ADVERTISEMENT

ಸಿರಿಗೆರೆ | ನೌಕರರ ವಜಾ ನಿರ್ಧಾರ: ಮುಂದುವರಿದ ಅಹೋರಾತ್ರಿ ಧರಣಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 6:17 IST
Last Updated 19 ಫೆಬ್ರುವರಿ 2026, 6:17 IST
ಧರಣಿಯಲ್ಲಿ ಪಾಲುಗೊಂಡಿರುವ ನೌಕರರು
ಧರಣಿಯಲ್ಲಿ ಪಾಲುಗೊಂಡಿರುವ ನೌಕರರು   

ಸಿರಿಗೆರೆ: ನೌಕರಿ ಆಸೆ ತೋರಿಸಿ ಭೂಮಿಯನ್ನು ಪಡೆದು ಪವನ ವಿದ್ಯುತ್‌ ಸ್ಥಾವರ ಸ್ಥಾಪಿಸಿದ್ದ ರಿನ್ಯೂ ಪವನ ವಿದ್ಯುತ್‌ ಕಂಪನಿ ಏಕಾಏಕಿ 36 ಜನರನ್ನು ವಜಾ ಗೊಳಿಸುವ ನಿರ್ಧಾರ ಕೈಗೊಂಡಿರುವುದರ ವಿರುದ್ಧ ಸಂಘಟನೆಗಳು 3 ದಿನದಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ಭರಮಸಾಗರ ಹೋಬಳಿಯ ವ್ಯಾಪ್ತಿಯಲ್ಲಿ ವಿದ್ಯುತ್‌ ಉತ್ಪಾದನೆಗೆ ಮುಂದಾಗಿದ್ದ ಕಂಪನಿ ಸ್ಥಳೀಯರಿಗೆ ಮನೆಗೊಂದು ನೌಕರಿಯ ಆಸೆ ತೋರಿಸಿ ರೈತರಿಂದ ಜಮೀನನ್ನು ಪಡೆದುಕೊಂಡಿತ್ತು. ಭರವಸೆ ನೀಡಿದಂತೆ ಆರಂಭದಲ್ಲಿ 46 ಜನರಿಗೆ ಸ್ಥಾವರದಲ್ಲಿ ಉದ್ಯೋಗ ನೀಡಿತ್ತು. ಈಗ ಏಕಾಏಕಿ 36 ಜನ ನೌಕರರಿಗೆ ಉದ್ಯೋಗದಿಂದ ವಜಾ ಮಾಡುವ ಸೂಚನೆ ನೀಡಿದೆ. ಕಂಪನಿಯ ನಿರ್ಧಾರ ಖಂಡಿಸಿ ನೌಕರರು ಧರಣಿ ನಡೆಸುತ್ತಿದ್ದಾರೆ.

ನೌಕರರ ವಜಾ ನಿರ್ಧಾರವನ್ನು ರಾಜ್ಯ ವಿಂಡ್‌ ಎನೆರ್ಜಿ ನೌಕರರ ಯೂನಿಯನ್‌, ಕರ್ನಾಟಕ ರಾಜ್ಯ ರೈತ ಸಂಘ (ಪುಟ್ಟಣ್ಣ ಬಣ), ಎಐಟಿಯುಸಿ ಖಂಡಿಸಿ, ನೌಕರರಿಗೆ ಬೆಂಬಲ ನೀಡಿವೆ.

ADVERTISEMENT

ಕಂಪನಿಯು ರೈತರಿಂದ ಪಡೆಯಲಾಗಿದ್ದ ಭೂಮಿಯಲ್ಲದೆ ಸರ್ಕಾರಿ ಭೂಮಿಯಲ್ಲಿ ಪವಯ ಯಂತ್ರಗಳನ್ನು ಅಳವಡಿಸಿದೆ. ಇದಕ್ಕೆ ಸರ್ಕಾರದ ಅನುಮತಿ ಪಡೆದಿಲ್ಲ ಎಂದು ಸ್ಥಳೀಯರು ದೂರುತ್ತಲೇ ಬಂದಿದ್ದಾರೆ. ಕಂಪನಿಯ ಕಚೇರಿಯನ್ನೂ ಸರ್ಕಾರಿ ಭೂಮಿಯಲ್ಲಿ ಕಟ್ಟಲಾಗಿದೆ. ಅದಕ್ಕೆ ಸೂಕ್ತ ಅನುಮತಿ ಪತ್ರವನ್ನು ಪಡೆದುಕೊಂಡಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿಯಿಂದಲೂ ಅನುಮತಿ ಪಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊರ ರಾಜ್ಯಗಳಿಂದ ಬರುವ ಕಂಪನಿಯವರು ಸ್ಥಳೀಯರ ಭೂಮಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಉದ್ಯಮಗಳನ್ನು ಸ್ಥಾಪಿಸುತ್ತಾರೆ. ಸ್ಥಳೀಯರನ್ನು ತಾತ್ಕಾಲಿಕವಾಗಿ ನೇಮಿಸಿಕೊಂಡು ಅವರ ಮೇಲೆ ದೌರ್ಜನ್ಯ ನಡೆಸುತ್ತಾರೆ ಎಂದರು ರೈತ ಸಂಘದ ಅಧ್ಯಕ್ಷ ಪ್ರಭು ಕಿಡಿಕಾರಿದರು.

ಎಐಯುಟಿಸಿ ಜಿಲ್ಲಾ ಘಟಕದ ಅಧ್ಯಕ್ಷ ಬುಳ್ಳಾಪುರದ ಹನುಮಂತಪ್ಪ, ಉಪಾಧ್ಯಕ್ಷ ಶಿವಾಜಿ ರಾವ್‌, ಮೋಹನ್‌ ಕುಮಾರ್‌, ಜಿಲ್ಲಾ ಘಟಕದ ಕಾರ್ಮಿಕ ಅಧಿಕಾರಿ ಅನಿಲ್‌ ಬೆಂಗಾಟೆ, ಭೀಮಪ್ಪ ಸೇರಿದಂತೆ ಹಲವರು ಇದ್ದರು.

ಮೂರು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಆಡಳಿತ ಮಂಡಳಿ ಮುಷ್ಕರದ ಸ್ಥಳಕ್ಕೆ ಬಂದಿಲ್ಲ. ವಜಾ ಆದೇಶ ಹಿಂತೆಗೆದುಕೊಳ್ಳದಿದ್ದರೆ ನೌಕರರ ಧರಣಿಯನ್ನು ತೀವ್ರಗೊಳಿಸಲಾಗುವುದು. ಜೊತೆಗೆ ಪವನ ವಿದ್ಯುತ್‌ ಸ್ಥಾವರದ ಯಂತ್ರಗಳಿಗೆ ಬೀಗ ಹಾಕಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.