ADVERTISEMENT

ಚಿತ್ರದುರ್ಗ: ಕಗ್ಗತ್ತಲಲ್ಲಿ ಮುಳುಗಿದ ಕಲ್ಲಿನಕೋಟೆ

ನನೆಗುದಿಗೆ ಬಿದ್ದ ಹೊನಲು- ಬೆಳಕು ಕಾರ್ಯಕ್ರಮ, ತುಕ್ಕು ಹಿಡಿಯುತ್ತಿವೆ ದೀಪಗಳು

ಎಂ.ಎನ್.ಯೋಗೇಶ್‌
Published 20 ಫೆಬ್ರುವರಿ 2025, 7:02 IST
Last Updated 20 ಫೆಬ್ರುವರಿ 2025, 7:02 IST
ಹೊನಲು- ಬೆಳಕು ಕಾರ್ಯಕ್ರಮಕ್ಕೆ ಬಳಸಿದ್ದ ಲೈಟ್‌ಗಳು ಮೂಲೆ ಸೇರಿರುವುದು
ಹೊನಲು- ಬೆಳಕು ಕಾರ್ಯಕ್ರಮಕ್ಕೆ ಬಳಸಿದ್ದ ಲೈಟ್‌ಗಳು ಮೂಲೆ ಸೇರಿರುವುದು   

ಚಿತ್ರದುರ್ಗ: ಹಳೆಯದಾದ ವಿದ್ಯುತ್‌ ದೀಪಗಳನ್ನು ಬದಲಿಸಿ ಕಲ್ಲಿನಕೋಟೆಯ ಸ್ಮಾರಕಗಳನ್ನು ಹೊನಲು ಬೆಳಕಿನ ಅಲೆಯಲ್ಲಿ ಮಿನುಗಿಸಬೇಕು ಎಂಬ ಚಿಂತನೆ ನನಗುದಿಗೆ ಬಿದ್ದು ಹಲವು ವರ್ಷಗಳೇ ಕಳೆದಿವೆ. ಸದ್ಯ ಬೀದಿ ದೀಪಗಳೂ ಇಲ್ಲದ ಕಾರಣ ಇಡೀ ಕೋಟೆಯ ಆವರಣ ಕಗ್ಗತ್ತಲಲ್ಲಿ ಮುಳುಗಿದೆ.

ಬೆಳಿಗ್ಗೆ 6 ಗಂಟೆಗೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಕೋಟೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಸಂಜೆ 5.30 ಆಗುತ್ತಿದ್ದಂತೆ ಭದ್ರತಾ ಸಿಬ್ಬಂದಿ ಸಿಳ್ಳೆ ಹಾಕಿ ಪ್ರವಾಸಿಗರನ್ನು ಹೊರಗೆ ಕಳುಹಿಸುವ ಕಾರ್ಯಾಚರಣೆ ಆರಂಭಿಸುತ್ತಾರೆ. ‘ಕೋಟೆಯೊಳಗೆ ಕರೆಂಟ್  ಇಲ್ಲ, ಕತ್ತಲಾದರೆ ಚಿರತೆ, ಕರಡಿಗಳು ಬರುತ್ತವೆ ಬೇಗ ಹೊರಗೆ ತೆರಳಿ’ ಎಂಬ ಬೆದರಿಕೆಯನ್ನೂ ಹಾಕುತ್ತಾರೆ.

ಮೂರು ದಿನಗಳ ಹಿಂದಷ್ಟೇ ಕೋಟೆ ಪ್ರವೇಶದ್ವಾರದಿಂದ ಕೇವಲ 500 ಮೀಟರ್‌ ದೂರದಲ್ಲಿರುವ ಬನಶಂಕರಿ ಗುಡಿಯ ಬಳಿ ಚಿರತೆ ಕಾಣಿಸಿಕೊಂಡಿದೆ. ಈ ಘಟನೆಯ ನಂತರ ಮುಂಜಾನೆ, ಸಂಜೆ ಈ ಭಾಗದಲ್ಲಿ ವಾಕಿಂಗ್‌ಗೆ ಬರುವ ವಿಹಾರಿಗಳ ಸಂಖ್ಯೆ ಕುಸಿದಿದೆ. 2 ವರ್ಷದ ಹಿಂದೆ ಏಕನಾಥೇಶ್ವರಿ ಗುಡಿ ಸಮೀಪ ಕರಡಿಯೂ ದರ್ಶನ ನೀಡಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

