ADVERTISEMENT

ಕೂಡಿಟ್ಟ ಹಣದಲ್ಲಿ ಬಡ ಮಕ್ಕಳಿಗೆ ಕಲಿಕಾ ಸಾಮಗ್ರಿ ನೀಡಿದ ವಿದ್ಯಾರ್ಥಿನಿ ಸಮೃದ್ಧ

ಎನ್. ದೇವರಹಳ್ಳಿ: 250 ಮಕ್ಕಳಿಗೆ ನೆರವು ನೀಡಿದ ಬೆಂಗಳೂರಿನ ವಿದ್ಯಾರ್ಥಿನಿ ಸಮೃದ್ಧ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 19:45 IST
Last Updated 8 ಜುಲೈ 2019, 19:45 IST
ನಾಯಕನಹಟ್ಟಿ ಹೋಬಳಿಯ ಎನ್.ದೇವರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸೋಮವಾರ ಬೆಂಗಳೂರಿನ ಟಿ.ರಾಮಯ್ಯ ಉಚಿತವಾಗಿ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿದರು.
ನಾಯಕನಹಟ್ಟಿ ಹೋಬಳಿಯ ಎನ್.ದೇವರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸೋಮವಾರ ಬೆಂಗಳೂರಿನ ಟಿ.ರಾಮಯ್ಯ ಉಚಿತವಾಗಿ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿದರು.   

ನಾಯಕನಹಟ್ಟಿ: ತಂದೆ-ತಾಯಿ ಕೊಡುತ್ತಿದ್ದ ಪಾಕೆಟ್ ಮನಿಯನ್ನು ಕೂಡಿಟ್ಟು ಸರ್ಕಾರಿ ಕನ್ನಡ ಶಾಲೆಯ ಮಕ್ಕಳಿಗೆ ಕಲಿಕಾ ಸಮಾಗ್ರಿಗಳನ್ನು ಕೊಡುಗೆ ನೀಡಿದ ಬಾಲಕಿ ಯು. ಸಮೃದ್ಧಿಯ ಕಾರ್ಯ ಶ್ಲಾಘನೀಯ ಎಂದು ಎನ್. ದೇವರಹಳ್ಳಿ ಸರ್ಕಾರಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ಲೋಕೇಶ್ ಹೇಳಿದರು.

ಹೋಬಳಿಯ ಎನ್. ದೇವರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಬೆಂಗಳೂರಿನ ನಿವಾಸಿ ಟಿ. ರಾಮಯ್ಯ ಮಕ್ಕಳಿಗೆ ಉಚಿತ ಕಲಿಕಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಬಡ ಕುಟುಂಬದಿಂದ ಬಂದಿದ್ದರಿಂದ ಕಲಿಕಾ ಸಾಮಾಗ್ರಿಗಳ ಕೊರತೆ ಇತ್ತು. ಇಲ್ಲಿನ ಜೋಗಿ ಜನಾಂಗದ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯಬಾರದು, ಅವರಿಗೆ ಅಗತ್ಯ ಕಲಿಕಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಈಚೆಗೆ ಗ್ರಾಮದ ಯುವಕರು ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಯ ಮಕ್ಕಳ ಸ್ಥಿತಿಗತಿಯ ಬಗ್ಗೆ ವಿಡಿಯೊ ಮಾಡಿ ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೊವನ್ನು ಬೆಂಗಳೂರಿನ 6ನೇ ತರಗತಿ ವಿದ್ಯಾರ್ಥಿನಿ ಯು. ಸಮೃದ್ಧಿ ವೀಕ್ಷಿಸಿ ಪೋಷಕರಿಗೆ ವಿಷಯ ತಿಳಿಸಿದ್ದಳು. ತಾನು ಕೂಡಿಟ್ಟದ್ದ ₹ 10 ಸಾವಿರಕ್ಕೂ ಹೆಚ್ಚು ಹಣವನ್ನು ಅಜ್ಜನಿಗೆ ಕೊಟ್ಟು ಕಳುಹಿಸಿದ್ದಾಳೆ. ಅವರು ಅಂಗನವಾಡಿ, ಶಾಲಾ ಮಕ್ಕಳಿಗೆ ಕಲಿಕಾ ಸಮಾಗ್ರಿಗಳನ್ನು ನೀಡಿ ಸಮಾಜಿಕ ಕಾಳಜಿ ಮೆರೆದಿದ್ದಾರೆ ಎಂದು ಶ್ಲಾಘಿಸಿದರು.

