
ಚಿತ್ರದುರ್ಗ: ಹೆಜ್ಜೆ ಹೆಜ್ಜೆಗೂ ಎಡತಾಕುವ ಕಸ. ಕಾಲು ತೊಳೆಯಲು ಸಿಗದ ನೀರು. ಶೌಚಕ್ರಿಯೆ, ಸ್ನಾನ, ವಾಸ್ತವ್ಯಕ್ಕೆ ಒತ್ತಟ್ಟಿಗಿರಲಿ ನೆಮ್ಮದಿಯಾಗಿ ಕೂರಲೂ ಸ್ಥಳದ ಕೊರತೆ... ಇದು ಜಿಲ್ಲೆಯ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಸ್ಥಿತಿ.
ಜಿಲ್ಲೆಯಲ್ಲಿ 100 ದೇವಸ್ಥಾನಗಳು ಇಲಾಖೆ ವ್ಯಾಪ್ತಿಯಲ್ಲಿದ್ದು, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ, ವದ್ದಿಕೆರೆ ಸಿದ್ದೇಶ್ವರಸ್ವಾಮಿ, ಗವಿರಂಗಾಪುರದ ಗವಿರಂಗನಾಥಸ್ವಾಮಿ, ಹಾಲು ರಾಮೇಶ್ವರಸ್ವಾಮಿ, ಚಿತ್ರಲಿಂಗೇಶ್ವರ ಸ್ವಾಮಿ, ಗೌರಸಮುದ್ರ ಮಾರಮ್ಮ ದೇವಿ, ಎಚ್.ಡಿ.ಪುರದ ಲಕ್ಷ್ಮೀ ನರಸಿಂಹ ಸ್ವಾಮಿ, ಹಿರಿಯೂರಿನ ತೇರುಮಲ್ಲೇಶ್ವರ ಸ್ವಾಮಿ ದೇವಸ್ಥಾನಗಳು ಆದಾಯದ ಮೂಲದಲ್ಲಿ ಪ್ರಮುಖವಾಗಿವೆ. ಆದರೆ, ಅಭಿವೃದ್ಧಿ, ಮೂಲ ಸೌಕರ್ಯ ಮಾತ್ರ ನಗಣ್ಯವಾಗಿದೆ.
ನಗರದ ಕೆಳಗೋಟೆಯ ಚನ್ನಕೇಶವ ಸ್ವಾಮಿ ದೇಗುಲ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಶ್ರೀದೇವಿ, ಭೂದೇವಿ ಸಹಿತ ಚನ್ನಕೇಶವ ಸ್ವಾಮಿಯ ಮೂರ್ತಿ ವಿಶೇಷವಾಗಿದ್ದರೂ ಅಭಿವೃದ್ಧಿ ಸಂಪೂರ್ಣ ಮರಿಚೀಕೆಯಾಗಿದೆ. ವಿಶಾಲ ಪ್ರಾಂಗಣದಲ್ಲಿ ಸ್ವಚ್ಛತೆ ದೂರವಾಗಿದ್ದು, ಮಳೆ ಬಂದರೆ ಸಾಕು ಚನ್ನಕೇಶವ ಸ್ವಾಮಿಗೂ ರಕ್ಷಣೆ ಇಲ್ಲದಂತಾಗುತ್ತದೆ.
ದೇವಸ್ಥಾನದ ಕಲ್ಲಿನ ಮಂಟಪವನ್ನು ಆಲದ ಗಿಡ–ಮರಗಳು ಆವರಿಸಿದ್ದು, ಬೇರುಗಳು ಗೋಡೆಗೆ ಇಳಿದಿವೆ. ವರ್ಷಕ್ಕೊಮ್ಮೆ ನಡೆಯುವ ರಥೋತ್ಸವದ ಸಮಯದಲ್ಲಿ ಮಾತ್ರ ಸುಣ್ಣ– ಬಣ್ಣ ಕಾಣುತ್ತದೆ.
