ADVERTISEMENT

ಚಳ್ಳಕೆರೆ: ಲೆಕ್ಕಕ್ಕುಂಟು ಆಟಕ್ಕಿಲ್ಲ ಈ ಕ್ರೀಡಾಂಗಣ

ಅನುದಾನದ ಕೊರತೆ, ನಿರ್ವಹಣೆ ವೈಫಲ್ಯ, ತರಬೇತಿದಾರರೂ ಇಲ್ಲ

ಶಿವಗಂಗಾ ಚಿತ್ತಯ್ಯ
Published 27 ಜೂನ್ 2022, 5:17 IST
Last Updated 27 ಜೂನ್ 2022, 5:17 IST
ಲೆಕ್ಕಕ್ಕುಂಟು ಆಟಕ್ಕಿಲ್ಲ ಈ ಕ್ರೀಡಾಂಗಣ
ಲೆಕ್ಕಕ್ಕುಂಟು ಆಟಕ್ಕಿಲ್ಲ ಈ ಕ್ರೀಡಾಂಗಣ   

ಚಳ್ಳಕೆರೆ: ಇಲ್ಲಿನತಾಲ್ಲೂಕು ಕ್ರೀಡಾಂಗಣ ಸರ್ಕಾರದ ಅನುದಾನ ಮತ್ತು ಇಲಾಖೆ ಅಧಿಕಾರಿಗಳ ನಿರ್ವಹಣೆಯ ಕೊರತೆಯಿಂದ ನಲುಗುತ್ತಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಒಳಪಟ್ಟ ಈ ಕ್ರೀಡಾಂಗಣ ನಗರದ‌ಸೋಮಗುದ್ದು ರಸ್ತೆಯಲ್ಲಿದೆ. ಕೊಳಚೆಪ್ರದೇಶ ಮತ್ತು ಸ್ಮಶಾನದ ಬಳಿ ಇರುವುದರಿಂದ ಕ್ರೀಡಾಂಗಣದ ಸುತ್ತ ಮುಳ್ಳುಗಿಡಗಳು, ಆವರಣದಲ್ಲಿ ಗುಂಡಿಗಳು ಬಿದ್ದಿವೆ. ಕ್ರೀಡಾ ತರಬೇತಿ ನೀಡಲು ತರಬೇತಿದಾರರೂ ಇಲ್ಲ.

ಕೊಕ್ಕೊ, ಕಬಡ್ಡಿ, ಉದ್ದ ಜಿಗಿತ, ಬ್ಯಾಡ್ಮಿಂಟನ್, ಬ್ಯಾಸ್ಕೆಟ್ ಬಾಲ್‌, ವಾಲಿಬಾಲ್, ಫುಟ್‍ಬಾಲ್ ಕಿಕೆಟ್, ರನ್ನಿಂಗ್ ರೆಸ್ ಸೇರಿದ ನೂರಾರು ಕ್ರೀಡಾಪಟುಗಳು ತಾಲ್ಲೂಕಿನಲ್ಲಿದ್ದಾರೆ. ಕ್ರೀಡಾಚಟುವಟಿಕೆಗೆ ಪೂರಕವಾದ ವಾತಾವರಣ ಇಲ್ಲದ ಕಾರಣ ಕ್ರೀಡಾಂಗಣಕ್ಕೆ ಬರಲು ಕ್ರೀಡಾಪಟುಗಳು ಆಸಕ್ತಿ ತೋರುತ್ತಿಲ್ಲ. ಇದರಿಂದತಾಲ್ಲೂಕು ಕ್ರೀಡಾಂಗಣ ಲೆಕ್ಕಕ್ಕುಂಟು ಆಟಕ್ಕೆ ಇಲ್ಲ ಎನ್ನುವಂತಾಗಿದೆ.

ADVERTISEMENT

ಕೋಟ್ಯಂತರ ವೆಚ್ಚದಲ್ಲಿ ನಿರ್ಮಿಸಿದ್ದ ಕ್ರೀಡಾಂಗಣ, ಇದೀಗ ಕೇವಲ ಹೆಲಿಕಾಪ್ಟರ್‌ ನಿಲುಗಡೆಗೆ ಮಾತ್ರ ಸೀಮಿತವಾಗಿದೆ. ಕ್ರೀಡಾಂಗಣದ ಆವರಣದಲ್ಲಿ ನಿರ್ಮಿಸಿರುವ ನಾಲ್ಕು ಕಟ್ಟಡಗಳು ಖಾಲಿ ಇವೆ. 25-30 ಪ್ಲಾಸ್ಟಿಕ್ ಕುರ್ಚಿ ಇದ್ದು., ಕೊಠಡಿಯಲ್ಲಿ ಯಾವುದೇ ಕ್ರೀಡಾ ಪರಿಕರಗಳಿಲ್ಲ. ಓಟದ ಟ್ರ್ಯಾಕ್ ಇದ್ದರೂ ಅದು ಬಳಕೆಯಾಗುತ್ತಿಲ್ಲ. ರಸ್ತೆ ವಿಸ್ತರಣೆ ನೆಪದಲ್ಲಿ ಕ್ರೀಡಾಂಗಣದ ದ್ವಾರದಲ್ಲಿ ನೆಲಸಮಗೊಳಿಸಿದ್ದ ಕಾಂಪೌಂಡ್ ಕಾಮಗಾರಿ ಅಪೂರ್ಣಗೊಂಡಿದೆ. ಕೊಠಡಿಗೆ ಅಳವಡಿಸಿದ್ದ ಕಿಟಕಿ, ಬಾಗಿಲು ಮುರಿದು ಬಿದ್ದಿವೆ. ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ.