ADVERTISEMENT

ದಾನಿಗಳು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿ: ‘ಈಚೆಗೆ ಮೊಮ್ಮಗಳು ವಾಟ್ಸಾಪ್‌ ಮೂಲಕ ಎನ್.ದೇವರಹಳ್ಳಿ ಗ್ರಾಮದ ಶಾಲಾ ಮಕ್ಕಳ ಸ್ಥಿತಿಗತಿಯನ್ನು ವೀಕ್ಷಿಸಿದ್ದಳು. ಈ ಮಕ್ಕಳು ತನ್ನಂತೆಯೇ ಕಲಿಕೆಯಲ್ಲಿ ತೊಡಗಬೇಕು ಎಂದು ಹಂಬಲ ವ್ಯಕ್ತಪಡಿಸಿ, ತಾನು ಕೂಡಿಟ್ಟಿದ್ದ ಹಣನೀಡಿ ಕಲಿಕಾ ಸಾಮಾಗ್ರಿಗಳನ್ನು ಕೊಂಡು ನನಗೆ ನೀಡಿದಳು. ಸುಮಾರು 250 ಮಕ್ಕಳಿಗೆ ಕಲಿಕಾ ಸಾಮಗ್ರಿ ನೀಡಿದ್ದೇನೆ. ದಾನಿಗಳು ಸರ್ಕಾರಿ ಶಾಲೆ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕು’ ಎಂದುಬೆಂಗಳೂರಿನ ನಿವಾಸಿ ಟಿ.ರಾಮಯ್ಯ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಎಚ್. ನಾಗರಾಜ್, ವಸಂತಪ್ಪ, ಬಸವರಾಜ್, ರಾಜಣ್ಣ, ಕೆ.ಟಿ. ಚಂದ್ರಣ್ಣ, ತಿಪ್ಪೇಸ್ವಾಮಿ, ಕವಿತಮ್ಮ, ಮುಖ್ಯಶಿಕ್ಷಕ ಸಿ.ಬಿ. ಮಂಜುನಾಥ, ಶರಣಪ್ಪ, ಶ್ರೀನಿವಾಸ್, ಅರುಣ್‌ ಕುಮಾರ್, ಕಾಂತಪ್ಪನಾಯ್ಕ್, ಸುರೇಶ್, ಚಂದ್ರಣ್ಣ ಇದ್ದರು.

‘ನನ್ನ ಹಾಗೆ ಅವರೂ ಉತ್ತಮವಾಗಿ ಕಲಿಯಬೇಕು’

‘ನಗರದಲ್ಲಿನ ಮಕ್ಕಳ ಕಲಿಕೆಗೆ ಇರುವ ಸೌಲಭ್ಯಗಳು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇರುವುದಿಲ್ಲ ಎನ್ನುವುದನ್ನು ಅಮ್ಮ ಸವಿತಾ ಆಗಾಗ ಹೇಳುತ್ತಿದ್ದರು. ಈಚೆಗೆ ವಾಟ್ಸಾಪ್‌ನಲ್ಲಿ ವಿಡಿಯೋ ನೋಡಿದಾಗ ಬೇಜಾರಾಯಿತು. ನನ್ನ ಹಾಗೆ ಅವರೂ ಅಗತ್ಯ ಸೌಲಭ್ಯಗಳೊಂದಿಗೆ ಉತ್ತಮವಾಗಿ ಕಲಿಯಬೇಕು ಎಂದು ಅಪ್ಪ, ಅಮ್ಮ, ಚಿಕ್ಕಪ್ಪ ನೀಡಿದ್ದ ಹಣವನ್ನು ನೀಡಿದ್ದೇನೆ. ಇದರಿಂದ ಖುಷಿಯಾಗಿದೆ. ಮುಂದೆಯು ಹೀಗೆ ನೀಡುತ್ತೇನೆ ಎನ್ನುತ್ತಾಳೆ’ ಬೆಂಗಳೂರಿನ 6ನೇ ತರಗತಿ ಯು.ಸಮೃದ್ಧಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.