ADVERTISEMENT

ಸಿರಿಗೆರೆ | ಜನಮಾನಸದಲ್ಲಿ ನೆಲೆಗೊಂಡ ಧೀಮಂತ ಸಂತ ಶಿವಕುಮಾರ ಶ್ರೀಗಳು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 6:02 IST
Last Updated 22 ಸೆಪ್ಟೆಂಬರ್ 2025, 6:02 IST
ಶಿವಕುಮಾರ ಶ್ರೀ
ಶಿವಕುಮಾರ ಶ್ರೀ   

ಸಿರಿಗೆರೆ: 12ನೇ ಶತಮಾನದ ಶಿವಶರಣರ ತತ್ವಾದರ್ಶಗಳನ್ನು ತಲೆಯ ಮೇಲೆ ಹೊತ್ತು, ಅವುಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಬಹು ದೊಡ್ಡ ಕೆಲಸ ಮಾಡಿದವರು ಸಿರಿಗೆರೆ ತರಳಬಾಳು ಮಠದ ಶಿವಕುಮಾರ ಶಿವಾಚಾರ್ಯ ಶ್ರೀಗಳು.

ಸ್ವಾತಂತ್ರ್ಯ ಪೂರ್ವದಲ್ಲಿ ತರಳಬಾಳು ಮಠದ ಅಧಿಪತ್ಯ ವಹಿಸಿಕೊಂಡ ಅವರು, ರಾಜ್ಯದೆಲ್ಲೆಡೆ ಸುತ್ತಿ ಜನರಲ್ಲಿನ ಅಜ್ಞಾನ, ಅಂಧಶ್ರದ್ಧೆ, ಮೂಢನಂಬಿಕೆಗಳನ್ನು ತೊಡೆದು ಹಾಕಲು ಯತ್ನಿಸಿದರು.

ಶಿಕ್ಷಣದ ಮೂಲಕ ಸಮಾಜಕ್ಕೆ ಶಕ್ತಿ ನೀಡಬಹುದು ಎಂಬುದನ್ನು ಬಲವಾಗಿ ನಂಬಿದ್ದ ಅವರು 1947ರಲ್ಲಿ ಪ್ರೌಢಶಾಲೆ, ಉಚಿತ ಹಾಸ್ಟೆಲ್‌ ತೆರೆದರು. ಎಲ್ಲ ಜಾತಿಯ ಮಕ್ಕಳು ಒಂದೇ ಕಡೆ ಊಟ ಮಾಡುವಂತೆ, ಒಂದೇ ಸೂರಿನಲ್ಲಿ ವಾಸಿಸುವಂತೆ ಮಾಡಿದ ಛಲಗಾರರಾಗಿದ್ದರು. ಸಹಪಂಕ್ತಿ ಊಟದ ಸಂಕಲ್ಪಕ್ಕೆ ಪ್ರತಿರೋಧ ತೋರಿದ ತಮ್ಮದೇ ಶಿಷ್ಯರಿಗೆ ‘ನಿಮ್ಮ ಮಠ ಬಿಟ್ಟೇನು, ನನ್ನ ಸಿದ್ಧಾಂತ ಬಿಡಲೊಲ್ಲೆ’ ಎಂಬ ಅಚಲ ಮಾತುಗಳಿಂದ ಎಚ್ಚರಿಸಿದ್ದರು. 1962ರಲ್ಲಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದರು. ಈಗ ಸಂಸ್ಥೆಯ ಆಶ್ರಯದಲ್ಲಿ ರಾಜ್ಯದ 14 ಜಿಲ್ಲೆಗಳಲ್ಲಿ 250ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ನಡೆಯುತ್ತಿವೆ.

ADVERTISEMENT

ಇವರು 1914ರ ಬಸವ ಜಯಂತಿಯಂದು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಮುತ್ತುಗದೂರು ಗ್ರಾಮದಲ್ಲಿ ಜನಿಸಿದರು. ಮಹಾದೇವಯ್ಯ ಮತ್ತು ಬಸಮ್ಮ ಎಂಬ ರೈತ ದಂಪತಿಯ ಪುತ್ರ. ಊರಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ನಂತರ ಕಾಶಿಯಲ್ಲಿ ಸಂಸ್ಕೃತಾಭ್ಯಾಸ ಮಾಡಿದರು. ಸಂಸ್ಕೃತದಲ್ಲಿ ಅಪಾರ ಜ್ಞಾನ ಸಂಪಾದಿಸಿದರು. ಅವರು ಓದುತ್ತಿರುವಾಗಲೇ ಸಂಸ್ಕೃತದಲ್ಲಿ ಕಾವ್ಯ ರಚಿಸುವಷ್ಟು ಮೇಧಾವಿತನ ಗಳಿಸಿದ್ದರು.

