ADVERTISEMENT

ಸಿರಿಗೆರೆ| ದುಷ್ಟರನ್ನು ದೂರವಿಟ್ಟು ಮಾತುಕತೆಗೆ ಬನ್ನಿ: ತರಳಬಾಳು ಮಠದ ಕಾರ್ಯದರ್ಶಿ

ಸಿರಿಗೆರೆ – ಸಾಣೇಹಳ್ಳಿ ಮಠಗಳ ವಿವಾದಕ್ಕೆ ತೆರೆ ಎಳೆಯುವ ಯತ್ನ?

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 6:33 IST
Last Updated 20 ಅಕ್ಟೋಬರ್ 2025, 6:33 IST
ತರಳಬಾಳು ಶ್ರೀ ಹಾಗೂ ಪಂಡಿತಾರಾಧ್ಯ ಶ್ರೀ
ತರಳಬಾಳು ಶ್ರೀ ಹಾಗೂ ಪಂಡಿತಾರಾಧ್ಯ ಶ್ರೀ   

ಸಿರಿಗೆರೆ: ಸಿರಿಗೆರೆ ಮತ್ತು ಸಾಣೇಹಳ್ಳಿ ಮಠದ ಸ್ವಾಮೀಜಿಗಳ ಮಧ್ಯೆ ಉಂಟಾಗಿರುವ ಬಿಕ್ಕಟ್ಟು ಬಗೆಹರಿದು ಸಾಮರಸ್ಯ ಮೂಡುವ ಆಶಾಭಾವ ಮೂಡಿದಂತಿದೆ. 

‘ಹಾಲು –ಜೇನಿನಂತಹ ಸಂಬಂಧಕ್ಕೆ ಹುಳಿ ಹಿಂಡಿದ ದುಷ್ಟರನ್ನು ದೂರ ಇಟ್ಟು ತಾವೊಬ್ಬರೇ ಭೇಟಿಯಾಗಲು ಬರುವುದಾದರೆ ಅವಕಾಶ ಕಲ್ಪಿಸಲಾಗುವುದು’ ಎಂದು ತರಳಬಾಳು ಮಠದ ಕಾರ್ಯದರ್ಶಿ, ಸಾಣೇಹಳ್ಳಿ ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳಿಗೆ ಪತ್ರ ಬರೆದಿದ್ದಾರೆ. ತಾವು ಚರ್ಚಿಸಲು ಬಯಸಿರುವ ವಿಷಯಗಳ ಪಟ್ಟಿಯನ್ನು ಲಿಖಿತವಾಗಿ ಶ್ರೀಗಳಿಗೆ ನೀಡುವಂತೆಯೂ ಅದರಲ್ಲಿ ತಿಳಿಸಲಾಗಿದೆ.  

ಸಾಣೇಹಳ್ಳಿಯಲ್ಲಿ ನಡೆಯುವ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭಕ್ಕೆ ತರಳಬಾಳು ಶ್ರೀಗಳನ್ನು ಆಹ್ವಾನಿಸಲು ಸಿರಿಗೆರೆಗೆ ಬಂದು ವಾಸ್ತವ್ಯ ಮಾಡಿದ್ದ ಪಂಡಿತಾರಾಧ್ಯ ಶ್ರೀಗಳು, ಶಿವಮೂರ್ತಿ ಶಿವಾಚಾರ್ಯರ ಭೇಟಿ ಸಾಧ್ಯವಾಗದೇ ಇದ್ದುದರಿಂದ ನಾಟಕೋತ್ಸವಕ್ಕೆ ಆಮಂತ್ರಿಸುವ ತಮ್ಮ ಕೈ ಬರಹದ ಪತ್ರವನ್ನು ತರಳಬಾಳು ಶ್ರೀಗಳಿಗೆ ತಲುಪಿಸುವಂತೆ ಮಠದ ಆಡಳಿತ ವರ್ಗಕ್ಕೆ ನೀಡಿ ಹಿಂದಿರುಗಿದ್ದರು. 

ADVERTISEMENT

ತರಳಬಾಳು ಮಠದ ಕಾರ್ಯದರ್ಶಿಯು ಭಕ್ತರ ಮಾಹಿತಿಗಾಗಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳಿಗೆ ತಾವು ಬರೆದಿರುವ ಪತ್ರವನ್ನು ಮಠದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾರೆ. ಸಾಣೇಹಳ್ಳಿ ಶ್ರೀಗಳು ಸಿರಿಗೆರೆಗೆ ಬಂದು ವಾಸ್ತವ್ಯ ಮಾಡಿದ ನಂತರ, ಇದೇ ವಿಚಾರದ ಕುರಿತು ಮಠದ ಕಾರ್ಯದರ್ಶಿ ಅ. 15 ರಂದು ಸಾಧು ಸದ್ಧರ್ಮ ಸಂಘದ ಅಧ್ಯಕ್ಷರಿಗೆ ಪತ್ರ ಬರೆದು ಪಂಡಿತಾರಾಧ್ಯ ಶ್ರೀಗಳ ಹಲವು ನಿಲುವುಗಳಿಂದ ಮಠದ ಮೇಲೆ ಬೀರುತ್ತಿರುವ ಪರಿಣಾಮಗಳ ಬಗ್ಗೆ ವಿವರಿಸಿದ್ದರು. 

