಗಳವು ದೀಪಾಲಂಕಾರದಿಂದ ಕಂಗೊಳಿಸುತ್ತಿರುವುದು
ಪ್ರಜಾವಾಣಿ ಚಿತ್ರ: ಚಂದ್ರಪ್ಪ ವಿ.
ಚಿತ್ರದುರ್ಗದಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘರಾಜೇಂದ್ರ ಬೃಹನ್ಮಠದ ಅಂಗಳವು ದೀಪಾಲಂಕಾರದಿಂದ ಕಂಗೊಳಿಸುತ್ತಿರುವುದು ಪ್ರಜಾವಾಣಿ ಚಿತ್ರ: ಚಂದ್ರಪ್ಪ ವಿ.   

ಚಿತ್ರದುರ್ಗ: ಮೈಸೂರು, ಮಂಗಳೂರು, ಮಡಿಕೇರಿಯಲ್ಲಿ ನಡೆಯುವ ಐತಿಹಾಸಿಕ ದಸರಾ ಆಚರಣೆಗಳು ಸನಾತನ ಸಂಸ್ಕೃತಿಯ ಪ್ರತೀಕವಾಗಿ, ನವದುರ್ಗೆಯರ ಆರಾಧನೆಯಾಗಿ ಆಚರಿಸಲ್ಪಡುತ್ತವೆ. ಆದರೆ, ಮಧ್ಯಕರ್ನಾಟಕ ಭಾಗದ ಮುರುಘರಾಜೇಂದ್ರ ಬೃಹನ್ಮಠದಲ್ಲಿ ದಸರಾ ಅಂಗವಾಗಿ ನಡೆಯುವ ‘ಶರಣ ಸಂಸ್ಕೃತಿ ಉತ್ಸವ’ ಬಸವಾದಿ ಶರಣರ ವಚನ ಚಳವಳಿಯಾಗಿ ಆಚರಿಸಲ್ಪಡುತ್ತಿರುವುದು ವಿಶೇಷವಾಗಿದೆ.

ಚಾಮುಂಡೇಶ್ವರಿಯು ರಕ್ಕಸ ಮಹಿಷಾಸುರನನ್ನು ವಧೆ ಮಾಡಿದ ವಿಜಯದ ಸಂಕೇತವಾಗಿ ವಿಜಯದಶಮಿ ಆಚರಣೆ ಮಾಡಲಾಗುತ್ತದೆ ಎಂದು ಪುರಾಣ ಹೇಳುತ್ತವೆ. ಇದೇ ಕಾರಣಕ್ಕೆ ಮೈಸೂರು ದಸರಾವನ್ನು ಚಾಮುಂಡಿ ಬೆಟ್ಟದಲ್ಲೇ ಉದ್ಘಾಟಿಸಲಾಗುತ್ತದೆ. ಇದು ಈಚೆಗೆ ನಾಡಹಬ್ಬವಾಗಿ ಆಚರಿಸಲ್ಪಡುತ್ತಿದೆ. ತುಳುನಾಡಿನ ದೈವಗಳ ಆರಾಧನೆಯ ರೂಪವಾಗಿ ಮಂಗಳೂರು ದಸರಾ, ಶಕ್ತಿ ದೇವತೆಗಳ ಕರಗ ಮಹೋತ್ಸವವಾಗಿ ಮಡಿಕೇರಿ ದಸರಾ ನಡೆಯುತ್ತದೆ.

ಮೈಸೂರು ನಂತರ 2ನೇ ನಾಡಹಬ್ಬ ಎಂದೇ ಆಚರಿಸಲ್ಪಡುವ ಶರಣ ಸಂಸ್ಕೃತಿ ಉತ್ಸವ ಜನರನ್ನು ಜಾಗೃತಗೊಳಿಸುವ, ಕಂದಾಚಾರಗಳಿಂದ ಮುಕ್ತಗೊಳಿಸುವ, ಅರಿವಿನ ಮಾರ್ಗದಲ್ಲಿ ಮುನ್ನಡೆಸುವ ಪ್ರೇರಕ ಶಕ್ತಿಯಾಗಿ ಆಚರಿಸಲಾಗುತ್ತಿದೆ. ಉತ್ಸವದಲ್ಲಿ ಪೂಜೆ, ಪುನಸ್ಕಾರಗಳಿರುವುದಿಲ್ಲ. ಬನ್ನಿಗಿಡದ ಪೂಜೆಯೂ ಇಲ್ಲ. ಬಸವಾದಿ ಶರಣರ ಆಶಯದಂತೆ ಪ್ರಜಾಪ್ರಭುತ್ವ, ಸಾಂವಿಧಾನಿಕ ತತ್ವಗಳೇ ಶರಣ ಸಂಸ್ಕೃತಿ ಉತ್ಸವದ ಮೂಲ ಸತ್ವವಾಗಿದ್ದು ಜನರ ಉತ್ಸವವಾಗಿ ಮುನ್ನಡೆಯುತ್ತಿದೆ.

