ADVERTISEMENT

ಗುಲಾಮಗಿರಿ ಮನಃಸ್ಥಿತಿ ಈಗಲೂ ಜೀವಂತ: ಸಿಎಂ ಸಿದ್ದರಾಮಯ್ಯ

ಭೋವಿ ಗುರುಪೀಠದ ಶ್ರೀಗಳ ದೀಕ್ಷಾ ರಜತ ಮಹೋತ್ಸವ; ಸಿ.ಎಂ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 15:22 IST
Last Updated 20 ಜುಲೈ 2024, 15:22 IST
ಚಿತ್ರದುರ್ಗದಲ್ಲಿ ನಡೆದ ದೀಕ್ಷಾ ರಜತ ಮಹೋತ್ಸವದಲ್ಲಿ ಭೋವಿ ಗುರುಪೀಠದ ಪೀಠಾಧ್ಯಕ್ಷ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೂವಿನ ಪಕಳೆಗಳನ್ನು ಸುರಿಸಿದರು. ಸಚಿವರಾದ ಸತೀಶ್‌ ಜಾರಕಿಹೊಳಿ, ಶಿವರಾಜ ತಂಗಡಗಿ ಹಾಗೂ ಡಿ.ಸುಧಾಕರ್‌ ಉಪಸ್ಥಿತರಿದ್ದರು 
ಚಿತ್ರದುರ್ಗದಲ್ಲಿ ನಡೆದ ದೀಕ್ಷಾ ರಜತ ಮಹೋತ್ಸವದಲ್ಲಿ ಭೋವಿ ಗುರುಪೀಠದ ಪೀಠಾಧ್ಯಕ್ಷ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೂವಿನ ಪಕಳೆಗಳನ್ನು ಸುರಿಸಿದರು. ಸಚಿವರಾದ ಸತೀಶ್‌ ಜಾರಕಿಹೊಳಿ, ಶಿವರಾಜ ತಂಗಡಗಿ ಹಾಗೂ ಡಿ.ಸುಧಾಕರ್‌ ಉಪಸ್ಥಿತರಿದ್ದರು    

ಚಿತ್ರದುರ್ಗ: ‘ಶತಮಾನಗಳಿಂದಲೂ ದಾಸ್ಯ, ಗುಲಾಮಗಿರಿ ವ್ಯವಸ್ಥೆ ಇದ್ದ ಕಾರಣ ಅದರಿಂದ ಇಂದಿಗೂ ಹೊರಬರಲು ಸಾಧ್ಯವಾಗಿಲ್ಲ. ಗುಲಾಮಗಿರಿ ಮನಃಸ್ಥಿತಿ ಈಗಲೂ ಜೀವಂತವಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಹೊರವಲಯದ ಭೋವಿ ಗುರುಪೀಠದ ಆವರಣದಲ್ಲಿ ಶನಿವಾರ ನಡೆದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ದೀಕ್ಷಾ ರಜತ ಮಹೋತ್ಸವದಲ್ಲಿ ಅವರು ಮಾತನಾಡಿದರು.

‘ಮೇಲ್ಜಾತಿಯವರು ಎಷ್ಟೇ ಬಡವರಾಗಿದ್ದರೂ ಅವರು ಸಿಕ್ಕಾಗ ಬುದ್ದಿ, ಸ್ವಾಮಿ ಎಂದು ಮಾತನಾಡಿಸುತ್ತಾರೆ. ಆದರೆ ಕೆಳಜಾತಿಯವರು ಶ್ರೀಮಂತರಾಗಿದ್ದರೂ ಅವರನ್ನು ಕಂಡಾಗ ಏಕವಚನದಲ್ಲಿ ಮಾತನಾಡುತ್ತಾರೆ. ಇದೇ ಗುಲಾಮಗಿರಿ ಮನಃಸ್ಥಿತಿ’ ಎಂದರು.

ADVERTISEMENT

‘ಗುಲಾಮಗಿರಿ ಮನಸ್ಥಿತಿಯಿಂದ ಹೊರಬಂದು ಸ್ವಾಭಿಮಾನದಿಂದ ಬದುಕುವ ವಾತಾವರಣ ನಿರ್ಮಾಣವಾಗಬೇಕು. ಮನುಷ್ಯರು ಸಮಾನತೆಯಿಂದ ಬದುಕುವುದನ್ನು ಕಲಿಯಬೇಕು. ಸ್ವಾರ್ಥಿಗಳು, ಪಟ್ಟಭದ್ರ ಹಿತಾಸಕ್ತಿಗಳಿಂದ ಜಾತಿ ವ್ಯವಸ್ಥೆ ನಿರ್ಮಾಣವಾಯಿತು. ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೂಲಕ ಸಮ ಸಮಾಜ ನಿರ್ಮಾಣ ಮಾಡಬೇಕು’ ಎಂದು ತಿಳಿಸಿದರು.

‘ಭೋವಿ ಅಭಿವೃದ್ಧಿ ನಿಗಮದ ಸೌಲಭ್ಯಗಳು ಅನ್ಯರ ಪಾಲಾಗುವುದನ್ನು ತಪ್ಪಿಸಲು ನಿಗಮವನ್ನು ಭೋವಿ–ವಡ್ಡರ ಅಭಿವೃದ್ಧಿ ನಿಗಮವೆಂದು ಪುನರ್‌ ನಾಮಕರಣ ಮಾಡಬೇಕು. ಪ್ರತಿ ವರ್ಷ ನಿಗಮಕ್ಕೆ ₹ 500 ಕೋಟಿ ಅನುದಾನ ನೀಡಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಒತ್ತಾಯಿಸಿದರು.

‘ವಿಧಾನ ಪರಿಷತ್‌ಗೆ ಭೋವಿ ಸಮಾಜದ ಮುಖಂಡರೊಬ್ಬರನ್ನು ನಾಮ ನಿರ್ದೇಶನ ಮಾಡಬೇಕು. ಗಣಿ ಗುತ್ತಿಗೆ, ಕ್ರಷರ್ ಸ್ಥಾಪನೆಯಲ್ಲಿ ಭೋವಿ ಸಮಾಜದ ಸದಸ್ಯರಿಗೆ ಮೀಸಲಾತಿ ನೀಡಬೇಕು’ ಎಂದು ಆಗ್ರಹಿಸಿದರು.

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ ಮೇಲೆ ವಿವಿಧ ಹೂಗಳ ಪಕಳೆಯನ್ನು ಸುರಿಸುವ ಮೂಲಕ ಅಭಿನಂದಿಸಲಾಯಿತು. ಭೋವಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು, ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ಇದಕ್ಕೂ ಮೊದಲು ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಅವರು ಸ್ವಾಮೀಜಿಯನ್ನು ಅಭಿನಂದಿಸಿದರು. ವಿವಿಧ ಕ್ಷೇತ್ರಗಳ ಮಠಾಧೀಶರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.