ADVERTISEMENT

ಜಿಲ್ಲೆಗೂ ಬೇಕಿದೆ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ: ಡಾ.ಎಚ್.ಜೆ. ಬಸವರಾಜ್

ಉಚಿತ ಬಾಯಿ ಕ್ಯಾನ್ಸರ್ ತಪಾಸಣೆ ಶಿಬಿರ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 2:09 IST
Last Updated 5 ಫೆಬ್ರುವರಿ 2021, 2:09 IST
ಕ್ಯಾನ್ಸರ್ ರೋಗದ ಕುರಿತು ಅರಿವು ಮೂಡಿಸುವ ಕಿರುಹೊತ್ತಿಗೆಯನ್ನು ಚಿತ್ರದುರ್ಗದಲ್ಲಿ ಗುರುವಾರ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್‌.ಜೆ. ಬಸವರಾಜ್, ಡಿಎಚ್‌ಒ ಡಾ. ಫಾಲಾಕ್ಷ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ತುಳಸಿ ರಂಗನಾಥ್ ಬಿಡುಗಡೆಗೊಳಿಸಿದರು.
ಕ್ಯಾನ್ಸರ್ ರೋಗದ ಕುರಿತು ಅರಿವು ಮೂಡಿಸುವ ಕಿರುಹೊತ್ತಿಗೆಯನ್ನು ಚಿತ್ರದುರ್ಗದಲ್ಲಿ ಗುರುವಾರ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್‌.ಜೆ. ಬಸವರಾಜ್, ಡಿಎಚ್‌ಒ ಡಾ. ಫಾಲಾಕ್ಷ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ತುಳಸಿ ರಂಗನಾಥ್ ಬಿಡುಗಡೆಗೊಳಿಸಿದರು.   

ಚಿತ್ರದುರ್ಗ: ‘ಜಿಲ್ಲೆಯಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಇಲ್ಲದ ಕಾರಣ ಹೊರ ಜಿಲ್ಲೆಗಳಿಗೆ ರೋಗಿಗಳು ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ಇಲ್ಲಿಯೂ ಒಂದು ಆಧುನಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ತೆರೆಯಬೇಕಾದ ಅಗತ್ಯವಿದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್.ಜೆ. ಬಸವರಾಜ್ ಹೇಳಿದರು.

ಜಿಲ್ಲಾ ಆಸ್ಪತ್ರೆ ಆವರಣದ ಬಿ.ಸಿ. ರಾಯ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಎನ್‌ಸಿಡಿ ಘಟಕದಿಂದ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದ ಅಂಗವಾಗಿ ಗುರುವಾರ ಆಯೋಜಿಸಿದ್ದ ಉಚಿತ ಬಾಯಿ ಕ್ಯಾನ್ಸರ್ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಆಸ್ಪತ್ರೆ ಆವರಣದಲ್ಲೇ ಕೇಂದ್ರ ತೆರೆದು ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂಬ ಉದ್ದೇಶ ಹೊಂದಲಾಗಿದೆ. ಅದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಈ ಸಂಬಂಧ ವೈದ್ಯರನ್ನು ನೇಮಕ ಮಾಡಲು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ತುಳಸಿರಂಗನಾಥ್, ‘ಪ್ರಾಥಮಿಕ ಹಂತದಲ್ಲೇ ಕ್ಯಾನ್ಸರ್ ಗುರುತಿಸಿ, ಚಿಕಿತ್ಸೆ ನೀಡಿದರೆ ಮಾತ್ರ ಅವರನ್ನು ಗುಣಮುಖರನ್ನಾಗಿ ಮಾಡಬಹುದು. ಆದ್ದರಿಂದ ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ’ ಎಂದು ಆಶಾ ಕಾರ್ಯಕರ್ತೆಯರಿಗೆ ಸಲಹೆನೀಡಿದರು.

ADVERTISEMENT

ದೇಶದಲ್ಲಿ ಗಂಟಲು ಕ್ಯಾನ್ಸರ್ ಅತಿ ಹೆಚ್ಚಾಗಿ ಕಂಡುಬರುತ್ತಿದೆ. ಇದರಲ್ಲೂ ಮುಖ್ಯವಾಗಿ ಪುರುಷರಲ್ಲೇ ಹೆಚ್ಚಾಗಿ ಕಂಡುಬರುತ್ತಿದೆ ಎಂದರು.

ಬಸವೇಶ್ವರ ವೈದ್ಯಕೀಯ ಕಾಲೇಜಿನ ಡಾ. ತೇಜಸ್ವಿ, ‘ದೇಶದಲ್ಲಿ ಗಂಟಲು ಕ್ಯಾನ್ಸರ್, ಬಾಯಿ, ಶ್ವಾಸಕೋಶ, ಅನ್ನನಾಳ, ಜಠರ ಕ್ಯಾನ್ಸರ್ ಇವು ಕೆಲ ದುರಭ್ಯಾಸದಿಂದ ಬರುವ ಪ್ರಮಾಣ ಹೆಚ್ಚಿದೆ. ಧೂಮಪಾನ, ಮದ್ಯಪಾನದಂತಹ ದುಶ್ಚಟದಿಂದ ದೂರವಿದ್ದಾಗ ಕ್ಯಾನ್ಸರ್ ಬರುವುದನ್ನು ಕಡಿಮೆ ಮಾಡಬಹುದು’ ಎಂದು ಸಲಹೆ ನೀಡಿದರು.

ಡಿಎಚ್‌ಒ ಡಾ. ಫಾಲಾಕ್ಷ ಮಾತನಾಡಿದರು.

ಎನ್‍ಸಿಡಿ ಅಧಿಕಾರಿಗಳಾದ ಡಾ. ಶ್ವೇತಾ, ಡಾ. ರುದ್ರೇಶ್, ಡಾ. ವೆಂಕಟೇಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಾನಕಿ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಹನುಮಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.