ADVERTISEMENT

ಇನ್ನೂ ಆತಂಕದ ವಿಷಯ ಎಂದರೆ ಕೋಟೆ ಆವರಣ ನಾಗರಹಾವುಗಳಿಗೆ ಪ್ರಸಿದ್ಧಿ ಪಡೆದಿದೆ. ಕೋಟೆಯ ಲಾಂಛನವೂ ಏಳು ಹೆಡಗಳ ಸರ್ಪವಾಗಿರುವುದು ಕಾಕತಾಳೀಯ. ಏಕನಾಥೇಶ್ವರಿ ಗುಡಿಯ ಅರ್ಚಕರೊಬ್ಬರಿಗೆ ಹಾವು ಕಚ್ಚಿದ ಉದಾಹರಣೆ ಇದೆ. 7 ತಿಂಗಳ ಹಿಂದೆ ಕೋಟೆ ಆವರಣದಲ್ಲಿ ಹೆಬ್ಬಾವು ಕೂಡ ಪತ್ತೆಯಾಗಿದೆ. ಪ್ರಾಣಿ, ವಿಷ ಜಂತುಗಳ ಭಯದಿಂದ ಸಂಜೆ 6 ಗಂಟೆಯಾಗುತ್ತಲೇ ಕೋಟೆ ಆವರಣ ಬಂದ್‌ ಆಗಿ ಕತ್ತಲಲ್ಲಿ ಮುಳುಗಿ ಹೋಗುತ್ತದೆ.

ಕೋಟೆಗೆ ಹೊನಲು ಬೆಳಕು:

2006ರಲ್ಲಿ ದುರ್ಗದ ಕೋಟೆಯ ಸ್ಮಾರಕಗಳಿಗೆ, ಬಂಡೆಗಳಿಗೆ ಹೊನಲು ಬೆಳಕಿನ ದೀಪ ಅಳವಡಿಸುವ ಯೋಜನೆ ಜಾರಿಗೊಳಿಸಲಾಗಿತ್ತು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಯೋಜನೆ ಜಾರಿಗೊಳಿಸಿದ್ದವು.

ಕೋಟೆಯ 3ನೇ ಸುತ್ತಿನಿಂದ (ಕೋಟೆಯ ಪ್ರವೇಶದ್ವಾರ) 6ನೇ ಸುತ್ತು ಕಸ್ತೂರಿ ರಂಗಪ್ಪನ ಬಾಗಿಲಿನ (ಟೀಕಿನ ಬಾಗಿಲು)ವರೆಗೆ ಎಎಸ್ಐ, ಟೀಕಿನ ಬಾಗಿಲಿನಿಂದ ಪಾಳೇಗಾರರ ಕಚೇರಿ ಸಂಕೀರ್ಣದವರೆಗೆ ಪ್ರವಾಸೋದ್ಯಮ ಇಲಾಖೆ ದೀಪ ಅಳವಡಿಸಿದ್ದವು.

ಹೆಬ್ಬಂಡೆ, ಸ್ಮಾರಕಗಳು ಬೆಳಕಿನ ಅಲೆಯ ಮೂಲಕ ಚಿತ್ರದುರ್ಗ ನಗರವಾಸಿಗಳಿಗೆ, ಹೊರವಲಯದ  ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವವರಿಗೆ ಆಕರ್ಷಕವಾಗಿ ಕಾಣಬೇಕು ಎಂಬ ಉದ್ದೇಶದಿಂದ ಪ್ರತಿಫಲನಾ ದೀಪ (ರಿಫ್ಲೆಕ್ಟರ್‌ ಲೈಟ್‌), ಫ್ಲಡ್‌ ಲೈಟ್‌ ಅಳವಡಿಸಲಾಗಿತ್ತು.

ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ದೀಪ ಬೆಳಗಿಸಲು ಉದ್ದೇಶಿಸಲಾಗಿತ್ತು. ಪ್ರವಾಸೋದ್ಯಮ ಇಲಾಖೆ ಜಾರಿಗೊಳಿಸಿದ ಯೋಜನೆಯನ್ನು ಎಎಸ್‌ಐ ನಿರ್ವಹಣೆ ಮಾಡಬೇಕು ಎಂಬ ಕರಾರು ಕೂಡ ಆಗಿತ್ತು.

ಕೋಟೆಯ ಆವರಣದಲ್ಲಿ ಇದ್ದ ಕಬ್ಬಿಣದ ವಿದ್ಯುತ್‌ ಕಂಬಗಳನ್ನು ಕತ್ತರಿಸಿ ನೆಲದಲ್ಲಿ ಕೇಬಲ್‌ ಅಳವಡಿಕೆ ಕಾರ್ಯವೂ ನಡೆಯಿತು. ಕೆಲವು ತಿಂಗಳವರೆಗೆ ಪ್ರಾಯೋಗಿಕವಾಗಿ ಬಣ್ಣದ ದೀಪಗಳ ಪ್ರದರ್ಶನ ಅದ್ಧೂರಿಯಿಂದಲೇ ಆರಂಭವಾಯಿತು. ಸ್ಥಳೀಯರು ಹಾಗೂ ಪ್ರವಾಸಿಗರ ಮನಸೂರೆಗೊಳ್ಳುವಲ್ಲಿ ಯಶಸ್ವಿಯೂ ಆಯಿತು.

