ಹೊಸದುರ್ಗ: ತಾಲ್ಲೂಕಿನ ಕಬ್ಬಳ ಗ್ರಾಮದ ಸರ್ವೆ ನಂಬರ್ 19ರಲ್ಲಿ ಯಾವುದೇ ಕಾರಣಕ್ಕೂ ಕಲ್ಲು ಗಣಿಗಾರಿಕೆ ಮಾಡಲು ಅವಕಾಶ ನೀಡಬಾರದು ಎಂದು ಗುರುವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.
ಖಾಸಗಿ ಕ್ರಷರ್ ಮಾಲೀಕರ ಕ್ರಷರ್‌ನಲ್ಲಿ ವಾರ್ಷಿಕ 2,50,000 ಟನ್ ಉತ್ಪಾದನಾ ಸಾಮರ್ಥ್ಯದ ಕಟ್ಟಡ ಕಲ್ಲು (ಎಂ ಸ್ಯಾಂಡ್) ಹಾಗೂ 5,102 ಟನ್ ಅಂತರಸ್ಥಿತ ತ್ಯಾಜ್ಯ, 38,090 ಟನ್ ಮುರಂ ಗಣಿಗಾರಿಕೆ ಮಾಡುವ ಯೋಜನೆಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.
ರೈತರ ಜಮೀನುಗಳಿಗೆ ಹೊಂದಿಕೊಂಡಿರುವ ಜಾಗದಲ್ಲಿ ಕಲ್ಲುಗಣಿಗಾರಿಕೆ ಆರಂಭಿಸಲು ಅನುಮತಿ ನೀಡಿದರೆ ರೈತರು ಸರಣಿಯಾಗಿ ತಾಲ್ಲೂಕು ಕಛೇರಿಯ ಮುಂದೆ ನೇಣುಬಿಗಿದುಕೊಂಡು ಸಾಯುತ್ತೇವೆ. ಈ ಜಾಗದಲ್ಲಿ ಯಾವುದೇ ಕಾರಣಕ್ಕೂ ಕಲ್ಲುಗಣಿಗಾರಿಗೆ ಆರಂಭಿಸಲು ಬಿಡುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಉದ್ದೇಶಿತ ಗಣಿಗಾರಿಕೆ ಸ್ಥಳದಿಂದ ಕೇವಲ 500 ಮೀ. ದೂರದಲ್ಲಿ ಇತಿಹಾಸ ಪ್ರಸಿದ್ಧ ರಂಗನಾಥಸ್ವಾಮಿ ದೇಗುಲವಿದೆ. ಈ ಪ್ರದೇಶದಲ್ಲಿ ನೂರಾರು ಕೃಷ್ಣಮೃಗಗಳು ನವಿಲುಗಳು ಸೇರಿದಂತೆ ಇತರೆ ಪ್ರಾಣಿಗಳು ವಾಸವಾಗಿವೆ. ಈ ಸ್ಥಳಕ್ಕೆ ಹೊಂದಿಕೊಂಡಂತೆ ನೂರಾರು ರೈತರ ಜಮೀನು, ತೋಟಗಳಿದ್ದು, ಗಣಿಗಾರಿಕೆಯಿಂದ ಬರುವ ಧೂಳಿನಿಂದ ಬೆಳೆಗಳು ಹಾಳಾಗುತ್ತವೆ ಎಂದರು.
30-40 ವರ್ಷಗಳಿಂದ ಜಮೀನಿನಲ್ಲಿನ ಕಲ್ಲುಗಳನ್ನು ತೆಗೆದು, ಹದ ಮಾಡಿ, ಲಕ್ಷಾಂತರ ರೂಪಾಯಿ ಸಾಲ ಮಾಡಿ ಕೊಳವೆ ಬಾವಿ ಕೊರೆಸಿ, ಟಿಸಿ ಇಟ್ಟು ತೆಂಗಿನ ಸಸಿಗಳನ್ನು ನೆಟ್ಟಿದ್ದೇವೆ. ಇದರಿಂದ ನಮ್ಮ ಬದುಕು ಭವಿಷ್ಯದಲ್ಲಿ ಚೆನ್ನಾಗಿರುತ್ತದೆ ಎಂದು ಭಾವಿಸಿದ್ದೇವೆ. ಈಗ ಈ ಜಾಗದಲ್ಲಿ ಕಲ್ಲುಗಣಿಗಾರಿಕೆ ಆರಂಭಿಸಲು ಅವಕಾಶ ನೀಡಿದರೆ ನಮ್ಮೆಲ್ಲರ ಬದುಕು ಬೀದಿಗೆ ಬರುತ್ತದೆ ಎಂದರು. ಜಿಲ್ಲಾಧಿಕಾರಿಗಳು ಇಲ್ಲಿಯೇ ತಮ್ಮ ತೀರ್ಮಾನವನ್ನು ತಿಳಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಕೆ.ವೆಂಕಟೇಶ್ ಮಾತನಾಡಿ ‘ಇಲ್ಲಿ ಯಾವುದೇ ತೀರ್ಮಾನವನ್ನು ಮಾಡುವುದಿಲ್ಲ. ಸಾರ್ವಜನಿಕರು, ರೈತರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಎಲ್ಲರ ಅಹವಾಲುಗಳನ್ನು ವರದಿ ಮಾಡಿಕೊಳ್ಳಲಾಗಿದೆ. ಅದನ್ನು ಯಥಾವತ್ತಾಗಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಶೀಘ್ರದಲ್ಲಿಯೇ ಸರ್ಕಾರ ಈ ಕುರಿತು ಪ್ರಕಟಣೆ ಹೊರಡಿಸಲಿದೆ’ ಎಂದು ಹೇಳಿದರು.
‘ನಾವು 40 ವರ್ಷಗಳಿಂದ ತೋಟ ಮಾಡುತ್ತಿದ್ದೇವೆ. ಇಲ್ಲಿ ಭೂಮಿಯನ್ನು ನಂಬಿಕೊಂಡು ಸುತ್ತಮುತ್ತ 5 ಸಾವಿರ ಜನ ಇದ್ದಾರೆ ಕಂಪನಿಯವರು ಇವರನ್ನು ಸಾಕುತ್ತಾರೆಯೇ’ ಎಂದು ಕಬ್ಬಳ ಗ್ರಾಮದ ರೇಣುಕಮ್ಮ ಪ್ರಶ್ನಿಸಿದರು.
ಹಿರಿಯ ಪರಿಸರ ಅಧಿಕಾರಿ ದಾವಣಗೆರೆ ವಲಯ ರಮೇಶ್ ಡಿ ನಾಯಕ್, ತಹಶೀಲ್ದಾರ್ ತಿರುಪತಿ ಪಾಟೀಲ್, ಕಬ್ಬಳ, ಬೊಮ್ಮೇನಹಳ್ಳಿ, ಮಲ್ಲೇನಹಳ್ಳಿ, ಹೊಸಹಟ್ಟಿ, ತುಂಬಿನಕೆರೆ, ತುಂಬಿನಕೆರೆ ಭೋವಿಹಟ್ಟಿ, ತೊಣಚೇನಹಳ್ಳಿ ಗ್ರಾಮಗಳ ನೂರಾರು ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.