ಹೊಳಲ್ಕೆರೆ: ಪಟ್ಟಣದಲ್ಲಿ 2026ರ ಜ. 14 ಮತ್ತು 15ರಂದು ಅದ್ದೂರಿಯಾಗಿ ರಾಜ್ಯಮಟ್ಟದ ಸಿದ್ದರಾಮೇಶ್ವರ ಜಯಂತಿ ಆಚರಿಸಲು ತೀರ್ಮಾನಿಸಲಾಯಿತು.
ಪಟ್ಟಣದ ಸಂವಿಧಾನ ಸೌಧದಲ್ಲಿ ಶನಿವಾರ ಶಾಸಕ ಎಂ.ಚಂದ್ರಪ್ಪ ನೇತೃತ್ವದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ನೊಳಂಬ ಸಮುದಾಯದ ಪ್ರಮುಖರು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಿದರು. ಮುಖ್ಯಮಂತ್ರಿ ಸೇರಿ ಸಚಿವರು, ವಿರೋಧ ಪಕ್ಷದ ನಾಯಕರು, ಶಾಸಕರು, ಗಣ್ಯರನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು.
ರಾಜ್ಯದ ಎಲ್ಲ ಕಡೆಯಿಂದ 10 ಲಕ್ಷಕ್ಕೂ ಹೆಚ್ಚು ಭಕ್ತರು ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಇದ್ದು, ಬೃಹತ್ ವೇದಿಕೆ, ಊಟೋಪಚಾರ ಒದಗಿಸುವ ಕುರಿತು ಚರ್ಚೆ ನಡೆಸಲಾಯಿತು. ಕಾರ್ಯಕ್ರಮಕ್ಕೆ ಅಂದಾಜು ₹ 2 ಕೋಟಿಗೂ ಹೆಚ್ಚು ಖರ್ಚು ಬರಲಿದ್ದು, ಹಣ ಕ್ರೋಢೀಕರಿಸುವ ಬಗ್ಗೆ ಚರ್ಚಿಸಲಾಯಿತು. ಕೆಲವು ಭಕ್ತರು ₹ 5 ಲಕ್ಷದವರೆಗೂ ದೇಣಿಗೆ ನೀಡುವುದಾಗಿ ವೇದಿಕೆಯಲ್ಲಿ ವಾಗ್ದಾನ ನೀಡಿದರು.
‘ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಎಲ್ಲ ಜನಾಂಗದಲ್ಲೂ ಸಿದ್ದರಾಮೇಶ್ವರ ಸ್ವಾಮಿಯ ಭಕ್ತರಿದ್ದು, ತನು, ಮನ, ಧನದ ನೆರವು ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಬರುವುದರಿಂದ ಬೃಹತ್ ವೇದಿಕೆ ನಿರ್ಮಿಸಿಕೊಡುತ್ತೇನೆ’ ಎಂದು ಶಾಸಕ ಎಂ.ಚಂದ್ರಪ್ಪ ಭರವಸೆ ನೀಡಿದರು.
‘ನೊಳಂಬರು ಮೂಲತಃ ಕ್ಷತ್ರಿಯರು. ರಾಜ್ಯಭಾರ ಮಾಡಿದ ಇತಿಹಾಸ ನಮ್ಮ ಸಮುದಾಯಕ್ಕೆ ಇದೆ. ಆದ್ದರಿಂದ ನೊಳಂಬ ಸಮುದಾಯದ ಜನರಿಗೆ ಛಲ ಹೆಚ್ಚು. ಹಿಡಿದ ಕೆಲಸ ಯಶಸ್ವಿಯಾಗದೆ ಬಿಡುವುದಿಲ್ಲ. ಪಟ್ಟಣದಲ್ಲಿ ಅತ್ಯಂತ ಯಶಸ್ವಿಯಾಗಿ ಸಿದ್ದರಾಮೇಶ್ವರ ಜಯಂತಿ ಆಚರಿಸಲಾಗುವುದು’ ಎಂದು ತರಿಕೆರೆಯ ಮಾಜಿ ಶಾಸಕ ಎಸ್.ಎಂ.ನಾಗರಾಜ್ ಹೇಳಿದರು.
‘ಈ ತಾಲ್ಲೂಕಿನಲ್ಲಿ ನೊಳಂಬ ಸಮುದಾಯದ ಜನ ಕಡಿಮೆ ಇದ್ದರೂ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡಿದ್ದೇವೆ. ಕಾರ್ಯಕ್ರಮ ನಡೆಸಲು ಜನಶಕ್ತಿಗಿಂತ ಇಚ್ಛಾಶಕ್ತಿ ಮುಖ್ಯ. ಕಾರ್ಯಕ್ರಮ ನಡೆಸಲು ಕಡೂರು, ಶಿವಮೊಗ್ಗದಿಂದ ಒತ್ತಡ ಬಂದರೂ ಕೇಂದ್ರ ಸಮಿತಿಯಲ್ಲಿ ಚರ್ಚಿಸಿ ಇಲ್ಲಿ ನಡೆಸಲು ಆದೇಶ ನೀಡಲಾಯಿತು’ ಎಂದು ನೊಳಂಬ ಸಮುದಾಯದ ಕೇಂದ್ರ ಸಮಿತಿಯ ಅಧ್ಯಕ್ಷ ಬಿ.ಕೆ.ಚಂದ್ರಶೇಖರ್ ಹೇಳಿದರು.
‘ಶಾಸಕ ಎಂ.ಚಂದ್ರಪ್ಪ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಸಲಾಗುವುದು. ಎಲ್ಲರೂ ನಮಗೆ ಕೈಜೋಡಿಸಬೇಕು’ ಎಂದು ಮಹೋತ್ಸವ ಸಮಿತಿಯ ಅಧ್ಯಕ್ಷ ಕೆ.ಸಿ.ಶಶಿಧರ ಕೋರಿದರು.