ಆವರಣದಲ್ಲಿ ಕಸದ ರಾಶಿ ಕಣ್ಣಿಗೆ ರಾಚುತ್ತದೆ. ಯಾವುದೇ ಆದಾಯದ ಮೂಲ ಇಲ್ಲದಿದ್ದರೂ ದೇವರ ಸೇವೆ ಎಂದು ನಿತ್ಯ ಮುಂಜಾನೆ ತಿಪ್ಪೇಸ್ವಾಮಿ ಎಂಬ ಭಕ್ತರೊಬ್ಬರು ಆವರಣವನ್ನು ಕೈಲಾದ ಮಟ್ಟಿಗೆ ಸ್ವಚ್ಛಗೊಳಿಸುತ್ತಿದ್ದಾರೆ. ಒಳಾಂಗಣವನ್ನು ಅರ್ಚಕರು ಶುಚಿಗೊಳಿಸಿ ಪೂಜೆ ಸಲ್ಲಿಸುವುದು ನಡೆದುಬಂದಿದೆ. ಆದರೆ, ಇಲ್ಲಿ ‘ಎಲ್ಲವೂ ಇರುವಷ್ಟು ದಿನ’ ಎಂಬ ಸ್ಥಿತಿ ಇದೆ.
ಭಕ್ತರಿಗೆ ಕುಡಿಯುವ ನೀರು, ಶೌಚಾಲಯ, ಕಾಲು ತೊಳೆಯಲು ನೀರು ಸಹ ಇಲ್ಲವಾಗಿದೆ. ಇಡೀ ವಾತಾವರಣ ಪಾಳುಬಿದ್ದ ಸ್ಥಿತಿಯಲ್ಲಿದ್ದು, ನಿರ್ಲಕ್ಷ್ಯ ಹಾಗೂ ಇಚ್ಛಾಶಕ್ತಿಯ ಕೊರತೆ ಕಾರಣಕ್ಕೆ ದೇವಸ್ಥಾನ ಕಳೆಗುಂದಿದೆ. ಇನ್ನು ಉತ್ಸವಾಂಬ ದೇವಸ್ಥಾನದ ಸ್ಥಿತಿಯೂ ಭಿನ್ನವಾಗಿಲ್ಲ. ಸುತ್ತಲಿನ ಮಂಟಪ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ.
‘ಮಳೆ ಬಂದರೆ ದೇವಸ್ಥಾನ ಸೋರುತ್ತಿದ್ದು, ಕಳೆ ಗಿಡಗಳು ಮಂಟಪವನ್ನು ಆವರಿಸಿವೆ. ವರ್ಷಕ್ಕೊಮ್ಮೆ ನಡೆಯುವ ಉತ್ಸವದ ದಿನಗಳಲ್ಲಿ ಮಾತ್ರ ಒಂದಿಷ್ಟು ಸಣ್ಣಪುಟ್ಟ ಕೆಲಸ ಆಗುತ್ತಿವೆ. ಶಿಥಿಲಾವಸ್ಥೆಗೆ ತಲುಪಿದ ಮಂಟಪದ ದುರಸ್ತಿ ಕಾರ್ಯಕ್ಕೆ ಶಾಸಕರ ಅಭಿವೃದ್ಧಿ ನಿಧಿಯಿಂದ ₹ 5 ಲಕ್ಷ ಅನುದಾನ ಮಂಜೂರಾಗಿದೆ’ ಎಂದು ಭಕ್ತರಾದ ಎಚ್.ಅಂಜಿನಪ್ಪ ತಿಳಿಸಿದರು.
ಪ್ರತಿ ದೇವಸ್ಥಾನಕ್ಕೂ ಭಕ್ತರೇ ಮಾಡಿಕೊಂಡಿರುವ ಸಮಿತಿ ಕಾರಣಕ್ಕೆ ಕೊಂಚ ಪರಿಸ್ಥಿತಿ ಉಸಿರಾಡುವಂತಿದೆ. ವಿವಿಧ ಮೂಲಗಳಿಂದ ಆದಾಯ ಸಂಗ್ರಹಿಸಿ ಪೂಜಾ ಕಾರ್ಯ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದಾರೆ. ಆದರೆ ಸ್ವಚ್ಛತೆ, ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸುವುದು ಸವಾಲಾಗಿದೆ.
