
ಸಿರಿಗೆರೆ: ವಿದ್ಯಾರ್ಥಿಗಳು ಮೊಬೈಲ್ ಆಟಗಳನ್ನು ಕಡಿಮೆ ಮಾಡಿ, ಕ್ರೀಡಾಂಗಣಕ್ಕೆ ಇಳಿದು ಆಟವಾಗಿ ತಮ್ಮೊಳಗಿನ ಪ್ರತಿಭೆ ಪ್ರದರ್ಶಿಸಬೇಕು ಎಂದು ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು ಹೇಳಿದರು.
ಇಲ್ಲಿನ ಬಿ. ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ತರಳಬಾಳು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿದ್ದ ತರಳಬಾಳು ಕ್ರೀಡಾಮೇಳ, ಕ್ರೀಡಾ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಶರೀರವನ್ನು ಸದೃಢಗೊಳಿಸುವುದರ ಜೊತೆಗೆ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಯೋಗ ಹಾಗೂ ಮಲ್ಲಕಂಬ ಪ್ರದರ್ಶನ ವೀಕ್ಷಿಸಿದಾಗ ಬಾಲ್ಯದ ನೆನಪು ಮರುಕಳಿಸಿದವು. ವಿದ್ಯಾರ್ಥಿಗಳ ಸಾಧನೆ ಅದ್ಭುತ ಎಂದು ಶ್ಲಾಘಿಸಿದರು.
ಅರ್ಜುನ ಪ್ರಶಸ್ತಿ ವಿಜೇತ ಹಾಗೂ ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಹೊನ್ನಪ್ಪ ಗೌಡ ಮಾತನಾಡಿ, ‘ಶಾಲಾ ಮೈದಾನದಲ್ಲಿ ಪಟ್ಟ ಪರಿಶ್ರಮವೇ ರಾಷ್ಟ್ರಮಟ್ಟದ ಸಾಧನೆ ಮಾಡಲು ಕಾರಣವಾಗಿದೆ’ ಎಂದರು.
ಕ್ರೀಡಾ ವಸ್ತುಪ್ರದರ್ಶನ ಹಾಗೂ ಕ್ರೀಡೆಗೆ ಸಂಬಂಧಿಸಿದ ರಂಗೋಲಿ ಪ್ರದರ್ಶನ ನಡೆಯಿತು. ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅಭಿ ಎಲ್.ಹೆಚ್ ಹಾಗೂ ಚಂದನ ಎಲ್.ಕೆ ಕ್ರೀಡಾಜ್ಯೋತಿ ಬೆಳಗಿಸಿದರು.
ವಿದ್ಯಾಸಂಸ್ಥೆಯ ವಿಶೇಷಾಧಿಕಾರಿ ವೀರಣ್ಣ ಎಸ್.ಜತ್ತಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಿದಾನಂದಸ್ವಾಮಿ ಮಾತನಾಡಿದರು. ನಿವೃತ್ತ ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಬಿ.ಎಂ. ಚನ್ನಬಸಪ್ಪ, ಪ್ರಾದೇಶಿಕ ಅಧಿಕಾರಿ ಕೆ.ಇ. ಬಸವರಾಜಪ್ಪ, ಉಮೇಶ್, ಸೋಮಶೇಖರ್ ಇದ್ದರು.
ಪಥ ಸಂಚಲನ ಬಹುಮನ ವಿಜೇತರು: ವಿದ್ಯಾರ್ಥಿನಿಯರ ವಿಭಾಗ: ಶ್ರೀ ತ.ಜ. ನರ್ಸರಿ ಮತ್ತು ಪ್ರೈಮರಿ ಶಾಲೆ, ಸಿರಿಗೆರೆ (ಪ್ರಥಮ), ತರಳಬಾಳು ಅನುಭವ ಮಂಟಪ ಶಾಲೆ, ಚನ್ನಗಿರಿ (ದ್ವಿತೀಯ). ಬಾಲಕರ ವಿಭಾಗ: ಅನುಭವ ಮಂಟಪ, ದಾವಣಗೆರೆ (ಪ್ರಥಮ), ಶ್ರೀ ತ.ಜ. ನರ್ಸರಿ ಮತ್ತು ಪ್ರೈಮರಿ ಶಾಲೆ, ಸಿರಿಗೆರೆ (ದ್ವಿತೀಯ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.