ADVERTISEMENT

ಹೊಸದುರ್ಗ: ರಾಗಿ ಖರೀದಿ ಕೇಂದ್ರದ ಅವ್ಯವಸ್ಥೆ

ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 6:22 IST
Last Updated 9 ಜನವರಿ 2021, 6:22 IST
ಹೊಸದುರ್ಗದ ರಾಗಿ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಲು ಶುಕ್ರವಾರ ಸರತಿ ಸಾಲಿನಲ್ಲಿ ನಿಂತಿರುವ ರೈತರು
ಹೊಸದುರ್ಗದ ರಾಗಿ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಲು ಶುಕ್ರವಾರ ಸರತಿ ಸಾಲಿನಲ್ಲಿ ನಿಂತಿರುವ ರೈತರು   

ಹೊಸದುರ್ಗ: ಇಲ್ಲಿನ ಕೃಷಿ ಮಾರುಕಟ್ಟೆ ಆವರಣದಲ್ಲಿ ತೆರೆದಿರುವ ಸರ್ಕಾರದ ಬೆಂಬಲ ಬೆಲೆಯ ರಾಗಿ ಖರೀದಿ ಕೇಂದ್ರದ ಅವ್ಯವಸ್ಥೆ ವಿರುದ್ಧ ತಾಲ್ಲೂಕಿನ ರೈತರು ಶುಕ್ರವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

2020–21ನೇ ಸಾಲಿನ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‌ ರಾಗಿಯನ್ನು ₹ 3,295ಕ್ಕೆ ರೈತರಿಂದ ಖರೀದಿಸಲಾಗುತ್ತಿದೆ. ಕಳೆದ ಡಿ. 15ರಿಂದಲೇ ಇಲ್ಲಿನ ಖರೀದಿ ಕೇಂದ್ರದಲ್ಲಿ ಖಾಸಗಿ ಏಜೆನ್ಸಿಯವರು ರಾಗಿ ಬೆಳೆದಿರುವ ರೈತರ ನೋಂದಣಿ ಮಾಡಿಕೊಂಡಿದ್ದರು. 3,000ಕ್ಕೂ ಹೆಚ್ಚು ರೈತರನ್ನು ಸುಮಾರು 20 ದಿನಗಳ ಕಾಲ ನೋಂದಣಿ ಮಾಡಲಾಗಿತ್ತು. ಆಗ ರೈತರು ತಮ್ಮ ಕೃಷಿ ಚಟುವಟಿಕೆ ಕೈಬಿಟ್ಟು ಇಲ್ಲಿಗೆ ಬಂದು ದಿನವಿಡೀ ಕಾದು ನೋಂದಣಿ ಮಾಡಿಸಿ ಹೋಗಿದ್ದರು.

ಆದರೆ, ಈ ಮೊದಲು ನೋಂದಣಿ ಮಾಡಿಕೊಂಡಿದ್ದು ರದ್ದಾಗಿದೆ. ಹಾಗಾಗಿ ರೈತರು ಮತ್ತೆ ಹೊಸದಾಗಿ ನೋಂದಣಿ ಮಾಡಿಸಬೇಕು ಎಂದು ಖರೀದಿ ಕೇಂದ್ರದವರು ಮೂರು ದಿನಗಳ ಹಿಂದಷ್ಟೇ ಹೇಳಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಶುಕ್ರವಾರ ಬೆಳಿಗ್ಗೆ 7ರಿಂದಲೇ ನೋಂದಣಿಗಾಗಿ ಸಾವಿರಾರು ರೈತರು ಬಂದಿದ್ದರು. ಇದರಿಂದಾಗಿ ಖರೀದಿ ಕೇಂದ್ರದ ಬಳಿ ನೂಕುನುಗ್ಗಲು ಉಂಟಾಯಿತು. ಶಿಸ್ತುಪಾಲನೆಗೆ ಪೊಲೀಸ್‌ ಬಂದೋಬಸ್ತ್‌ ಸಹ ಇರಲಿಲ್ಲ. ಹಲವರು ನಾ ಮುಂದು, ತಾ ಮುಂದು ಎಂದು ಮುಗಿಬೀಳುತ್ತಿದ್ದರು. ಈ ಬಗ್ಗೆ ಕೆಲವರ ನಡುವೆ ವಾಗ್ವಾದ ನಡೆಯಿತು. ಇದರಿಂದಾಗಿ ಕೊರೊನಾ ನಿಯಮ ಪಾಲನೆಯಂತೂ ಸಂಪೂರ್ಣ ವಿಫಲವಾಯಿತು.

