ಸಿರಿಗೆರೆ: ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಲು ತರಬೇತಿ ಪಡೆಯಲು ಇಚ್ಚಿಸುವ ಎಲ್ಲ ಮಕ್ಕಳಿಗೆ ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದು ತರಳಬಾಳು ಪೀಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಸಿರಿಗೆರೆಯಲ್ಲಿ ಆಯೋಜಿಸಿರುವ ಬೆಂಗಳೂರು ವಿಭಾಗ ಹಾಗೂ ರಾಜ್ಯಮಟ್ಟದ ಯೋಗಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
‘ಮಠದ ಕೇಂದ್ರದಲ್ಲಿ ಅಗತ್ಯ ಇರುವವರಿಗೆ ಉಚಿತವಾಗಿ ಎಲ್ಲ ಸೌಲಭ್ಯ ನೀಡಲಾಗುವುದು. ಅಲ್ಲಿನ ಸಭಾಂಗಣ, ವಸತಿ ಮತ್ತು ದಾಸೋಹವನ್ನು ಸ್ಪರ್ಧಿಗಳು ಬಳಸಿಕೊಳ್ಳಬಹುದು’ ಎಂದರು.
‘ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಯೋಗದಿಂದ ಮಾತ್ರ ಸಾಧ್ಯ. ಮನಸ್ಸು ಹಾವು ಇದ್ದಂತೆ. ಶರೀರ ಹಾವಿನ ಬುಟ್ಟಿಯ ಹಾಗೆ. ಮನುಷ್ಯ ಮನಸ್ಸಿಗೆ ಅಧೀನನಾಗಿ ಬದುಕಬೇಕು’ ಎಂದು ಹೇಳಿದರು.
ಯೋಗಸ್ಪರ್ಧೆಗಳನ್ನು ಉದ್ಘಾಟಿಸಿದ ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ‘ಮಕ್ಕಳಿಗೆ ಯೋಗ ಕಲಿಸುವವರು ಯೋಗಿಗಳಂತೆ ಇರಬೇಕು. ಜಗತ್ತಿನ ಎಲ್ಲ ಭಾಗಗಳಲ್ಲಿ ಯೋಗಕ್ಕೆ ಈಗ ಪ್ರಾಶಸ್ತ್ಯ ದೊರಕಿದೆ. ಇದರಿಂದ ಎಲ್ಲೆಡೆ ಭಾರತೀಯ ಸಂಸ್ಕೃತಿಯನ್ನು ರಕ್ಷಿಸಲು ಅನುಕೂಲವಾಗಿದೆ. ಯೋಗ ದಿನದಂದು ಜಗತ್ತಿನ ಎಲ್ಲ ದೇಶಗಳು ಸೂರ್ಯನ ಕಡೆ ಮುಖ ಮಾಡುತ್ತಿವೆ. ಯೋಗ ಕಲಿಸುವವರಿಗೂ ಈಗ ಬೆಲೆ ಬಂದಿದೆ. ಒಂದು ಲಕ್ಷಕ್ಕೂ ಹೆಚ್ಚು ಜನರು ಈಗ ಹಲವು ದೇಶಗಳಲ್ಲಿ ಯೋಗವನ್ನು ಕಲಿಸುತ್ತಿದ್ದಾರೆ’ ಎಂದು ಹೇಳಿದರು.
‘ಯೋಗ ಕೇವಲ ಆಸನಗಳಿಗೆ ಸೀಮಿತವಾಗಬಾರದು. ಅದನ್ನು ಕೆಲವರು ಸರ್ಕಸ್ ರೀತಿಯಲ್ಲಿ ಪರಿಗಣಿಸುತ್ತಿದ್ದಾರೆ. ಯೋಗ ಮನುಷ್ಯನ ಬದುಕಿನಲ್ಲಿ ಸುಪ್ರೀಂ ಕೋರ್ಟ್ ಇದ್ದಂತೆ’ ಎಂದರು.
ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಯೋಗ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಗಳಿಸುವ ವಿದ್ಯಾರ್ಥಿಗಳಿಗೆ ಕ್ರಮವಾಗಿ ₹ 25,000 ₹ 15,000 ಮತ್ತು ₹ 10,000 ನಗದು ಬಹುಮಾನ ನೀಡುವುದಾಗಿ ಘೋಷಿಸಿದರು.
ಕೆ.ಆರ್. ನವೀನ್ ಕುಮಾರ್, ಭಾಗಿರಥಿ ಕನ್ನಡತಿ ಮಾತನಾಡಿದರು. ಸಿರಿಗೆರೆಯ ಮಕ್ಕಳು ಮಲ್ಲಕಂಬ ಮತ್ತು ಮಲ್ಲಿಹಗ್ಗ ಪ್ರದರ್ಶನ ನೀಡಿದರು.
ಚಿಕ್ಕಬಳ್ಳಾಪುರದ ಯಾಶಿಕಾ ಮತ್ತು ಉಡುಪಿಯ ಶಿವಾನಿ ಶೆಟ್ಟಿ ಆಕರ್ಷಕ ಯೋಗ ಪ್ರದರ್ಶನ ನೀಡಿ ಎಲ್ಲರ ಕಣ್ಮನ ಸೆಳೆದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಿದಾನಂದಸ್ವಾಮಿ, ತರಳಬಾಳು ಸಂಸ್ಥೆಯ ಆಡಳಿತಾಧಿಕಾರಿ ಎಚ್.ವಿ.ವಾಮದೇವಪ್ಪ, ವಿಶೇಷಾಧಿಕಾರಿ ವೀರಣ್ಣ ಜತ್ತಿ ಭಾಗವಹಿಸಿದ್ದರು.
ದೈಹಿಕ ಶಿಕ್ಷಣ ಶಿಕ್ಷಕ ಸಿರಿಗೆರೆಯ ನವೀನ್‌ಕುಮಾರ್ ಸ್ವಾಗತಿಸಿದರು. ಎಸ್.ಟಿ. ಉಮೇಶ್ ನಿರೂಪಣೆ ಮಾಡಿದರು. ಅರುಣ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.