ADVERTISEMENT

ಕೋಡಿ ಹರಿದ ನೀರನ್ನು ಹಿಡಿದಿಟ್ಟ ಗ್ರಾಮಸ್ಥರು

ಕಾತ್ರಾಳ್‌ ಕೆರೆಯ ನೀರನ್ನು ಪೈಪ್‌ಲೈನ್ ಮೂಲಕ ಒಯ್ದು ತಮ್ಮೂರಿನ ಕೆರೆ ತುಂಬಿಸಿದರು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 15:51 IST
Last Updated 14 ಸೆಪ್ಟೆಂಬರ್ 2024, 15:51 IST
ಕಾತ್ರಾಳ್‌ ಕೆರೆಯಿಂದ ಹರಿದು ಹೋಗುವ ನೀರಿಗೆ ಮೋಟಾರು ಅಳವಡಿಸಿ ನೀರೆತ್ತುತ್ತಿರುವುದು
ಕಾತ್ರಾಳ್‌ ಕೆರೆಯಿಂದ ಹರಿದು ಹೋಗುವ ನೀರಿಗೆ ಮೋಟಾರು ಅಳವಡಿಸಿ ನೀರೆತ್ತುತ್ತಿರುವುದು   

ಸಿರಿಗೆರೆ: ಹರಿದು ವ್ಯರ್ಥವಾಗುತ್ತಿದ್ದ ನೀರಿಗೆ ತಡೆ ಹಾಕಿ ತಮ್ಮೂರಿನ ಕೆರೆಯನ್ನು ಭರ್ತಿ ಮಾಡಿಕೊಳ್ಳುವ ಅಪರೂಪದ ಕಾರ್ಯಕ್ಕೆ ಸಮೀಪದ ಲಿಂಗದಹಳ್ಳಿ (ಸುಲ್ತಾನಿಪುರ) ಗ್ರಾಮಸ್ಥರು ಮುಂದಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕಾತ್ರಾಳ್‌ ಕೆರೆ ಈ ಬಾರಿಯ ಬಿರುಸಿನ ಮಳೆ ಹಾಗೂ ಭರಮಸಾಗರ ಏತ ನೀರಾವರಿ ನೀರಿನಿಂದ ಭರ್ತಿಯಾಗಿದ್ದು ಆಗಸ್ಟ್‌ ತಿಂಗಳಲ್ಲಿ ಕೋಡಿ ಹರಿದಿತ್ತು. ಜಿಲ್ಲೆಯಲ್ಲಿಯೇ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆ ಇರುವ ಕಾತ್ರಾಳ್‌ ಕೆರೆಯ ಕೋಡಿಯಿಂದ ಅಪಾರ ಪ್ರಮಾಣದ ನೀರು ಹರಿದು ಮುಂದೆ 7 ಕಿ.ಮೀ. ದೂರದಲ್ಲಿ ನಿರ್ಮಿಸಿರುವ ಚೆಕ್‌ ಡ್ಯಾಂ ತುಂಬಿ, ಅದು ಸಂಗೇನಹಳ್ಳಿ ಕೆರೆಗೆ ಹೋಗಿ ಸೇರಿಕೊಳ್ಳುತ್ತದೆ.

ತಮ್ಮೂರಿನ ಸಮೀಪದಲ್ಲಿಯೇ ಹರಿದು ಹೋಗುವ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಮುಂದಾದ ಲಿಂಗದಹಳ್ಳಿಯ ಹಿರಿಯ ಕೃಷಿಕ ಮುಸ್ಟೂರಪ್ಪ, ಎಸ್.‌ಆರ್.‌ ತಿಪ್ಪೇಸ್ವಾಮಿ ಹಾಗೂ  ಗ್ರಾಮಸ್ಥರು ಚರ್ಚಿಸಿ, ಹರಿದು ಹೋಗುವ ನೀರನ್ನು ತಮ್ಮೂರಿನ ಕೆರೆಗೆ ಹಾಯಿಸಿಕೊಳ್ಳುವ ಉಪಾಯ ಕಂಡುಕೊಂಡಿದ್ದಾರೆ. ಚೆಕ್‌ಡ್ಯಾಂನ ಸಮೀಪವೇ 10 ಎಚ್.ಪಿ. ಗಾತ್ರದ 2 ಮೋಟಾರುಗಳನ್ನು ಅಳವಡಿಸಿ, ಮೂರು ವಾರಗಳಿಂದ ತಮ್ಮೂರಿನ ಕೆರೆಗೆ ನೀರು ಹಾಯಿಸಿಕೊಳ್ಳುತ್ತಿದ್ದಾರೆ. ಅಂದಾಜು 42 ಎಕರೆ ವಿಸ್ತೀರ್ಣವುಳ್ಳ ಸುಲ್ತಾನಿಪುರ ಕೆರೆಯಲ್ಲಿ ಈಗಾಗಲೇ ಸಾಕಷ್ಟು ನೀರು ಸಂಗ್ರಹವಾಗಿದೆ.