ADVERTISEMENT

ಶರಣ ಸಂಸ್ಕೃತಿ ಉತ್ಸವವನ್ನು ಮೈಸೂರು ದಸರಾ ಉತ್ಸವಕ್ಕೆ ಪರ್ಯಾಯ ಎಂದೂ ಕೆಲವರು ಹೇಳುತ್ತಾರೆ. ‘ಶರಣರ ದಸರಾ’ ಎಂದೂ ಕರೆಯುತ್ತಾರೆ. ಇದು ಕೇವಲ ಮಧ್ಯ ಕರ್ನಾಟಕ ಭಾಗಕ್ಕೆ ಮಾತ್ರ ಸೀಮಿತವಾಗಿರದೆ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗವನ್ನು ಉತ್ಸವ ತನ್ನತ್ತ ಸೆಳೆದುಕೊಳ್ಳುತ್ತಿದೆ.

ಇದು ವೀರಶೈವ ಲಿಂಗಾಯತ ಮಠದ ಕಾರ್ಯಕ್ರಮ ಮಾತ್ರವೇ ಆಗಿಲ್ಲ. ಅನುಭವ ಮಂಟಪ, ಶೂನ್ಯಪೀಠದ ಆಶಯದಂತೆ ಮುರುಘರಾಜೇಂದ್ರ ಬೃಹನ್ಮಠವೇ ಸೃಷ್ಟಿಸಿದ ತಳಸಮುದಾಯಗಳ ಮಠಾಧೀಶರು ಶರಣ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

‘ರಾಜ್ಯದ ವಿವಿಧೆಡೆ ನವದುರ್ಗೆಯರ ಆರಾಧನೆಯಾಗಿ ನವರಾತ್ರಿ ಉತ್ಸವ ನಡೆಯುತ್ತದೆ. ಆದರೆ ಶರಣ ಸಂಸ್ಕೃತಿ ಉತ್ಸವ ವೈಚಾರಿಕ ನೆಲೆಗಟ್ಟಿನ ಮೇಲೆ ರೂಪಗೊಂಡಿದೆ. ಸರ್ವಧರ್ಮಗಳ ಕಲ್ಯಾಣ ಮಹೋತ್ಸವ, ದಾಸೋಹ, ಸಹಜ ಶಿವಯೋಗ, ವಚನ ಕಮ್ಮಟ, ಆರೋಗ್ಯ ಮೇಳ, ಕೃಷಿ, ಕೈಗಾರಿಕೆ ಮೇಳ, ಜಾನಪದ ಜಾತ್ರೆಯಾಗಿ, ಸರ್ವ ಜನಾಂಗದ ಸಾಮರಸ್ಯ– ಸಮಾನತೆ ಉತ್ಸವವಾಗಿ ಆಚರಣೆಯಾಗುತ್ತಿದೆ’ ಎಂದು ಯುವ ಸಂಶೋಧಕ ಮಹೇಶ್‌ ಕುಂಚಿಗನಾಳ್‌ ಹೇಳಿದರು.

ಮೊದಮೊದಲು ಮುರುಘಾ ಮಠದಲ್ಲೂ ಮೈಸೂರು ದಸರಾ ಮಾದರಿಯಲ್ಲೇ ನವರಾತ್ರಿ, ವಿಜಯದಶಮಿ ಆಚರಣೆಗಳು ನಡೆಯುತ್ತಿದ್ದವು. ಬನ್ನಿಪೂಜೆಯೂ ನಡೆಯುತ್ತಿತ್ತು. ವೇದ, ಉಪನಿಷತ್‌, ಸಂಸ್ಕೃತ ಪಂಡಿತರಾಗಿದ್ದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಭಕ್ತಿಪೂರ್ವಕವಾಗಿ ವಿಜಯದಶಮಿ ಆಚರಿಸುತ್ತಿದ್ದರು. ಆದರೆ ಶಿವಮೂರ್ತಿ ಮುರುಘಾ ಶರಣರು ಪಟ್ಟಕ್ಕೇರಿದ ನಂತರ ವಿಜಯದಶಮಿ ಆಚರಣೆ ಸಂಪೂರ್ಣವಾಗಿ ‘ಶರಣ ಸಂಸ್ಕೃತಿ ಉತ್ಸವ’ವಾಗಿ ಹೊಸರೂಪ ಪಡೆಯಿತು.