ಆದರೆ ಪ್ರದರ್ಶನ ಆರಂಭವಾದ ಕೆಲವೇ ದಿನಗಳಲ್ಲಿ ವಿದ್ಯುತ್‌ ಸಮಸ್ಯೆ ಕಾಣಿಸಿಕೊಂಡಿತು. ಎಎಸ್‌ಐ ಪರ್ಯಾಯ ಮಾರ್ಗ ಕಂಡುಕೊಂಡು ಹೊಸ ಜನರೇಟರ್ ಖರೀದಿಸಿ ಬೆಳಕು ಮೂಡಿಸಿತು. ಆದರೆ ಅದು ಹೆಚ್ಚು ದಿನ ನಡೆಯಲಿಲ್ಲ. ಎಎಸ್‌ಐ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಸಮನ್ವಯದ ಕೊರತೆಯಿಂದಾಗಿ ಕೆಲವೇ ತಿಂಗಳುಗಳಲ್ಲಿ ಕೋಟೆ ಸ್ಮಾರಕಗಳನ್ನು ಬಣ್ಣಗೂಡಿಸುವ ಯೋಜನೆ ಬಂದ್‌ ಆಯಿತು ಎಂದು ಮೂಲಗಳು ತಿಳಿಸಿವೆ.

ಕೋಟೆ ಆವರಣದಲ್ಲಿ ದೀಪದ ಡಬ್ಬಿಗಳು ಈಗ ತುಕ್ಕು ಹಿಡಿಯುತ್ತಿವೆ. ಗಾಜು ಒಡೆದು ಹೋಗಿದ್ದು ಬಲ್ಬ್‌ಗಳು ಹಾಳಾಗಿವೆ. ಪ್ರತಿ ದೇವಾಲಯ, ಅಕ್ಕ–ತಂಗಿ ಹೊಂಡ, ಠಂಕಸಾಲೆ, ದೀಪಸ್ತಂಭ, ಉಯ್ಯಾಲೆ ಕಂಬ, ಮುರುಘಾ ಮಠ, ಸಂಪಿಗೆ ಸಿದ್ದೇಶ್ವರ ದೇವಾಲಯ ಮುಂತಾದ ಕಡೆಗಳಲ್ಲಿ ಹಾಕಲಾಗಿದ್ದ ಪ್ರತಿಫಲನ ದೀಪಗಳ ಹಸಿರು ಡಬ್ಬಿಗಳು ಈಗ ಮಣ್ಣಾಗುತ್ತಿವೆ.

ಈ ಕತೆಯ ನಂತರ ಕಳೆದೆರಡು ವರ್ಷಗಳಿಂದ ಕೋಟೆಯ ಆವರಣದಲ್ಲಿ ಬೀದಿ ದೀಪದ ವ್ಯವಸ್ಥೆಯೂ ಇಲ್ಲವಾಗಿದೆ. ಹೀಗಾಗಿ ಸಂಜೆ 6 ಗಂಟೆಯಾಗುತ್ತಲೇ ಕೋಟೆ ಕಗ್ಗತ್ತಲ ಕಾಡಾಗುತ್ತದೆ.

‘ಕಲ್ಲಿನಕೋಟೆ ಕಗ್ಗತ್ತಲಲ್ಲಿ ಮುಳುಗಿತಲೇ ಪರಾಕ್ ಎಂದು ಎಚ್ಚರಿಸುವವರು ಬೇಕಾಗಿದ್ದಾರೆ. ಸರ್ಕಾರ ಮಂಜೂರು ಮಾಡಿದ್ದ ಕೋಟ್ಯಂತರ ರೂಪಾಯಿ ಹಣವನ್ನು ಎರಡೂ ಇಲಾಖೆಗಳ ಅಧಿಕಾರಿಗಳು ನೀರಿನಲ್ಲಿ ಮುಳುಗಿಸಿದ್ದಾರೆ. ಆ ಮೂಲಕ ಇತಿಹಾಸಕ್ಕೆ ಅಪಚಾರ ಎಸಗಿದ್ದಾರೆ. ಪ್ರವಾಸಿಗರಿಗೆ ಅನ್ಯಾಯ ಮಾಡಿದ್ದಾರೆ’ ಎಂದು ಸಾಹಿತಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ಕೋಟೆಯೊಳಗಿನ ಕಾಶಿ ವಿಶ್ವನಾಥ ದೇವಾಲಯದ ಬೀದಿ‌ದೀಪ ಹಾಳಾಗಿರುವುದು
ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್ ಸಿ)ಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು ಅನುಮೋದನೆ ದೊರೆತರೆ ಧ್ವನಿ- ಬೆಳಕು ಕಾರ್ಯಕ್ರಮ ಆರಂಭವಾಗಲಿದೆ
ಶಶಿಕುಮಾರ್ ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ

ಧ್ವನಿಬೆಳಕು ಕಾರ್ಯಕ್ರಮ ಏನಾಯಿತು?

ಚಿತ್ರದುರ್ಗದ ಐತಿಹಾಸಿಕ ಪಂಪಂಪರೆಯ ಮೇಲೆ ಬೆಳಕು ಚೆಲ್ಲುವ ಧ್ವನಿ- ಬೆಳಕು ಕಾರ್ಯಕ್ರಮ ನನೆಗುದಿಗೆ ಹಲವು ವರ್ಷಗಳಾಗಿವೆ. ಕಲ್ಲು ಬಂಡೆಯ ಮೇಲೆ ಇತಿಹಾಸದ ದೃಶ್ಯಗಳು ಮೂಡುವ ರೀತಿಯಲ್ಲಿ ಯೋಜನೆ ರೂಪಿಸಲಾಗಿತ್ತು. ಚಿತ್ರರಂಗದ ಖ್ಯಾತ ನಿರ್ದೇಶಕರೊಬ್ಬರಿಗೆ ಈ ಜವಾಬ್ದಾರಿ ನೀಡಲಾಗಿತ್ತು. ಅದಕ್ಕಾಗಿ ಸಂಗೀತದ ರೆಕಾರ್ಡಿಂಗ್ ಕೂಡ ಮುಗಿದಿತ್ತು. ಆದರೆ ಟೆಂಡರ್‌ ವಿಚಾರದಲ್ಲಿ ಗೊಂದಲಗಳು ಉಂಟಾಗಿ ಧ್ವನಿ ಬೆಳಕಿನ ಕಾರ್ಯಕ್ರಮ ಸಾಕಾರಗೊಳ್ಳಲಿಲ್ಲ. ನಾರಾಯಣಸ್ವಾಮಿ ಅವರು ಸಂಸದಾಗಿದ್ದಾಗ ಧ್ವನಿ- ಬೆಳಕು ಕಾರ್ಯಕ್ರಮಕ್ಕೆ ಮತ್ತೆ ಚಾಲನೆ ದೊರಕಿತ್ತು. ದೆಹಲಿ ಮೂಲದ ಅಧಿಕಾರಿಗಳ ತಂಡ ಅಧ್ಯಯನ ನಡೆಸಿತ್ತು. ಅದು ಕೂಡ ಅರ್ಧಕ್ಕೆ ನಿಂತು ಹೋಯಿತು.

ದುರ್ಗೋತ್ಸವವೂ‌ ಮುಂದುವರಿಯಲಿಲ್ಲ

ಹಂಪಿ‌ ಉತ್ಸವದ ಮಾದರಿಯಲ್ಲೇ ಚಿತ್ರದುರ್ಗ ಸ್ಮಾರಕಗಳ  ಮಡಿಲಲ್ಲಿ ದುರ್ಗೋತ್ಸವ ಆಚರಿಸಬೇಕು ಎನ್ನುವ ಬೇಡಿಕೆ ಇನ್ನೂ ಈಡೇರಿಲ್ಲ. 2006 2015ರಲ್ಲಿ ಉತ್ಸವ ನಡೆಯಿತಾದರೂ ಅದು ಮುಂದುವರಿಯಲಿಲ್ಲ. ‘ಪ್ರತಿವರ್ಷ ನಿರಂತರವಾಗಿ ದುರ್ಗೋತ್ಸವ ಆಯೋಜಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಿದ್ದೇವೆ ಸಕಾರಾತ್ಮಕ ಸ್ಪಂದನೆಯೂ ಸಿಕ್ಕಿದೆ. ಆದಷ್ಟು ಬೇಗ ಜಿಲ್ಲಾಧಿಕಾರಿಗಳು ಉತ್ಸವದ ದಿನಂಕ ನಿಗದಿ ಮಾಡಬೇಕು’ ಎಂದು  ಮುಖಂಡ‌ ಗೋಪಾಲಸ್ವಾಮಿ ನಾಯಕ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.