ಮೂಲ ಸೌಲಭ್ಯವಿಲ್ಲದೆ ಭಕ್ತರ ಪರದಾಟ
ಹೊಸದುರ್ಗ: ತಾಲ್ಲೂಕಿನ ಹಾಲುರಾಮೇಶ್ವರ ದಶರಥ ರಾಮೇಶ್ವರ ಗವಿರಂಗಾಪುರ ಸೇರಿದಂತೆ ಹತ್ತಾರು ಪುಣ್ಯ ಕ್ಷೇತ್ರಗಳು ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ ಇಲಾಖೆಗೆ ಸೇರಿವೆ. ಆದರೆ ನಿತ್ಯ ನೂರಾರು ಭಕ್ತರು ಬರುವ ದೇವಸ್ಥಾನಗಳಲ್ಲಿ ಮೂಲ ಸೌಕರ್ಯದ ಕೊರತೆ ಎದುರಾಗಿದೆ. ಹಾಲುರಾಮೇಶ್ವರ ಹಾಗೂ ದಶರಥ ರಾಮೇಶ್ವರ ಕ್ಷೇತ್ರಗಳು ದಟ್ಟಡವಿಯ ಮಧ್ಯದಲ್ಲಿವೆ. ಇತಿಹಾಸದಲ್ಲಿಯೂ ತನ್ನದೇ ಪ್ರಾಮುಖ್ಯ ಪಡೆದುಕೊಂಡಿದೆ. ರಜೆ ದಿನ ಹಾಗೂ ಹಬ್ಬ ಜಾತ್ರೆ ಸಮಯದಲ್ಲಿ ಭಕ್ತರ ಸಾಗರವೇ ಹರಿಯುತ್ತದೆ. ಇಲ್ಲಿನ ಪವಿತ್ರ ಹೊಂಡದಲ್ಲಿ ಸ್ನಾನ ಮಾಡುವುದು ಗಂಗಾಪೂಜೆ ಮಾಡುವುದು ಸಾಮಾನ್ಯವಾಗಿದೆ. ಭಕ್ತರಿಗೆ ಶೌಚಾಲಯ ಕುಡಿಯುವ ನೀರು ಸಾರಿಗೆ ಪಾರ್ಕಿಂಗ್ ವ್ಯವಸ್ಥೆ ಬಟ್ಟೆ ಬದಲಾಯಿಸಲು ಪ್ರತ್ಯೇಕ ಕೊಠಡಿಗಳು ಕಸದ ಬುಟ್ಟಿಗಳು ಸುಸಜ್ಜಿತವಾದ ಆಸನಗಳು ಯಾತ್ರಿ ನಿವಾಸ ಹಾಲುಣಿಸುವ ಕೊಠಡಿಗಳು ಸೇರಿದಂತೆ ಯಾವುದೇ ಸೌಲಭ್ಯಗಳು ದೂರದ ಮಾತಾಗಿವೆ. ಶಿವರಾತ್ರಿ ಹಾಗೂ ನವರಾತ್ರಿಯಲ್ಲಿ ಲಕ್ಷಾಂತರ ಭಕ್ತರು ಬರುವ ಹಾಲುರಾಮೇಶ್ವರ ಕ್ಷೇತ್ರದಲ್ಲಿ ಅಭಿವೃದ್ಧಿ ಆಮೆಗತಿಯಲ್ಲಿದೆ. ದೇವಾಲಯದ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿ 10 ವರ್ಷಗಳಾದರೂ ಪೂರ್ಣಗೊಂಡಿಲ್ಲ. ಮಳೆ ಬಂದರೆ ಪರಿಸ್ಥಿತಿ ಹೇಳ ತೀರದಾಗುತ್ತದೆ. ‘ಹರಕೆ ಸಲ್ಲಿಸುವ ಭಕ್ತರಿಗೆ ಸೂಕ್ತ ವ್ಯವಸ್ಥೆ ಇಲ್ಲವಾಗಿದೆ. ನಿರ್ವಹಣೆ ಕೊರತೆಯಿಂದ ಯಾತ್ರಿ ನಿವಾಸಗಳು ಹಳೆಯದಾಗಿದ್ದು ಬಳಕೆಗೆ ಯೋಗ್ಯವಾಗಿಲ್ಲ. ಅಧಿಕಾರಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ’ ಎಂದು ಭಕ್ತರಾದ ಎಚ್.