‘1996ರ ನಂತರ ಮುರುಘಾಮಠದಲ್ಲಿ ಬನ್ನಿ ಪೂಜೆ ನಿಂತು ಹೋಯಿತು. ಇದಕ್ಕೆ ಕೆಲವರು ವಿರೋಧವನ್ನೂ ವ್ಯಕ್ತಪಡಿಸಿದ್ದರು. ಹಿಂದಿನಂತೆಯೇ ಪೂಜೆಯಾಗಬೇಕು ಎಂದು ಈಗಲೂ ಕೆಲವರು ಒತ್ತಾಯಿಸುತ್ತಾರೆ. ಆದರೆ, ಮುರುಘಾಮಠ ಶರಣ ಸಂಸ್ಕೃತಿ ಉತ್ಸವದ ಮೂಲಕ ವೈಚಾರಿಕ ಪ್ರಜ್ಞೆ ಮೂಡಿಸುತ್ತಿದೆ. ಇದು ಹೀಗೆಯೇ ಮುಂದುವರಿಯಬೇಕು’ ಎಂದು ಸಾಹಿತಿಯೊಬ್ಬರು ಹೇಳಿದರು.

ಜಾತ್ಯತೀತ ನೆಲೆಗಟ್ಟಿನ ಮೇಲೆ ಶರಣ ಸಂಸ್ಕೃತಿ ಉತ್ಸವ ನಡೆಯುತ್ತಿದೆ. ಸಾಮಾಜಿಕ ನ್ಯಾಯ ಮಹಿಳಾ ಸಬಲೀಕರಣ ರೈತರ ಪ್ರಗತಿಯೂ ಉತ್ಸವದ ಭಾಗವಾಗಿದೆ. ರಾಜ್ಯ ಹೊರರಾಜ್ಯಗಳಿಂದಲೂ ಭಕ್ತರು ಬರುತ್ತಿದ್ದಾರೆ

–ಶಿವಯೋಗಿ ಕಳಸದ ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷ

ಎಲ್ಲರೂ ಮೈಸೂರು ದಸರಾ ನೋಡಲು ಸಾಧ್ಯವಾಗುವುದಿಲ್ಲ. ಶರಣ ಸಂಸ್ಕೃತಿ ಉತ್ಸವ ಸಾಂಸ್ಕೃತಿಕ ಹಬ್ಬವಾಗಿಯೂ ಪ್ರಸಿದ್ಧಿ ಪಡೆಯುತ್ತಿದೆ. ಜೊತೆಗೆ ವಚನ ಕಮ್ಮಟ ಸಾಹಿತ್ಯ ಪ್ರಕಟಣೆ ವಿವಿಧ ಗೋಷ್ಠಿಗಳೂ ನಡೆಯುತ್ತಿವೆ

–ಬಸವಕುಮಾರ ಸ್ವಾಮೀಜಿ ಎಸ್‌ಜೆಎಂ ವಿದ್ಯಾಪೀಠದ ಸದಸ್ಯ

ಕ್ರೀಡೆ ಕುಸ್ತಿ

ಮಕ್ಕಳ ಮೇಳ ಬಸವಾದಿ ಶರಣರ ವಚನಗಳನ್ನು ವಿಶ್ವಮಾನ್ಯಗೊಳಿಸುವ ನಿಟ್ಟಿನಲ್ಲಿ ಶರಣ ಸಂಸ್ಕೃತಿ ಉತ್ಸವ ಆಚರಿಸಲ್ಪಡುತ್ತಿದೆ. ಪ್ರತಿ ವರ್ಷ ಶರಣರ ಸಮಗ್ರ ವಚನ ಸಾಹಿತ್ಯವನ್ನು ಪ್ರಕಟ ಮಾಡಲಾಗುತ್ತಿದೆ. ಈ ಬಾರಿ ಮುರುಘಾ ಮಠದ ಕರ್ತೃ ಮುರುಗಿ ಶಾಂತವೀರ ಸ್ವಾಮೀಜಿಯವರ ಸಮಗ್ರ ಸಾಹಿತ್ಯ ಸಂಗ್ರಹಿಸಿ ಪ್ರಕಟಿಸಲಾಗುತ್ತಿದೆ. ಜೊತೆಗೆ ಅವರ ಸಾಹಿತ್ಯ ಕುರಿತಂತೆ 2 ದಿನದ ವಿಚಾರ ಸಂಕಿರಣವನ್ನೂ ಆಯೋಜಿಸಲಾಗಿದೆ. ಜೊತೆಗೆ ಜಂಗೀ ಕುಸ್ತಿ ಜಮುರಾ ಕ್ರೀಡಾಕೂಟ ಮಹಿಳಾ ಸಮಾವೇಶ ಮಕ್ಕಳ ಮೇಳಗಳು ಶರಣ ಸಂಸ್ಕೃತಿ ಉತ್ಸವದ ವಿಶೇಷವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.