ADVERTISEMENT

ಕಾತ್ರಾಳ್‌ ಕೆರೆಯಿಂದ ನೀರು ಹೊರಗೆ ಹೋಗುವಷ್ಟು ದಿನಗಳ ಕಾಲವೂ ಚೆಕ್‌ ಡ್ಯಾಂನಿಂದ ನೀರು ಪಂಪ್‌ ಮಾಡುವುದು ಈ ಗ್ರಾಮದ ಕೃಷಿಕರ ಇಂಗಿತವಾಗಿದೆ. ಮಳೆಗಾಲ ಮುಗಿಯುವುದರೊಳಗೆ ತಮ್ಮೂರಿನ ಕೆರೆಗೆ ನೀರು ಸಂಗ್ರಹಿಟ್ಟುಕೊಂಡರೆ ಬೇಸಿಗೆಯಲ್ಲಿ ತೋಟಗಾರಿಕೆ ಬೆಳೆಗೆ ಅನುಕೂಲವಾಗಲಿದೆ ಎಂದು ರೈತರು ಹೇಳಿದ್ದಾರೆ.

ರೈತರ ಈ ಅಪರೂಪದ ಯತ್ನವನ್ನು ಕೆರೆ ಸಮಿತಿಯ ಸಿ.ಆರ್.‌ ನಾಗರಾಜ್‌, ಸಿರಿಗೆರೆ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ. ಮಂಜುನಾಥ್‌ ಮತ್ತು ಚಂದ್ರಮೌಳಿ ಅವರು ಶನಿವಾರ ವೀಕ್ಷಿಸಿದರು.

ರೈತರದೇ ಖರ್ಚು: ಕೃಷಿಕರು ಈ ಬಗ್ಗೆ ಚರ್ಚಿಸಲು ಕರೆದ ಗ್ರಾಮಸಭೆಯಲ್ಲಿ ಎಲ್ಲರ ಸಹಮತ ದೊರೆತಿತ್ತು. ಮೋಟಾರು, ವಿದ್ಯುತ್‌, ಕೆರೆ ಕಾಲುವೆ ದುರಸ್ತಿಗೆ ಗ್ರಾಮಸ್ಥರೆಲ್ಲರೂ ವಂತಿಗೆ  ನೀಡಿದ್ದಾರೆ. ಅಂದಾಜು ₹3 ಲಕ್ಷ ವೆಚ್ಚದಲ್ಲಿ ಭರಪೂರ ನೀರನ್ನು ತಮ್ಮ ಊರಿನ ಕೆರೆಗೆ ತುಂಬಿಸಿಕೊಳ್ಳುತ್ತಿರುವುದರಿಂದ ಅವರಲ್ಲಿ ಸಂಭ್ರಮ ಮನೆಮಾಡಿದೆ.

ಲಿಂಗದಹಳ್ಳಿ (ಸುಲ್ತಾನಿಪುರ) ಕೆರೆಯಲ್ಲಿ ಸಂಗ್ರಹವಾಗಿರುವ ನೀರು

- ‘ರೈತರೇ ಮುಂದಾಗಬೇಕು’

ಲಿಂಗದಹಳ್ಳಿ ಗ್ರಾಮಸ್ಥರು ಇತರರಿಗೆ ಮಾದರಿ ಆಗುವಂತಹ ಕೆಲಸ ಮಾಡಿದ್ದಾರೆ. ಕೇವಲ ಇಪ್ಪತ್ತು ದಿನಗಳಲ್ಲಿ ಆ ಊರಿನ ಕೆರೆಯಲ್ಲಿ ಬಹಳಷ್ಟು ನೀರು ಸಂಗ್ರಹವಾಗಿದೆ. ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭರಮಸಾಗರ ಏತ ನೀರಾವರಿ ಯೋಜನೆ ಮೂಲಕ ನೀರು ತಂದ ನಂತರ ಕೃಷಿಕರಲ್ಲಿ ಜಾಗೃತಿ ಮೂಡುತ್ತಿದೆ. ಇಂತಹ ಕಾರ್ಯಕ್ಕೆ ರೈತರೇ ಮುಂದಾಗಬೇಕು ಎಂದು ಏತನೀರಾವರಿಯ ಕೆರೆ ಸಮಿತಿಯ ಸಿ.ಆರ್.‌ ನಾಗರಾಜ್‌ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.