ಸಚಿವ ಎಸ್.‌ಎಸ್.‌ ಮಲ್ಲಿಕಾರ್ಜುನ್‌ ಅವರ ಮೂಲಕ ನಾಟಕೋತ್ಸವಕ್ಕೆ ಆಹ್ವಾನಿಸಲು ನಡೆಸಿದ ಯತ್ನ, ಶ್ರೀಗಳ ಇತ್ತೀಚಿನ ವಿದೇಶ ಪ್ರವಾಸ, ಕೃಷಿಕರ ಕುರಿತು ಶ್ರೀಗಳ ನಿಲುವಿಗೆ ಪ್ರತಿರೋಧ ತೋರಿದ ಘಟನೆ, ಬೆಂಗಳೂರಿನ ಕಾರ್ಯಕ್ರಮಗಳ ವಿಸ್ತೃತ ಮಾಹಿತಿಯನ್ನು ಪತ್ರದಲ್ಲಿ ಹಂಚಿಕೊಳ್ಳಲಾಗಿದೆ. 

‘ನಮ್ಮ ತಪ್ಪುಗಳು ಏನೇ ಇದ್ದರೂ ತಿಳಿ ಹೇಳುವ ನೈತಿಕತೆ ನಮ್ಮ ಗುರುಗಳಿಗೆ ಇದೆ. ಆ ತಪ್ಪುಗಳನ್ನು ತಿದ್ದಿಕೊಳ್ಳುವಂತಹ ಮನಃಸ್ಥಿತಿಯೂ ನಮಗೆ ಇದೆ’ ಎಂದು ಹೇಳುವ ತಾವು ಅವುಗಳನ್ನು ಆಚರಣೆಯಲ್ಲಿ ತರಲು ವಿಫಲವಾಗಿರುವುದನ್ನು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮನಗಂಡಿದ್ದರು. ಈ ಕಾರಣಕ್ಕೆ ಸಿರಿಗೆರೆಯ ಮೂಲ ಮಠದಲ್ಲಿಯೇ ಇದ್ದ ತಮ್ಮನ್ನು ಸಾಣೇಹಳ್ಳಿ ಶಾಖಾಮಠಕ್ಕೆ ಕಳಿಸುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದರು’ ಎಂದು ವಿವರಿಸಲಾಗಿದೆ. 

‘ಮಠದ ವಿರೋಧಿಗಳನ್ನು ದೂರವಿಟ್ಟು, ಚರ್ಚಿಸಬೇಕಾದ ವಿಚಾರಗಳನ್ನು ಲಿಖಿತವಾಗಿ ನೀಡಿ, ನಿಗದಿತ ದಿನಾಂಕದಂದು ಮಾತುಕತೆಗೆ ಬನ್ನಿ’ ಎಂಬ ಸ್ಪಷ್ಟ ಸಂದೇಶವನ್ನು ಸಾಣೆಹಳ್ಳಿ ಮಠದ ಅಂಗಳಕ್ಕೆ ತಲುಪಿಸಲಾಗಿದೆ. 

ನಾಟಕೋತ್ಸವಕ್ಕೆ ಇಲ್ಲ: 

ನವದೆಹಲಿ, ಮುಂಬೈ, ಬೃಂದಾವನದಲ್ಲಿ ಪೂರ್ವ ನಿರ್ಧರಿತ ಕಾರ್ಯಕ್ರಮಗಳು ಇರುವುದರಿಂದ ನಾಟಕೋತ್ಸವದಲ್ಲಿ ಭಾಗಿಯಾಗಲು ಶ್ರೀಗಳಿಗೆ ಸಾಧ್ಯವಾಗುತ್ತಿಲ್ಲ. ನಾಟಕೋತ್ಸವ ಹಿಂದಿನ ಎಲ್ಲಾ ವರ್ಷಗಳಂತೆ ಚೆನ್ನಾಗಿ ನಡೆಯಲಿ. ಕಲಾವಿದರು ಮತ್ತು ಕಲಾ ತಂಡಗಳಿಗೆ ಶುಭ ಕೋರುತ್ತೇವೆಂದು ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ತಿಳಿಸಿದ್ದಾರೆ. 

ಪ್ರತಿಕ್ರಿಯೆಗೆ ನಕಾರ: 

ದೂರವಾಣಿ ಮೂಲಕ ಪಂಡಿತಾರಾಧ್ಯ ಶ್ರೀಗಳನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಭಕ್ತರೊಬ್ಬರ ಮೂಲಕ ಕಾರ್ಯದರ್ಶಿಯ ಪತ್ರ ತಲುಪಿದೆ. ಅದಕ್ಕೆ ನಾವು ಈಗ ಪ್ರತಿಕ್ರಿಯಿಸುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.