ಶ್ರೀ ಗುರುಶಾಂತರಾಜ ದೇಶಿಕೇಂದ್ರ ಶ್ರೀಗಳ ಅಕಾಲಿಕ ನಿಧನದ ನಂತರ 1940ರಲ್ಲಿ ತರಳಬಾಳು ಪೀಠಕ್ಕೆ ಪಟ್ಟಾಭಿಷಕ್ತರಾದರು. ಅದಕ್ಕೂ ಪೂರ್ವದಲ್ಲಿ 1933ರಲ್ಲಿ ಯಲಹಂಕ ಮಠದ ಚರಪಟ್ಟಾಧ್ಯಕ್ಷರಾಗಿದ್ದರು. 38 ವರ್ಷಗಳ ಕಾಲ ತರಳಬಾಳು ಪೀಠದಲ್ಲಿದ್ದ ಅವರು ಜಾತಿಮತಗಳ ಭಿನ್ನತೆಯ ಸಂಕೋಲೆಯನ್ನು ಕಳಚಿ ಸಮುದಾಯಗಳ ಆಶೋತ್ತರಗಳನ್ನು ಈಡೇರಿಸಲು ಶ್ರಮಿಸಿದ್ದರು.

ಸಾಮಾಜಿಕ ಏಳಿಗೆಯ ವಿಚಾರ ಬಂದಾಗ ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಳ್ಳುವ ಕಠೋರ ಮನಸ್ಸಿನವರಾಗಿದ್ದರೂ, ಕೋಮಲ ಹೃದಯ ಅವರಲ್ಲಿತ್ತು. ಶಿಷ್ಯ ಸಮುದಾಯಕ್ಕೆ ಅವರೊಬ್ಬ ಸಂತ, ಗುರು, ಮಾರ್ಗದರ್ಶಿ ಹೀಗೆ ಎಲ್ಲವೂ ಆಗಿದ್ದರು. ಶಿಷ್ಯರ ಬೆಳವಣಿಗೆಯಲ್ಲಿಯೇ ತಮ್ಮ ಸುಖ ಮತ್ತು ಸಂತೋಷ ಕಂಡು ಸಂತೃಪ್ತರಾದವರು. 

ಶ್ರೀಗಳ ಪ್ರಭಾವ ಎಲ್ಲಾ ಕ್ಷೇತ್ರಗಳ ಮೇಲೂ ಇತ್ತು. ಶಿಕ್ಷಣ, ಸಮಾಜ, ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಅವರು ತಮ್ಮ ಮೇಧಾವಿತನ ತೋರಿದ್ದರು. ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಘೋಷಿಸಿದ ಸಂದರ್ಭದಲ್ಲಿ ಅದನ್ನು ನೇರವಾಗಿ ವಿರೋಧಿಸಿದ್ದರು. 

ಜನರಿಗೆ ರಾಜಕೀಯ ತಿಳಿವಳಿಕೆಯನ್ನೂ ನೀಡುತ್ತಿದ್ದರು. ಹೀಗಾಗಿ 60–70ರ ದಶಕದ ಬಹುತೇಕ ರಾಜಕಾರಣಿಗಳು ಶ್ರೀಗಳ ಜೊತೆ ಗುರುತಿಸಿಕೊಂಡಿದ್ದರು. ಜಾತಿ, ಮತ, ಧರ್ಮದ ಚೌಕಟ್ಟು ಮೀರಿ ಅವರು ಎಲ್ಲರನ್ನೂ ಅಪ್ಪಿಕೊಂಡಿದ್ದರು. ಶಿವಕುಮಾರ ಶ್ರೀಗಳು 1992ರಲ್ಲಿ ಇಹಲೋಕ ಯಾತ್ರೆ ಮುಗಿಸಿದರು. ಲಿಂಗೈಕ್ಯರಾದ 34 ವರ್ಷಗಳ ನಂತರವೂ ಜನಮಾನಸದಲ್ಲಿ ನೆಲೆಸಿ, ನಂಬಿದವರಿಗೆ ಶಕ್ತಿ ನೀಡುತ್ತಿದ್ದಾರೆ.

ಅವರ ಸಂಸ್ಮರಣೆಗಾಗಿ ಸಿರಿಗೆರೆಯಲ್ಲಿ ಸೆಪ್ಟೆಂಬರ್ 22ರಿಂದ 24ರವರೆಗೆ ಶ್ರದ್ಧಾಂಜಲಿ ಸಮಾರಂಭ ನಡೆಯುತ್ತಿದೆ.

ಶಿವಕುಮಾರ ಶ್ರೀ
ಶಿವಕುಮಾರ ಶ್ರೀ
ಶಿವಕುಮಾರ ಶ್ರೀ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.