ವಿ. ಕಾಶೀನಾಥ ಬೇಸರ ವ್ಯಕ್ತಪಡಿಸಿದರು. ಶ್ರೀರಾಂಪುರ ಹೋಬಳಿಯ ಗವಿರಂಗಾಪುರ ದೇವಾಲಯದ ವೈಕುಂಠ ಏಕಾದಶಿಯಂದು ಅಧಿಕ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಆದರೆ ವಾಹನ ನಿಲುಗಡೆ ಶೌಚಾಲಯ ಕುಡಿಯುವ ನೀರಿನ ವ್ಯವಸ್ಥೆ ಕಾಣಸಿಗುವುದಿಲ್ಲ. ದೇವಸ್ಥಾನ ಸಮಿತಿಯವರು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ. ‘ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ಭಕ್ತರು ಈ ದೇವಸ್ಥಾನಕ್ಕೆ ಬರುತ್ತಾರೆ. ಬಳಕೆಗೆ ಯೋಗ್ಯವಲ್ಲದ ಶೌಚಾಲಯಗಳಿವೆ. ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ ಇಲಾಖೆಯು ದೇವಾಲಯದ ಹಣ ಪಡೆಯುತ್ತದೆಯೇ ಹೊರತು ಅಭಿವೃದ್ಧಿಗೆ ಸಹಕರಿಸುತ್ತಿಲ್ಲ’ ಎಂದು ಗವಿರಂಗಾಪುರ ಗ್ರಾಮದ ಭಕ್ತರೊಬ್ಬರು ಬೇಸರ ವ್ಯಕ್ತಪಡಿಸಿದರು. ಹೋಬಳಿಯ ಗುಡ್ಡದನೇರಲಕೆರೆಯ ಬೆಟ್ಟದ ತುದಿಯ ದಶರಥರಾಮೇಶ್ವರ ದೇವಾಲಯದ ಆವರಣದಲ್ಲಿ ಭಕ್ತರೇ ಹಣ ಸಂಗ್ರಹಿಸಿ ಯಾತ್ರಿ ನಿವಾಸ ನಿರ್ಮಿಸಿದ್ದಾರೆ. ಆದರೆ ಇನ್ನೂ 2ರಿಂದ 3 ಯಾತ್ರಿ ನಿವಾಸಗಳ ಅವಶ್ಯಕತೆಯಿದೆ. ದೇವಸ್ಥಾನದ ಆವರಣದಲ್ಲಿ ಉದ್ಯಾನ ನಿರ್ಮಿಸಿದರೆ ದೂರದ ಊರುಗಳಿಂದ ಬರುವ ಭಕ್ತರಿಗೆ ವಿಶ್ರಾಂತಿಗೆ ಮಕ್ಕಳು ಕಾಲಕಳೆಯಲು ಅನುಕೂಲವಾಗಲಿದೆ ಎನ್ನುತ್ತಾರೆ ಭಕ್ತರು. ‘ಇಲಾಖೆಯವರು ಭಕ್ತರು ನೀಡುವ ಕಾಣಿಕೆ ಹಣದಿಂದಲೇ ದೇವಾಲಯ ಅಭಿವೃದ್ಧಿ ಮಾಡಬಹುದು. ಅವರು ನಿರ್ಲಕ್ಷ್ಯ ತೋರದೆ ಮೂಲ ಸೌಕರ್ಯ ಕಲ್ಪಿಸಿದರೆ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ’ ಎನ್ನುತ್ತಾರೆ ದಶರಥರಾಮೇಶ್ವರ ದೇವಾಲಯ ಸಮಿತಿಯ ರವಿಕುಮಾರ್.