ಎಲ್ಲೆಲ್ಲೂ ಕಸ: ಸುತ್ತಲಿನ ಜನರುಕಸ ಕಡ್ಡಿ, ಹಳೆಪ್ಲಾಸ್ಟಿಕ್, ಪೇಪರ್ ಸೇರಿ ಘನ ತ್ಯಾಜ್ಯವನ್ನು ಕ್ರೀಡಾಂಗಣದ ಗೇಟ್‌ ಬಳಿ ಸುರಿಯುವ ಕಾರಣ ತ್ಯಾಜ್ಯ ರಾಶಿ ಬಿದ್ದಿದೆ. ಇದರಿಂದ ದುರ್ವಾಸನೆ ಹೆಚ್ಚಿದೆ. ವಾಲಿಬಾಲ್ ಕೋರ್ಟ್‌ ಬಳಿ ಬೆಳಕಿನ ವ್ಯವಸ್ಥೆಗೆ ಆರು ವಿದ್ಯುತ್ ಕಂಬಗಳು ನೆಟ್ಟು 7 ವರ್ಷಗಳಾಗಿದೆ. ಆದರೆ ವಿದ್ಯುತ್‌ ದೀಪ ಅಳವಡಿಸಿಲ್ಲ. ತಾತ್ಕಾಲಿಕವಾಗಿ ಒಬ್ಬ ಕಾವಲುಗಾರರನ್ನು ನೇಮಕ ಮಾಡಲಾಗಿದೆ. ಆದರೂ ಪ್ರಯೋಜನವಿಲ್ಲ. ಕ್ರೀಡಾಂಗಣದ ಮುಂಭಾಗ ಕಾಂಪೌಂಡ್ ಬದಲಿಗೆ ಕ್ರೀಡಾಚಟುವಟಿಕೆ ಕಾಣುವ ಹಾಗೆ ಕಬ್ಬಿಣದ ಗ್ರಿಲ್ ಅಳವಡಿಸಬೇಕು. ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಿ ಒಳಾಂಗಣದ ಕ್ರೀಡೆಗಳಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಕ್ರೀಡಾಪಟುಗಳ ಒತ್ತಾಯ.

ಕ್ರೀಡಾ ತರಬೇತುದಾರರು ಇಲ್ಲದ ಕಾರಣ ಕ್ರೀಡಾಪಟುಗಳು ಹೆಚ್ಚಿನ ಹಣ ನೀಡಿ ಖಾಸಗಿ ಕ್ರೀಡಾಕ್ಲಬ್‌ಗಳ ಮೊರೆ ಹೋಗಬೇಕಾಗಿದೆ.

ಖಾಲಿ ಇರುವ ಕಟ್ಟಡವನ್ನು ಅಂಗನವಾಡಿ ಕೇಂದ್ರ, ಇತರೇ ಇಲಾಖೆಗೆ ಬಾಡಿಗೆ ನೀಡಿದರೆ ಆದಾಯ ಬರುತ್ತದೆ. ಕ್ರೀಡಾಂಗಣದ ಆವರಣದ ಮರದ ಕೆಳಗೆ ಅಲ್ಲಲ್ಲಿ ಆಸನದ ವ್ಯವಸ್ಥೆ ಮಾಡಬೇಕು. ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು.ಪ್ರತಿ ತಾಲ್ಲೂಕಿನಲ್ಲಿ ಶಾಸಕರ ನೇತೃತ್ವದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಕ್ರೀಡಾಪಟುಗಳನ್ನು ಒಳಗೊಂಡ ಕ್ರೀಡಾಂಗಣ ಸಮಿತಿ ರಚಿಸಬೇಕು ಎಂದು ಒತ್ತಾಯಿಸುತ್ತಾರೆ ಕ್ರೀಡಾಪಟು ಎಚ್.ಪಿ. ರಾಘವೇಂದ್ರ.

ನಗರದಪಾವಗಡ ರಸ್ತೆ ಬಳಿಯ ಜಯಣ್ಣನಗರದಲ್ಲಿ 10 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಹೈಟೆಕ್‌ ಕ್ರೀಡಾಂಗಣವನ್ನು ಹೊರಾಂಗಣದ ಕ್ರೀಡೆಗೆ ಸೀಮಿತಗೊಳಿಸಿದರೆ ತಾಲ್ಲೂಕಿನ ಎರಡೂ ಕ್ರೀಡಾಂಗಣಗಳು ಸಮರ್ಪಕವಾಗಿ ಬಳಕೆಯಾಗುತ್ತವೆ ಎನ್ನುತ್ತಾರೆ ಅವರು.

* ಒಬ್ಬ ತರಬೇತಿದಾರರನ್ನು ನೇಮಕ ಮಾಡಬೇಕು. ಕ್ರೀಡಾಂಗಣದಲ್ಲಿ ರಾಜ್ಯ, ವಲಯ, ಜಿಲ್ಲಾ, ತಾಲ್ಲೂಕು ಹಾಗೂ ದಸರಾ ಕ್ರೀಡಾಕೂಟವನ್ನು ನಡೆಸಲು ಕ್ರಮ ಕೈಗೊಳ್ಳಬೇಕು.

ಎಚ್.ಪಿ. ರಾಘವೇಂದ್ರ,ಕ್ರೀಡಾಪಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.