ADVERTISEMENT

ಇಂತಹ ಸಮಸ್ಯೆಯ ನಡುವೆಯೂ ಹಲವು ರೈತರು ಬೆಳಿಗ್ಗೆ 8ಕ್ಕೆ ಬಂದವರು ಸಂಜೆ 4 ಗಂಟೆಯಾದರೂ ನೋಂದಣಿ ಮಾಡಿಸಲು ಸಾಧ್ಯವಾಗಲಿಲ್ಲ.

‘ಒಂದೇ ಕೊಠಡಿಯಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಖರೀದಿ ಕೇಂದ್ರದವರು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಎಷ್ಟು ದಿನದವರೆಗೂ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಯಾವಾಗಿನಿಂದ ಖರೀದಿಸುತ್ತಾರೆ ಎಂಬ ಬಗ್ಗೆಯೂ ಸರಿಯಾಗಿ ಹೇಳುತ್ತಿಲ್ಲ. ಮಧ್ಯಾಹ್ನ 2ಕ್ಕೆ ಊಟಕ್ಕೆ ಹೋದವರು 3.30 ಆದರೂ ಬಂದಿಲ್ಲ. ಅವರು ಬಂದ ಬಳಿಕ ವಿದ್ಯುತ್‌ ಸ್ಥಗಿತವಾಯಿತು’ ಎಂದು ರೈತರು ದೂರಿದರು.

‘ಸ್ವಲ್ಪ ಸಮಯದ ನಂತರ ವಿದ್ಯುತ್‌ ಬಂದಿತಾದರೂ ನೂಕುನುಗ್ಗಲು ನೋಡಿದ ಸಿಬ್ಬಂದಿ ತಹಶೀಲ್ದಾರ್‌ ಕಚೇರಿಗೆ ಹೋಗಿಬರುತ್ತೇವೆ ಎಂದು ಹೇಳಿ ಹೋದವವರು ಅರ್ಧತಾಸು ಆದರೂ ಬರಲಿಲ್ಲ. ಇದರಿಂದ ನೋಂದಣಿಗಾಗಿ ರೈತರು ಕೃಷಿ ಕೆಲಸ, ಊಟ, ನೀರು ಬಿಟ್ಟು ದಿನವಿಡೀ ಕಾದು ಕುಳಿತುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಯಿತು. ನಮ್ಮ ಗೋಳು ಕೇಳುವವರು ಯಾರು ಇಲ್ಲದಂತಾಗಿದೆ. ಎರಡೆರಡು ಬಾರಿ ನೋಂದಣಿ ಮಾಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಅವ್ಯವಸ್ಥೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ’ ಎಂದು ರೈತರಾದ ಜಿ.ಆರ್‌.ಸತೀಶ್‌, ಆರ್‌.ರಾಮಲಿಂಗಪ್ಪ,
ರಾಜಪ್ಪ, ಸಿದ್ದೇಶ್‌, ರೇವಣ್ಣ ಸೇರಿ ನೂರಾರು ರೈತರು ಆಕ್ರೋಶ ವ್ಯಕ್ತಪಡಿಸಿದರು.

‘ಮೊದಲು ನೋಂದಣಿ ಮಾಡಿಸಿದವರು ಯಾರೆಂದು ಗೊತ್ತಿಲ್ಲ’

ಮೊದಲು ರಾಗಿ ಖರೀದಿಸಲು ರೈತರ ನೋಂದಣಿ ಮಾಡಿಕೊಂಡಿದ್ದ ಏಜೆನ್ಸಿ ಅಥವಾ ಕಂಪನಿ ಯಾವುದೆಂದು ಗೊತ್ತಿಲ್ಲ. ಈಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯವರು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ನೋಂದಣಿಗೆ ಸರ್ಕಾರ ಕೊನೆಯ ದಿನಾಂಕ ನಿಗದಿ ಇನ್ನೂ ಮಾಡಿಲ್ಲ. ರೈತರಿಗೆ ಸಮಸ್ಯೆ ಆಗದಂತೆ ಜ. 11ರಿಂದ ಎರಡು ಕೌಂಟರ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಖರೀದಿ ಕೇಂದ್ರದ ವ್ಯವಸ್ಥಾಪಕರಿಗೆ ತಿಳಿಸಲಾಗಿದೆ ಎಂದು ತಹಶೀಲ್ದಾರ್‌ ವೈ.ತಿಪ್ಪೇಸ್ವಾಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.