ADVERTISEMENT

50 ಕೆ.ಜಿ ಈರುಳ್ಳಿ ಬ್ಯಾಗ್‌ ದರ ಕನಿಷ್ಠ ₹ 50!

ಪಾತಾಳಕ್ಕೆ ಕುಸಿದ ದರ; ಕಂಗಾಲಾದ ಬೆಳೆಗಾರ

ಎಂ.ಎನ್.ಯೋಗೇಶ್‌
Published 30 ಆಗಸ್ಟ್ 2025, 23:56 IST
Last Updated 30 ಆಗಸ್ಟ್ 2025, 23:56 IST
ಚಳ್ಳಕೆರೆ ತಾಲ್ಲೂಕು ಬಾಲೇನಹಳ್ಳಿ ಗ್ರಾಮದಲ್ಲಿ ಈರುಳ್ಳಿ ಕಟಾವು ಮಾಡಿ ಚೀಲದಲ್ಲಿ ತುಂಬಿರುವುದು
ಚಳ್ಳಕೆರೆ ತಾಲ್ಲೂಕು ಬಾಲೇನಹಳ್ಳಿ ಗ್ರಾಮದಲ್ಲಿ ಈರುಳ್ಳಿ ಕಟಾವು ಮಾಡಿ ಚೀಲದಲ್ಲಿ ತುಂಬಿರುವುದು   

ಚಿತ್ರದುರ್ಗ: ಜಿಲ್ಲೆಯಲ್ಲಿ ಈರುಳ್ಳಿ ಕಟಾವು ನಡೆದಿದ್ದು, ಬೆಲೆ ಕುಸಿತದಿಂದ ಬೆಳೆಗಾರರು ಕಂಗಾಲಾಗಿದ್ದಾರೆ. 50 ಕೆ.ಜಿ ಬ್ಯಾಗ್‌ ₹ 50ರಿಂದ ₹ 500ಕ್ಕೆ ಮಾರಾಟ ಆಗುತ್ತಿದ್ದು, ರೈತರನ್ನು ನಷ್ಟಕ್ಕೆ ದೂಡಿದೆ. 

ಈರುಳ್ಳಿ ಮಧ್ಯ ಕರ್ನಾಟಕ ಭಾಗದ ಪ್ರಮುಖ ವಾಣಿಜ್ಯ ಬೆಳೆ. ಉತ್ತಮ ದರ ದೊರೆತು, ಗಣೇಶ ಹಬ್ಬದ ಸಂಭ್ರಮ ಇಮ್ಮಡಿಗೊಳಿಸುತ್ತದೆ ಎಂಬ ರೈತರ ನಂಬಿಕೆ ದರ ಕುಸಿತದಿಂದಾಗಿ ಹುಸಿಯಾಗಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರತಿ ಬ್ಯಾಗ್‌ಗೆ ₹ 1,600 ರಿಂದ ₹ 3,450ರವರೆಗೆ ದರ ಸಿಕ್ಕಿತ್ತು. ಈ ಬಾರಿ ಪ್ರತಿ ಕೆ.ಜಿ ಕೇವಲ ₹ 1ರಿಂದ ₹ 10ರ ವರೆಗೆ ಮಾರಾಟವಾಗುತ್ತಿದೆ.

ADVERTISEMENT

ಜಿಲ್ಲೆಯಲ್ಲಿ ಈ ಹಂಗಮಿನಲ್ಲಿ 40,000 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದೆ. ಸ್ಥಳೀಯವಾಗಿ ಬೇಡಿಕೆ ತಗ್ಗಿದ್ದು, ರೈತರು ಬಾಡಿಗೆ ವಾಹನದಲ್ಲಿ  ಬೆಂಗಳೂರಿನ ಯಶವಂತಪುರ ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ.  

‘ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ 4 ಕೆ.ಜಿ ಈರುಳ್ಳಿಗೆ ₹ 100 ದರವಿದೆ. ಸೂಪರ್‌ ಮಾರುಕಟ್ಟೆಗಳಲ್ಲಿ ಕೆ.ಜಿ.ಗೆ ₹ 35ರಂತೆ ಮಾರಾಟವಾಗುತ್ತಿದೆ. ಬ್ಯಾಗ್‌ ಈರುಳ್ಳಿ ಬೆಳೆಯಲು ₹ 800 ಖರ್ಚಾಗುತ್ತದೆ. ಸಾಗಣೆ ವೆಚ್ಚ ಸೇರಿ ₹ 1,000 ಕ್ಕಿಂತಲೂ ಹೆಚ್ಚು ಖರ್ಚಾಗುತ್ತದೆ. ಇದರಲ್ಲಿ ಅರ್ಧ ದರವೂ ಸಿಗದಿದ್ದರೆ ಜೀವನ ನಡೆಸುವುದು ಹೇಗೆ?’ ಎಂದು ಚಳ್ಳಕೆರೆ ತಾಲ್ಲೂಕಿನ ಬಾಲೇನಹಳ್ಳಿ ಗ್ರಾಮದ ರೈತ ಸಿದ್ದೇಶ್‌ ನೋವಿನಿಂದ ಪ್ರಶ್ನಿಸಿದರು.

ಮಳೆ ತಂದ ಸಂಕಷ್ಟ: 

ಒಂದು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಟಾವು ಹಂತಕ್ಕೆ ಬಂದಿದ್ದ ಈರುಳ್ಳಿ ಗುಣಮಟ್ಟ ಹಾಳಾಗಿದೆ. ಕಳೆದ ವಾರ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ಈರುಳ್ಳಿ ನಾಶವಾಗಿದೆ.

‘ಮಳೆಯಿಂದಾಗಿ ಸ್ಥಳೀಯ ಈರುಳ್ಳಿಯ ಗುಣಮಟ್ಟ, ಬಣ್ಣ ಹಾಳಾಗಿದೆ. ವರ್ತಕರು ಸ್ಥಳೀಯ ಈರುಳ್ಳಿ ನಿರಾಕರಿಸಿ ಮಹಾರಾಷ್ಟ್ರದಿಂದ ಬಂದಿರುವ ಈರುಳ್ಳಿ ಖರೀದಿಸುತ್ತಿದ್ದಾರೆ. ನಷ್ಟ ನಮ್ಮ ಬೆನ್ನುಹತ್ತಿದೆ’ ಎಂದು ಹೊಸದುರ್ಗ ತಾಲ್ಲೂಕು ಹೊಸಕುಂದೂರಿನ ಜಿ.ಎಚ್‌. ಲೋಕೇಶ್‌ ‘ಪ್ರಜಾವಾಣಿ’ ಅಳಲು ತೋಡಿಕೊಂಡರು.

ಳ್ಳಕೆರೆ ತಾಲ್ಲೂಕು ಬಾಲೇನಹಳ್ಳಿ ಗ್ರಾಮದಲ್ಲಿ ಕಟಾವು ಮಾಡಿದ ಈರುಳ್ಳಿ ಹೆಚ್ಚುತ್ತಿರುವುದು
ಮಾರುಕಟ್ಟೆಗೆ ತೆರಳಲು ಈರುಳ್ಳಿ ಬ್ಯಾಗ್‌ ಸಿದ್ಧಗೊಳಿಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.