ADVERTISEMENT

ಚಳ್ಳಕೆರೆ: ಪ್ರತಿಭಟನೆಗೆ ಸ್ಥಳ ನಿಗದಿಗೆ ಭಾರಿ ವಿರೋಧ

ಸ್ವಾತಂತ್ರ್ಯ ಉದ್ಯಾನವನದ ಮಾದರಿಯಲ್ಲಿ ಪ್ರತಿಭಟನೆಗೆ ಸ್ಥಳ ಮೀಸಲು: ವಿವಿಧ ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 9:03 IST
Last Updated 30 ಡಿಸೆಂಬರ್ 2025, 9:03 IST
ಚಳ್ಳಕೆರೆಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು
ಚಳ್ಳಕೆರೆಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು    

ಚಳ್ಳಕೆರೆ: ಇಲ್ಲಿನ ಬಳ್ಳಾರಿ ರಸ್ತೆಯ ಬಳಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದ ಮಾದರಿಯಲ್ಲಿ ಪ್ರತಿಭಟನೆಗೆ ಪ್ರತ್ಯೇಕ ಜಾಗ ಮೀಸಲಿರಿಸಿರುವುದನ್ನು ರೈತ ಸಂಘ, ಸಿಐಟಿಯುಸಿ, ಕೆಆರ್‌ಎಸ್ ಪಕ್ಷ ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ವಿರೋಧಿಸಿವೆ.

ವಿವಿಧ ಸಂಘಟನೆಗಳ ಕಾರ್ಯಕರ್ತರು ಸೋಮವಾರ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿದರು. ನಂತರ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

‘ಸಾರ್ವಜನಿಕರಿಗೆ ತೊಂದರೆಯಾಗಲಿದೆ  ಎಂಬ ನೆಪವೊಡ್ಡಿ ನಗರದ ಹೊರವಲಯದಲ್ಲಿ ಪ್ರತಿಭಟನೆಗೆ ಪ್ರತ್ಯೇಕ ಸ್ಥಳ ಮೀಸಲಿರಿಸಿರುವುದು ಸರಿಯಲ್ಲ. ಈ ಮೂಲಕ ವಿವಿಧ ಸಂಘ-ಸಂಸ್ಥೆಗಳ ಜನಪರ ಹೋರಾಟಗಳನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ’ ಎಂದು ರೈತ ಸಂಘ, ಹಸಿರುಸೇನೆಯ ರಾಜ್ಯ ಘಟಕದ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಅವರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಆಡಳಿತ ವ್ಯವಸ್ಥೆಯ ತಪ್ಪುಗಳನ್ನು ಮರೆಮಾಚಲು ನಿರ್ಜನ ಪ್ರದೇಶದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳುತ್ತಿರುವುದು ಖಂಡನೀಯ. ಪ್ರತಿಭಟನೆ ನಡೆಸಲು ಪ್ರತ್ಯೇಕ ಜಾಗದ ನಿರ್ಧಾರ ತೆಗೆದುಕೊಂಡಿರುವುದು ಏಕಪಕ್ಷಿಯ ಮತ್ತು ಸರ್ವಾಧಿಕಾರಿ ಧೋರಣೆಯಾಗಿದೆ. ಹೀಗಾಗಿ ಹೋರಾಟದ ಜಾಗದ ವಿಚಾರವನ್ನು ಕೂಡಲೆ ಕೈಬಿಡಬೇಕು ಎಂದು ಕನ್ನಡ ಸಂಘಟನೆ ಮುಖಂಡ ಕೆ.ಮುರಳಿ ಆಗ್ರಹಿಸಿದರು.

ಕೆಆರ್‌ಎಸ್ ಪಕ್ಷದ ಮುಖಂಡ ನಗರಂಗೆರೆ ಮಹೇಶ್ ಮಾತನಾಡಿ, ‘ನಗರದಿಂದ 2-3 ಕಿ.ಮೀ. ದೂರದಲ್ಲಿ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿದರೆ ಯಾವ ಅಧಿಕಾರಿಗಳೂ ಅತ್ತ ತಿರುಗಿ ನೋಡುವುದಿಲ್ಲ’ ಎಂದರು.

ಪ್ರತಿಭಟನಾ ಜಾಗದ ವಿಚಾರವಾಗಿ ಪ್ರತಿಭಟನಕಾರರು ಮತ್ತು ಅಧಿಕಾರಿಗಳ ನಡುವೆ ಅರ್ಧಗಂಟೆ ಮಾತಿನ ಚಕಮಕಿ ನಡೆಯಿತು. ಮನವಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ತಹಶೀಲ್ದಾರ್ ರೇಹಾನ್‍ಪಾಷ ಪ್ರತಿಭಟನಕಾರರಿಗೆ ಭರವಸೆ ನೀಡಿದರು.

ಕಾರ್ಮಿಕ ಸಂಘಟನೆ ಮುಖಂಡ ಟಿ.ತಿಪ್ಪೇಸ್ವಾಮಿ, ಚನ್ನಕೇಶವಮೂರ್ತಿ, ಪಾಲಣ್ಣ, ಗೋವಿಂದಪ್ಪ, ಕೃಷ್ಣೆಗೌಡ, ಜಗದೀಶಪ್ಪ, ರಾಜಣ್ಣ, ತಿಪ್ಪೇಸ್ವಾಮಿ, ರಂಗಸ್ವಾಮಿ, ನಾಗರಾಜ, ಸಂತೋಷ್, ರಮೇಶ್, ಮಂಜುನಾಥ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.