
ಹೊಸದುರ್ಗ: ಪುರಸಭೆ ವತಿಯಿಂದ ಪಟ್ಟಣದ ಬೀದಿ ನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡುವ ಕಾರ್ಯ ಸೋಮವಾರದಿಂದ ಆರಂಭವಾಗಿದೆ.
ಪಟ್ಟಣದ ಪಶು ಆಸ್ಪತ್ರೆ ಪಶುಪತಿ ಪೆಟ್ ಲೈಫ್ ಬೀದಿನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ಕೇಂದ್ರ ತೆರೆಯಲಾಗಿದೆ. ಶಸ್ತ್ರ ಚಿಕಿತ್ಸೆ ನಂತರ ಮಾಲೀಕರಿಗೆ ನಾಯಿಗಳನ್ನು ಒಪ್ಪಿಸಲಾಗುವುದು ಅಥವಾ ಪುರಸಭೆಯಿಂದಲೇ ನಾಯಿಗಳನ್ನು ಆರೈಕೆ ಮಾಡಲಾಗುವುದು.
ವಿವಿಧ ಸಂಸ್ಥೆಗಳ ಆವರಣ, ಕ್ರೀಡಾಂಗಣ, ಶಿಕ್ಷಣ ಸಂಸ್ಥೆಗಳ ಆವರಣ, ಆಸ್ಪತ್ರೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಕ್ಕಳು ಹಾಗೂ ವೃದ್ಧರ ಮೇಲೆ ದಾಳಿ ಮಾಡಿ, ಗಾಯಗೊಳಿಸುತ್ತಿರುವ ಘಟನೆ ಹೆಚ್ಚಾಗಿರುವ ಕಾರಣ ಈ ಕಾರ್ಯ ನಡೆಯುತ್ತಿದೆ.
ಇಲ್ಲಿಯವರೆಗೂ 45 ಬೀದಿ ನಾಯಿಗಳನ್ನು ಸೆರೆ ಹಿಡಿಯಲಾಗಿದೆ. ಅದರಲ್ಲಿ 10 ಬೀದಿ ನಾಯಿಗಳಿಗೆ ಈಗಾಗಲೇ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಹೆಣ್ಣು ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲು ಪ್ರತ್ಯೇಕ ವೈದ್ಯರಿದ್ದಾರೆ.
ತರಬೇತಿ ಕೊರತೆ:
‘ಬೀದಿನಾಯಿಗಳನ್ನು ಹಿಡಿಯುವ ಜವಾಬ್ದಾರಿಯನ್ನು ಪೌರ ಕಾರ್ಮಿಕರು ಹಾಗೂ ಪುರಸಭೆಯ ಸಿಬ್ಬಂದಿಗೆ ವಹಿಸಲಾಗಿದೆ. ಆದರೆ, ಅವರಿಗೆ ಸೂಕ್ತ ತರಬೇತಿ ನೀಡಿಲ್ಲ. ಹಾಗಾಗಿ ಬೀದಿ ನಾಯಿ ಹಿಡಿಯುಲು ತಮಿಳುನಾಡಿನಿಂದ 4 ಜನರನ್ನು ಕರೆಯಿಸಲಾಗಿದೆ. ಒಂದು ನಾಯಿ ಹಿಡಿಯಲು ಅವರಿಗೆ ₹ 250 ನೀಡಬೇಕು. ಸರ್ಕಾರದಿಂದ ಒಂದು ನಾಯಿಗೆ ಶಸ್ತ್ರಚಿಕಿತ್ಸೆಗಾಗಿ ₹1,450 ಮಾತ್ರ ನೀಡುತ್ತದೆ. ನಾಯಿ ಹಿಡಿದು ಸಾಗಿಸಲು ವಾಹನಗಳ ಸೌಲಭ್ಯವಿಲ್ಲದ ಕಾರಣ ಪುರಸಭೆ ಕಸ ಸಾಗಿಸುವ ವಾಹನಗಳಲ್ಲಿ ಸಾಗಿಸಲಾಗುತ್ತಿದೆ. ನಾಯಿ ಹಿಡಿಯುವವರಿಗೆ ನಿತ್ಯ ಕೂಲಿ, ವೈದ್ಯರಿಗೂ ಸಂಭಾವನೆ ನೀಡಬೇಕು. ಎನ್.ಜಿ.ಒ ಕೇಂದ್ರಗಳು ನಿರ್ವಹಣೆಗೆ ಮುಂದೆ ಬಂದರೆ, ಅವರಿಗೆ ವಹಿಸುತ್ತೇವೆ’ ಎಂದು ಪರಿಸರ ಎಂಜಿನಿಯರ್ ರವೀಂದ್ರನಾಥ ಅಂಗಡಿ ತಿಳಿಸಿದರು.
ಈ ವೇಳೆ ಪುರಸಭೆ ಆರೋಗ್ಯ ನಿರೀಕ್ಷಕರಾದ ಬಸವರಾಜ್, ಪ್ರವೀಣ್ ಹಾಗೂ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.