ಚಿತ್ರದುರ್ಗ: ಸನ್‌ಸ್ಕ್ರೀನ್ ಟ್ಯೂಬ್ ನುಂಗಿ ಒದ್ದಾಡುತ್ತಿದ್ದ ಕೇರೆ ಹಾವಿಗೆ ನಗರದ ಉರಗಪ್ರೇಮಿ ಸ್ನೇಕ್ ಶಿವು ಹೊಸ ಬದುಕು ನೀಡಿದ್ದಾರೆ. ಸಕಾಲಕ್ಕೆ ಬೆಂಗಳೂರಿನ ವನ್ಯಜೀವಿ ಆಸ್ಪತ್ರೆಗೆ ಕೊಂಡೊಯ್ದು ಶಸ್ತ್ರಚಿಕಿತ್ಸೆ ಮಾಡಿಸಿ ಹಾವಿನ ಜೀವ ಉಳಿಯಲು ಕಾರಣರಾಗಿದ್ದಾರೆ.
ತಾಲ್ಲೂಕಿನ ಕಲ್ಲಹಳ್ಳಿಯ ಮಹಿಳೆ ಶ್ರೀದೇವಿ ಅವರ ತೋಟದ ಪಂಪ್‌ಹೌಸ್‌ನಲ್ಲಿ ಕೇರೆಹಾವು ಕಾಣಿಸಿಕೊಂಡಿತ್ತು. ಫೋನ್ ಕರೆ ಆಧರಿಸಿ ಸ್ಥಳಕ್ಕೆ ತೆರಳಿದ ಸ್ನೇಕ್ ಶಿವು ಅವರು ಹಾವು ರಕ್ಷಣೆ ಮಾಡಿದರು. ಆದರೆ, ಹೊಟ್ಟೆ ಊದಿಕೊಂಡಿದ್ದ ಹಾವು ಚಲಿಸಲಾಗದೇ ಒದ್ದಾಡುತ್ತಿತ್ತು.
ಕಬ್ಬಿಣ ಅಥವಾ ಪ್ಲಾಸ್ಟಿಕ್ ನುಂಗಿರಬಹುದು ಎಂದು ಊಹಿಸಿದ ಶಿವು ನಗರದ ಜಿಲ್ಲಾ ಆಸ್ಪತ್ರೆಯ ಪಶುವೈದ್ಯಕೀಯ ವಿಭಾಗಕ್ಕೆ ಕೊಂಡೊಯ್ದರು. ಹಾವಿಗೆ ಎಕ್ಸ್–ರೇ ಮಾಡಿ ನೋಡಿದಾಗ ಹೊಟ್ಟೆಯಲ್ಲಿ ಅಪಾಯಕಾರಿ ವಸ್ತು ಇರುವುದು ಖಾತ್ರಿಯಾಯಿತು. ಬಳಿಕ ಬೆಂಗಳೂರಿನ ಪಿಎಫ್‌ಎ (ಪೀಪಲ್ ಫಾರ್ ಅನಿಮಲ್ಸ್) ವನ್ಯಜೀವಿ ಆಸ್ಪತ್ರೆಗೆ ಒಯ್ದರು.
ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಿದ ವೈದ್ಯರು ಹೊಟ್ಟೆಯೊಳಗಿರುವ ವಸ್ತು ಪತ್ತೆಗೆ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದರು. ಹಾವಿನ ಹೊಟ್ಟೆಯನ್ನು 6 ಇಂಚು ಕೊಯ್ದಾಗ ಹೊಟ್ಟೆಯಲ್ಲಿ ಸನ್‌ಸ್ಕ್ರೀನ್ ಟ್ಯೂಬ್ ಪತ್ತೆಯಾಯಿತು.
ಹಾವಿನ ಹೊಟ್ಟೆಯಲ್ಲಿ ಇಲಿ, ಇತರೆ ಹಾವು, ಬೇರೆ ವಸ್ತುಗಳನ್ನು ನೋಡುತ್ತಿದ್ದ ವೈದ್ಯರು ಇದೇ ಮೊದಲ ಬಾರಿ ಸನ್‌ಸ್ಕ್ರೀನ್ ಟ್ಯೂಬ್ ಇರುವುದನ್ನು ನೋಡಿ ಚಕಿತರಾದರು.
ಒಂದೂವರೆ ಗಂಟೆ ಶಸ್ತ್ರಚಿಕಿತ್ಸೆ ನಡೆಯಿತು. ಟ್ಯೂಬ್ ಹಿಂಬದಿ ಚೂಪಾಗಿದ್ದರಿಂದ ತೀವ್ರ ಗಾಯಗಳಾಗಿವೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದರೂ ಹಾವನ್ನು ತೀವ್ರ ನಿಗಾ ಘಟಕದಲ್ಲೇ ಇರಿಸಲಾಗಿದೆ. ಸೆ.16ರಂದು ಶಸ್ತ್ರಚಿಕಿತ್ಸೆ ನಡೆಯಿತು.
ಕರ್ನಲ್ ಡಾ.ನವಾಜ್ ಷರೀಷ್ ಡಾ.ಮಾಧವ್ ಅವರು ವಿಶೇಷ ಆಸಕ್ತಿಯಿಂದ ಶಸ್ತ್ರಚಿಕಿತ್ಸೆ ಮಾಡಿದ್ದು ಹಾವು ಅಪಾಯದಿಂದ ಪಾರಾಗಿದೆ. ಕೆಲ ದಿನ ಆರೋಗ್ಯದ ಮೇಲೆ ನಿಗಾ ವಹಿಸಲಾಗುವುದುಸಲ್ಮಾನ್ ಖಾನ್ ಸಂಯೋಜಕ ವನ್ಯಜೀವಿ ಸಂರಕ್ಷಣಾ ಆಸ್ಪತ್ರೆ ಬೆಂಗಳೂರು
2000ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿದ್ದೇನೆ. ಮೊದಲ ಬಾರಿಗೆ ಹಾವು ಸನ್‌ಸ್ಕ್ರೀನ್ ಟ್ಯೂಬ್ ನುಂಗಿದ್ದು ಕಂಡಿದ್ದೇನೆ. ಹಾವು ಚೇತರಿಸಿಕೊಂಡ ಬಳಿಕ ಜೋಗಿಮಟ್ಟಿ ಅರಣ್ಯದಲ್ಲಿ ಬಿಡಲಾಗುವುದುಸ್ನೇಕ್ ಶಿವು ಉರಗಪ್ರೇಮಿ ಚಿತ್ರದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.