ಚಿತ್ರದುರ್ಗ: ‘ವಿದ್ಯಾರ್ಥಿ ಜೀವನದ ಪ್ರತಿ ಕ್ಷಣವೂ ಅಮೂಲ್ಯ. ಶಿಕ್ಷಕರ, ಹಿರಿಯರ ಮಾತು ಪಾಲಿಸಿ ಭವಿಷ್ಯ ಉಜ್ವಲಗೊಳಿಸಿಕೊಳ್ಳಿ’ ಎಂದು ಯುವ ಆರ್ಥಿಕ ಚಿಂತಕ ಡಿ.ಬಸವರಾಜ್ ತಿಳಿಸಿದರು.
ಇಲ್ಲಿನ ಸ್ವಾಮಿ ವಿವೇಕಾನಂದ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ಬಿ.ದೇವರಾಜ ಕ್ರೀಡಾ ಸಾಂಸ್ಕೃತಿಕ ಟ್ರಸ್ಟ್, ರಂಗ ಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಪಠ್ಯಾಧಾರಿತ ಸಾಂಸ್ಕೃತಿಕ ಓದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‘ಸತತ ಹಾಗೂ ಪ್ರಾಮಾಣಿಕ ಪ್ರಯತ್ನದಿಂದ ಯಶಸ್ಸು ಸಾಧ್ಯ’ ಎಂದರು.
‘ಗುರುಗಳು, ತಂದೆ ತಾಯಿಯ ಮಾರ್ಗದರ್ಶನ ಭವಿಷ್ಯಕ್ಕೆ ಉತ್ತಮ ಅಡಿಪಾಯ. ಅವರು ಪಾಲಿಸಿಕೊಂಡು ಬಂದ ಆಚಾರ ವಿಚಾರಗಳನ್ನು ನಾವು ಎಂದಿಗೂ ಮರೆಯಬಾರದು’ ಎಂದು ತಿಳಿಸಿದರು.
‘ಯುವಕರು ಬಹುತೇಕ ಸರ್ಕಾರಿ ಶಾಲೆಗಳಿಂದ ಬಂದವರೇ ಆಗಿದ್ದಾರೆ. ಅವರು ಎಂತಹುದೇ ಸ್ಥಾನದಲ್ಲಿದ್ದರೂ ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯ ಒದಗಿಸುವತ್ತ ಗಮನಹರಿಸಬೇಕು. ಈ ಮೂಲಕ ಜ್ಞಾನದ ಜ್ಯೋತಿ ಬೆಳಗುತ್ತಿರುವ ಶಾಲೆಗಳ ಉಳಿಸುವ ಕಾರ್ಯ ಮಾಡೋಣ’ ಎಂದು ಹೇಳಿದರು.
‘ಇಂದಿಗೂ ಶಾಲೆಗಳಲ್ಲಿ ಕುಡಿಯುವ ನೀರು, ಪಾಠ ಮತ್ತು ಪೀಠೋಪಕರಣಗಳ ಅವಶ್ಯಕತೆಯಿದೆ. ನಾನು ಸರ್ಕಾರಿ ಶಾಲೆಯಲ್ಲಿ ಕಲಿತಿರುವ ಕಾರಣ ನಮ್ಮ ತಂದೆ ಬಿ.ದೇವರಾಜ ಅವರ ಹೆಸರಿನಲ್ಲಿ ಶಾಲೆಗಳಿಗೆ ಕೈಲಾದ ನೆರವು ನೀಡುವ ಕೆಲಸ ಮಾಡುತ್ತಿದ್ದೇನೆ. ಇದಕ್ಕೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡಬೇಕು’ ಎಂದರು.
‘ಕನ್ನಡನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತನ್ನು ಮಕ್ಕಳಿಗೆ ತಿಳಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಬಿ.ದೇವರಾಜ ಅವರ ಪುತ್ರ ಉತ್ತಮ ಕಾರ್ಯಕ್ಕೆ ಮುಂದಾಗಿದ್ದಾರೆ. ಇದು ಶಾಶ್ವತವಾಗಿ ಉಳಿಯುತ್ತದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್ ತಿಳಿಸಿದರು.
‘ನಗರದ ಬಹುತೇಕ ರಸ್ತೆಗಳಿಗೆ ಗಣ್ಯವ್ಯಕ್ತಿಗಳ ಹೆಸರಿಟ್ಟಿದ್ದಾರೆ. ಅವರ ಆದರ್ಶ ಮತ್ತು ಆಶೋತ್ತರಗಳನ್ನು ದೇಶ ಕಟ್ಟುವ ಭವಿಷ್ಯದ ಪೀಳಿಗೆಗೆ ಪಠ್ಯದ ಜೊತೆಗೆ ಪರಿಚಯಿಸಿದರೆ ಉತ್ತಮ’ ಎಂದು ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಅಭಿಪ್ರಾಯಪಟ್ಟರು.
ಮುಖ್ಯ ಶಿಕ್ಷಕ ಟಿ.ಷಣ್ಮುಖಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷೆ ಬಿ.ವಿಮಲಾಕ್ಷಿ, ಆಯುರ್ವೇದ ತಜ್ಞ ಡಾ.ಕೆ.ಲಿಂಗದೊರೆ, ಜಿಎಂ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ವರುಣ್, ಉದ್ಯಮಿ ಜಿ.ಎಂ.ಮಂಜುನಾಥ್, ಯೋಗ ಚಿಕಿತ್ಸಕ ಎಂ.ಬಿ.ಮುರುಳಿ, ಸಹಶಿಕ್ಷಕರಾದ ಪಿ.ಬಿ.ಅನುಸೂಯ, ಟಿ.ಎನ್.ಶೋಭ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.