ಶೌಚಾಲಯ ದುರಸ್ತಿಗೂ ಕಾಸಿಲ್ಲ!
ಹಿರಿಯೂರು: ‘ದಕ್ಷಿಣ ಕಾಶಿ’ ಎಂದೇ ಕರೆಯಲಾಗುವ ತೇರುಮಲ್ಲೇಶ್ವರಸ್ವಾಮಿ ದೇಗುಲ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ ಇಲಾಖೆಗೆ ಸೇರಿದ್ದು ನೆರೆಯ ಆಂಧ್ರಪ್ರದೇಶ ತಮಿಳುನಾಡು ಸೇರಿ ರಾಜ್ಯದ ವಿವಿಧೆಡೆಯಲ್ಲಿ ಭಕ್ತರಿದ್ದಾರೆ. ಆದರೆ ಇಲಾಖೆಯ ನಿರ್ಲಕ್ಷ್ಯದಿಂದ ಅವ್ಯವಸ್ಥೆಯ ತಾಣವಾಗಿದೆ. ದೇಗುಲದ ಆವರಣದಲ್ಲಿ 10 ವರ್ಷದ ಹಿಂದೆ ಭಕ್ತರು ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದ್ದರು. ಕೆಲವು ತಿಂಗಳು ಮಾತ್ರ ಬಳಕೆಯಾಗಿವೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಆವರಣದ ಕಸವನ್ನು ಮೊದಲು ನಗರಸಭೆಯವರು ಸ್ವಚ್ಛಗೊಳಿಸುತ್ತಿದ್ದರು ಈಚೆಗೆ ಅರ್ಚಕರೇ ಹಣ ಪಾವತಿಸಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ. ‘ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಹಣ್ಣುಕಾಯಿ ಮಾರುವವರಿಂದ ಮಲಿನ ಹೆಚ್ಚಿದೆ. ಹುಂಡಿಯ ದುಡ್ಡು ಎಣಿಸಿ ಒಯ್ಯುವ ಅಧಿಕಾರಿಗಳು ಭಕ್ತರಿಗೆ ಸೌಲಭ್ಯ ಕಲ್ಪಿಸಬೇಕು ಎಂಬುದನ್ನೂ ಯೋಚಿಸುತ್ತಿಲ್ಲ’ ಎಂದು ಬೇಸರಿಸಿದರು ಭಕ್ತ ಮಲ್ಲೇಶ್. ತಾಲ್ಲೂಕಿನ ವದ್ದೀಕೆರೆ ಸಿದ್ದೇಶ್ವರಸ್ವಾಮಿ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದರೂ ನಿರ್ವಹಣೆ ಹೊಣೆ ಹೊತ್ತಿರುವವರು ಇಡೀ ಆವರಣವನ್ನು ನಿತ್ಯ ಸ್ವಚ್ಛಗೊಳಿಸುತ್ತಾರೆ. ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಭಕ್ತರು ಬಾವಿಯ ನೀರಿನಲ್ಲಿ ಸ್ನಾನ ಮಾಡಿ ಸಾಕಷ್ಟು ಗಲೀಜು ಮಾಡಿದರೂ ಮರುದಿನ ಶುಚಿಗೊಳಿಸಲಾಗುತ್ತದೆ. ನಗರದ ಮೈಲಾರ ಲಿಂಗೇಶ್ವರ ದೇವಸ್ಥಾನದ ಸ್ವಚ್ಛತೆಯನ್ನು ಅರ್ಚಕರೇ ನಿರ್ವಹಿಸುತ್ತಿದ್ದಾರೆ. ಸತ್ಯನಾರಾಯಣ ಸ್ವಾಮಿ ದೇಗುಲದ ಮುಂಭಾಗವನ್ನು ಪ್ರಧಾನ ರಸ್ತೆ ವಿಸ್ತರಣೆಗೆ ಒಂದು ವರ್ಷದ ಹಿಂದೆ ಕೆಡವಿದ್ದು ಸರಿಪಡಿಸುವ ಕೆಲಸ ಮಂದಗತಿಯಲ್ಲಿ ನಡೆಯುತ್ತಿದೆ. ‘ದೇವಸ್ಥಾನಗಳ ಆದಾಯ ಪಡೆಯುವ ಸರ್ಕಾರ ಕನಿಷ್ಠ ಸೌಲಭ್ಯಗಳನ್ನಾದರೂ ಒದಗಿಸುವತ್ತ ಗಮನ ಹರಿಸಬೇಕು. ನಿರ್ವಹಣೆ ಮಾಡಲಾಗದಷ್ಟು ಆರ್ಥಿಕ ತೊಂದರೆ ಇದ್ದರೆ ಭಕ್ತರಿಗೆ ಬಿಟ್ಟುಕೊಡಲಿ’ ಎನ್ನುತ್ತಾರೆ ಮಲ್ಲೇಶ್.
ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಸ್ವಚ್ಛತೆ ನಿರ್ವಹಣೆ ವ್ಯವಸ್ಥಿತವಾಗಿ ನಡೆಯುವಂತೆ ಕ್ರಮವಹಿಸಲು ಸೂಚನೆ ನೀಡಲಾಗುತ್ತದೆ. ಈ ವಿಚಾರವಾಗಿ ಶೀಘ್ರ ಅಧಿಕಾರಿಗಳ ಸಭೆ ನಡೆಸಲಾಗುವುದುಟಿ.ವೆಂಕಟೇಶ್, ಜಿಲ್ಲಾಧಿಕಾರಿ
ಇಲಾಖೆ ನಿರ್ಲಕ್ಷ್ಯದಿಂದ ಜಿಲ್ಲೆಯ ಬಹಳಷ್ಟು ದೇವಸ್ಥಾನಗಳು ಶಿಥಿಲಾವಸ್ಥೆ ತಲುಪಿವೆ. ಅದರಲ್ಲೂ ಚನ್ನಕೇಶವ ಸ್ವಾಮಿ ದೇಗುಲದ ಸ್ಥಿತಿ ಆ ದೇವರಿಗೇ ಪ್ರೀತಿ ಎನ್ನುವಂತಾಗಿದೆ. ಕೂಡಲೇ ಕ್ರಮವಹಿಸಿ ಭಕ್ತರಿಗೆ ಸೌಕರ್ಯ ಕಲ್ಪಿಸಬೇಕುಎಚ್.ಅಂಜಿನಪ್ಪ, ಭಕ್ತರು
ಎಚ್.ಅಂಜಿನಪ್ಪ ಭಕ್ತರುQuote - ತಂದೆಯ ನಿಧನದ ಬಳಿಕ ಯಾವುದೇ ಸಹಾಯಧನ ಇಲ್ಲದಿದ್ದರೂ ಚನ್ನಕೇಶವ ಸ್ವಾಮಿ ದೇವಸ್ಥಾನದ ಸ್ವಚ್ಛತಾ ಕಾರ್ಯ ಮಾಡುತ್ತಿದ್ದೇನೆ. ಇಲಾಖೆಯವರು ಇಂತಿಷ್ಟು ನಿಗದಿ ಮಾಡಿದರೆ ಜೀವನಕ್ಕೆ ನೆರವಾಗುತ್ತದೆಎ.ತಿಪ್ಪೇಸ್ವಾಮಿ, ಭಕ್ತ
ಪೂರಕ ಮಾಹಿತಿ: ಎಚ್.ಡಿ.ಸಂತೋಷ್, ಬಿ.ಸುವರ್ಣಾ ಬಸವರಾಜ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.