‘ಕಳೆದ ಬಾರಿ ಬೆಂಗಳೂರಿನಲ್ಲಿ ಸಿದ್ದರಾಮೇಶ್ವರ ಜಯಂತಿ ಆಚರಿಸಲಾಗಿತ್ತು. ಈ ಬಾರಿ ಮಧ್ಯಕರ್ನಾಟಕದಲ್ಲಿ ಆಯೋಜಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಜನ ಸೇರಿಸುವುದು ಕಷ್ಟವಲ್ಲ. ಹಣ ಸಂಗ್ರಹಿಸುವುದೂ ಕಷ್ಟವಲ್ಲ. ಸಿದ್ದರಾಮೇಶ್ವರ ಭಕ್ತರು ಕೊಡುಗೈ ದಾನಿಗಳಾಗಿದ್ದು, ಸಾಕಷ್ಟು ನೆರವು ನೀಡುತ್ತಾರೆ. ಆಯೋಜಕರು ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಬೇಕು’ ಎಂದು ನಿವೃತ್ತ ಐಪಿಎಸ್ ಅಧಿಕಾರಿ ತಿಪಟೂರಿನ ಲೋಕೇಶ್ವರ್ ಸಲಹೆ ನೀಡಿದರು.
ಬೆಟ್ಟದಹಳ್ಳಿ ಚಂದ್ರಶೇಖರ ಸ್ವಾಮೀಜಿ, ಪುಷ್ಪಗಿರಿಯ ಸೋಮಶೇಖರ ಸ್ವಾಮೀಜಿ, ಯಳನಾಡು ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಮೈಸೂರಿನ ಮಾತೆ ಬಸವಾಂಜಲಿ, ನಿವೃತ್ತ ಐಪಿಎಸ್ ಅಧಿಕಾರಿಗಳಾದ ಸಿದ್ದರಾಮಪ್ಪ, ಅಜ್ಜಪ್ಪ, ಬಿಜೆಪಿ ಮುಖಂಡ ಲಿಂಗಮೂರ್ತಿ, ಬಿಜೆಪಿ ರಾಜ್ಯ ವಕ್ತಾರ ಎಚ್.ಎನ್.ಚಂದ್ರಶೇಖರ್, ರವಿ ಶಾನುಬೋಗ್, ಮಠದ ಶಿವು, ಜೋಗಿ ಬಸವರಾಜ್, ರಂಗೇಶ್, ಧನಂಜಯ, ಪ್ರಭಾಕರ್ ಮಾಳಿಗೆ, ಶಿವಣ್ಣ, ಎ.ವಿ.ಶಿವರುದ್ರಪ್ಪ, ಚಂದ್ರಶೇಖರ ಸ್ವಾಮಿ, ಬಿ.ಜೆ.ಚಂದ್ರಶೇಖರ್, ಶಶಿಧರ್, ಲೋಕೇಶ್, ಮರಿತಿಮ್ಮಪ್ಪ, ನಾಗಭೂಷಣ್, ಆನಂದಪ್ಪ, ಡಾ.ಕೆ.ಪಿ.ಈಶ್ವರಪ್ಪ, ಶಾಂತರಾಜ್ ಪಾಟೀಲ್, ಬಸವರಾಜಪ್ಪ, ನಾಗರಾಜ್, ಮಲ್ಲಿಕಾರ್ಜುನ್, ಮಹೇಶ್ವರಪ್ಪ, ಹನುಮಂತಪ್ಪ, ಲೋಕೇಶ್, ಕುಬೇರಪ್ಪ, ಜಿ.ಎನ್.ಪರಮೇಶ್ವರಪ್ಪ, ಉತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ನೊಳಂಬ ಸಮಾಜದ ರಾಜ್ಯದ ವಿವಿಧ ಜಿಲ್ಲೆಗಳ ಮುಖಂಡರು ಸಭೆಯಲ್ಲಿ ಹಾಜರಿದ್ದರು.
ದುಡಿಮೆಯ ಒಂದಷ್ಟು ಪಾಲನ್ನು ಸಮುದಾಯದ ಏಳಿಗೆಗೆ ಸಮಾಜ ಸೇವೆಗೆ ದಾನ ಮಾಡಿದರೆ ಆಯಸ್ಸು ಹೆಚ್ಚಾಗುತ್ತದೆ. ಎಲ್ಲರೂ ತನು ಮನ ಧನ ನೀಡಿ ಕಾರ್ಯಕ್ರಮ ಯಶಸ್ಸಿಗೆ ಕೈಜೋಡಿಸಿ.– ಸೋಮಶೇಖರ ಸ್ವಾಮೀಜಿ, ಪುಷ್ಪಗಿರಿ ಮಠ
ಹೊಳಲ್ಕೆರೆ ತಾಲ್ಲೂಕಿನಲ್ಲಿ ನೊಳಂಬ ಸಮುದಾಯದ ಜನ ಕಡಿಮೆ ಸಂಖ್ಯೆಯಲ್ಲಿದ್ದರೂ ಪಕ್ಕದ ಹೊಸದುರ್ಗ ತಾಲ್ಲೂಕಿನಲ್ಲಿ ಹೆಚ್ಚು ಜನರಿದ್ದಾರೆ. ನಾನೂ ಕಾರ್ಯಕ್ರಮಕ್ಕೆ ₹5 ಲಕ್ಷ ಅನುದಾನ ನೀಡುತ್ತೇನೆ. ಎಲ್ಲರೂ ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸೋಣ.– ಲಿಂಗಮೂರ್ತಿ, ಹೊಸದುರ್ಗ ಬಿಜೆಪಿ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.